Darshan Bail: ಜಾಮೀನು ರದ್ದಾದಾಗ ದರ್ಶನ್ ಹೇಳಿದ್ದು ಅದೊಂದೇ ಮಾತು: ವಿಜಯಲಕ್ಷ್ಮಿ
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಬಂಧನದಲ್ಲಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಮೊದಲಿಗೆ ಜಾಮೀನು ಸಿಕ್ಕಿತ್ತು. ಆರೋಗ್ಯ ಸಮಸ್ಯೆಯಿಂದ ಕೆಲಕಾಲ ವಿಶ್ರಾಂತಿ ಪಡೆದು, ತಮ್ಮ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಇನ್ನೇನು ಸಿನಿಮಾ ರಿಲೀಸ್ ಆಗುವ ಹೊತ್ತಿಗೆ ದರ್ಶನ್ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಸದ್ಯ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ತಮ್ಮ ಜಾಮೀನು ರದ್ದಾದ ವಿಷಯ ತಿಳಿದು ಪತ್ನಿ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಆ ಒಂದು ಮಾತು ಹೇಳಿದ್ದರು. ಅದೇನು ಎಂದು ವಿಜಯಲಕ್ಷ್ಮಿ ಇತ್ತೀಚಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಡಿ ಕಂಪನಿ ಯುಟ್ಯೂಬ್ ಚಾನಲ್‌ಗೆ ವಿಜಯಲಕ್ಷ್ಮಿ ದರ್ಶನ್ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಡೆವಿಲ್ ಸಿನಿಮಾ, ದರ್ಶನ್ ಅವರ ಪ್ರಕರಣ, ಡಿಬಾಸ್ ಅಭಿಮಾನಿಗಳ ಮೇಲಿನ ಆರೋಪಗಳು ಸೇರಿದಂತೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾದಾಗ ದರ್ಶನ್ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.

'ದರ್ಶನ್‌ಗೆ ಜಾಮೀನು ರದ್ದಾಗುತ್ತೆ ಎನ್ನುವ ಅಂದಾಜು ಕೂಡ ಇರಲಿಲ್ಲ. ಆ ದಿನ ದರ್ಶನ್ ಊರಲ್ಲಿ ಇರಲಿಲ್ಲ, ಕುದುರೆ ವಿಚಾರವಾಗಿ ತಮಿಳುನಾಡಿಗೆ ಹೋಗಿದ್ರು. ನಾನು ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ನೀಡುವ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದೆ. ದರ್ಶನ್‌ಗೆ ಜಾಮೀನು ರದ್ದು ಎಂದು ತೀರ್ಪು ಬಂದ ತಕ್ಷಣ ತುಂಬಾ ಬೇಜಾರಾಯ್ತು. ಆ ವಿಚಾರವನ್ನು ದರ್ಶನ್‌ಗೆ ಹೇಗೆ ತಿಳಿಸೋದು ಅಂತ ಒದ್ದಾಡಿದೆ. ತೀರ್ಪು ಬಂದ 15 ನಿಮಿಷಗಳ ಕಾಲ ನಾನು ದರ್ಶನ್‌ಗೆ ಫೋನ್ ಮಾಡಲೇ ಇಲ್ಲ' ಎಂದಿದ್ದಾರೆ ವಿಜಯಲಕ್ಷ್ಮಿ.
'ಕೈಯಲ್ಲಿ ಫೋನ್ ಹಿಡಿದುಕೊಂಡು, ಈ ವಿಷಯ ಹೇಗೆ ಹೇಳೋದು ಅಂತ ಯೋಚನೆ ಮಾಡ್ತಿದ್ದೆ. ದರ್ಶನ್ ಕೂಡ ಅದೇ ಟೆನ್ಷನ್‌ನಲ್ಲಿ ಇದ್ದರು. ಈ ಕೇಸ್ ಸುಪ್ರೀಂಕೋರ್ಟ್‌ಗೆ ಬಂದಾಗಿನಿಂದಲೂ ಅವರು ಈ ಯೋಚನೆಯಲ್ಲೇ ಇರುತ್ತಿದ್ರು. ಅವರು ಅದನ್ನ ಹೊರಗೆ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅದು ನನಗೆ ಕಾಣುತ್ತಿತ್ತು. ತುಂಬಾ ಸಲ ಅವರು ಸುಮ್ಮನೆ ಆಗಿಬಿಡುತ್ತಿದ್ರು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ರೂಮಲ್ಲಿ ಒಬ್ಬರೇ ಇರುತ್ತಿದ್ರು. ನಾವು ಬೇಕಂತಲೇ ಹೋಗಿ ಕಾಮಿಡಿ ಎಲ್ಲ ಮಾಡ್ತಿದ್ವಿ. ಅದಕ್ಕೆ ದರ್ಶನ್ ರಿಯಾಕ್ಟ್ ಮಾಡುತ್ತಿರಲಿಲ್ಲ. ತುಂಬಾ ಸೈಲೆಂಟ್ ಆಗಿಬಿಡುತ್ತಿದ್ರು' ಎಂದು ಹೇಳಿದ್ದಾರೆ.
'ಬ್ಯಾಗ್ ರೆಡಿ ಮಾಡು, ಬರ್ತಿದ್ದೀನಿ'
'ಕೊನೆಗೆ ದರ್ಶನ್‌ಗೆ ಇನ್ಯಾರೋ ಫೋನ್ ಮಾಡಿ ಬೇಲ್ ವಿಚಾರ ಹೇಳುವ ಬದಲು ನಾನೇ ಹೇಳುವುದು ಒಳ್ಳೆಯದು ಅಂತ ಫೋನ್ ಮಾಡಿದೆ. ಏನಾಯ್ತು ವಿಜಿ ಅಂದ್ರು? ಆಗ ನಾನು ಬೇಲ್ ಕ್ಯಾನ್ಸಲ್ ಆಯ್ತು ಅಂದೆ. ಆಗ ಅವರ ಬಾಯಿಂದ ಒಂದು ಪದ ಬರಲಿಲ್ಲ. ಒಂದು ನಿಮಿಷ ಮೌನವಾಗಿದ್ರು. ನಂತರ ಹೌದಾ, ಆಯ್ತು ಬಿಡು, ಬ್ಯಾಗ್ ರೆಡಿ ಮಾಡು ಬರ್ತಾ ಇದ್ದೀನಿ ಅಂದ್ರು. ನೀನು ಹುಷಾರು, ಸ್ಟ್ರಾಂಗ್ ಆಗಿ ಇರು, ಅಳುತ್ತಾ ಕೂರಬೇಡ, ವಿನೀಶ್‌ನ ಚೆನ್ನಾಗಿ ನೋಡ್ಕೋ, ನಾನು ಬರೋಕೆ ಮೂರು ಗಂಟೆ ಸಮಯ ಹಿಡಿಯುತ್ತೆ. ಅಲ್ಲಿಗೆ ಬಂದು ತಕ್ಷಣ ಹೊರಡುತ್ತೀನಿ, ಮನೇದು ಏನೇನಿದೆಯೋ ನೋಡಿಕೋ, ನೀನು ಹುಷಾರು ಅಂದ್ರು...' ಎಂದು ಆ ದಿನ ನಡೆದಿದ್ದನ್ನು ವಿಜಯಲಕ್ಷ್ಮಿ ಬಿಚ್ಚಿಟ್ಟಿದ್ದಾರೆ.












Click it and Unblock the Notifications