Sharanya Shetty: ಶರಣ್ಯ ಶೆಟ್ಟಿ ಹೆಸರಿನಲ್ಲಿ ಭಾರೀ ವಂಚನೆ: ಎಚ್ಚರಿಕೆ ಕೊಟ್ಟ ನಟಿ
ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರ ಜಾಲ ಎಲ್ಲೆಡೆ ವ್ಯಾಪಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವಂಚನೆ, ಆನ್‌ಲೈನ್ ಕರೆ ಮತ್ತು ಲಿಂಕ್ ವಂಚನೆ, ಡಿಜಿಟಲ್ ಅರೆಸ್ಟ್, ಹೀಗೆ ದಿನಕ್ಕೊಂದು ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇದೆ. ಪೊಲೀಸರು ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಸೈಬರ್ ವಂಚನೆಗೆ ಒಳಗಾಗುವವರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಈ ವಂಚನೆಗೆ ಹೊರತಾಗಿಲ್ಲ.
ಇದೀಗ ಸೆಲೆಬ್ರೆಟಿಗಳ ಹೆಸರನ್ನು ಬಳಸಿಕೊಂಡು ವಂಚನೆ ಮಾಡುವ ಸೈಬರ್ ವಂಚಕರ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ಶರಣ್ಯ ಶೆಟ್ಟಿ ಹೆಸರಿನಲ್ಲೇ ವಂಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ವುಡ್ನ ನಟಿ ಶರಣ್ಯ ಶೆಟ್ಟಿಯ ಹೆಸರು ಹಾಗೂ ಫೋಟೋವನ್ನು ಬಳಸಿಕೊಂಡು ವಂಚನೆ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ನಂಬರ್ ಪಡೆಯುವ ವಂಚಕರು ನಕಲಿ ನಂಬರ್ ಬಳಸಿ ವಾಟ್ಸಪ್ ಮೆಸೇಜ್‌ಗಳನ್ನು ಮಾಡುತ್ತಾರೆ. ಈ ನಂಬರ್ ವಾಟ್ಸಪ್ ಖಾತೆಯ ಡಿಪಿಗೆ ನಟಿ ಶರಣ್ಯ ಶೆಟ್ಟಿ ಫೋಟೋವನ್ನೇ ಹಾಕಲಾಗಿದೆ. ಅಲ್ಲದೇ ಹೆಸರನ್ನು ಕೂಡ ಶರಣ್ಯ ಶೆಟ್ಟಿ ಎಂದೇ ಬರೆಯಲಾಗಿದೆ. ಈ ಮೂಲಕ ಸ್ವತಃ ನಟಿಯೇ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ ಎಂದು ನಂಬಿಸಿ, ವಂಚಕರು ಕೊಲಾಬರೇಷನ್ ಹೆಸರಿನಲ್ಲಿ ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದಾರೆ. ತಕ್ಷಣವೇ ಹಣ ಕೊಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಟಿ ಶರಣ್ಯ ಶೆಟ್ಟಿ ಗಮನಕ್ಕೆ ಬಂದಿದ್ದು, ಕೂಡಲೇ ಅವರು ವಂಚಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಲ್ಲದೇ ಇತ್ತ ತಮ್ಮ ಅಭಿಮಾನಿಗಳು ಮೋಸ ಹೋಗದಂತೆ ಎಚ್ಚರ ವಹಿಸಿರುವ ನಟಿ ಶರಣ್ಯ ಶೆಟ್ಟಿ, ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ರೀತಿ ತಮ್ಮ ಹೆಸರಿನಲ್ಲಿ ವಂಚಕರು ವಂಚಿಸುತ್ತಿದ್ದು, ಯಾರೂ ಈ ಮೋಸದ ಜಾಲಕ್ಕೆ ಬೀಳಬೇಡಿ. ಇಂತಹ ವಂಚನೆಗಳಿಂದ ದೂರ ಇರಿ. ನಾನು ಕೂಡ ಈ ಬಗ್ಗೆ ಈಗಾಗಲೇ ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.













Click it and Unblock the Notifications