Darshan Thoogudeepa: ಕಾಟೇರ ರಿಲೀಸ್ ಆಗಿ ಇಂದಿಗೆ ಒಂದು ವರ್ಷ, ಹಬ್ಬ ಮಾಡಿದ ದರ್ಶನ್ ಫ್ಯಾನ್ಸ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಕಾಟೇರ ಸಿನಿಮಾ ಇಂದು ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಡಿಸೆಂಬರ್ 29ರಂದು ಕಾಟೇರ ಸಿನಿಮಾ ತೆರೆಕಂಡಿತ್ತು. ಈ ಹಿನ್ನೆಲೆ ದರ್ಶನ್ ಅಭಿಮಾನಿಗಳು ಈ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟರ್ ಹಂಚಿಕೊಂಡು ಖುಷ್ ಆಗಿದ್ದಾರೆ.
ಸಿನಿಮಾ ರಿಲೀಸ್ ಆದಾಗ ದರ್ಶನ್ ಅವರು ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ನಾನು Speechless ಎಂದು ದರ್ಶನ್ ಅವರು ಮಾಡಿದ್ದ ಟ್ವೀಟ್ ಅನ್ನು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

ಈ ಸಿನಿಮಾ ನಿರ್ದೇಶಿಸಿದ್ದ ತರುಣ್ ಸುಧೀರ್ ಕೂಡ ಟ್ವೀಟ್ ಮೂಲಕ ಕಾಟೇರನ ವಾರ್ಷಿಕೋತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನಮ್ಮ ಕಾಟೇರ ಚಿತ್ರಕ್ಕೆ ಇಂದು ಒಂದು ವರ್ಷದ ಸಂಭ್ರಮ! ಈ ನಮ್ಮ ಕನಸಿಗೆ ಕೈ ಜೋಡಿಸಿ ಬೆಂಬಲ ನೀಡಿರುವ ಪ್ರೀತಿಯ ಡಿಬಾಸ್ ದರ್ಶನ್ ಅವರಿಗೆ, ರಾಕ್‌ಲೈನ್ ಅವರಿಗೆ ಹಾಗೂ ಇಡೀ ತಂಡಕ್ಕೆ ನಾನು ಸದಾ ಆಭಾರಿ ಎಂದಿದ್ದಾರೆ. ನಮ್ಮ ಯಶಸ್ಸಿನ ಹಿಂದಿನ ನಿಜವಾದ ಪ್ರೇರಕ ಶಕ್ತಿ, ಅಚಲ ಬೆಂಬಲಕ್ಕಾಗಿ ನಮ್ಮ ಎಲ್ಲ ಅದ್ಭುತ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು ಎಂದು ತರುಣ್ ಹೇಳಿದ್ದಾರೆ.
ಸದ್ಯ ಈ ಸಿನಿಮಾ ನಂತರ ದರ್ಶನ್ ಅವರ ಯಾವುದೇ ಸಿನಿಮಾಗಳು ರಿಲೀಸ್ ಆಗಲಿಲ್ಲ. ಎಲ್ಲ ನಿಗದಿಯಾದಂತೆ ಆಗಿದ್ದರೆ ಈ ಹೊತ್ತಿಗೆ ಡೆವಿಲ್ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ದಿಢೀರ್ ಬಂಧನವಾದ ಹಿನ್ನೆಲೆ ಶೂಟಿಂಗ್ ನಿಂತಿತ್ತು. ಈ ವರ್ಷ ಅವರು ಜೈಲುವಾಸದಲ್ಲೇ ಇದ್ದಿದ್ದರಿಂದ ಅವರ ಯಾವ ಸಿನಿಮಾಗಳು ಕೂಡ ಸೆಟ್ಟೇರಲಿಲ್ಲ.
ಇನ್ನು ಈ ಕೊಲೆ ಕೇಸ್‌ನಲ್ಲಿ ಇತ್ತೀಚೆಗೆ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಅಲ್ಲದೆ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಇರುವುದರಿಂದ ಸದ್ಯಕ್ಕೆ ಅವರು ಸಿನಿಮಾಗಳಲ್ಲಿ ತೊಡಗುವುದು ಅನುಮಾನ. ಅಲ್ಲದೆ ರೇಣುಕಾಸ್ವಾಮಿ ಕೊಲೆ ಕೇಸ್ ಕೂಡ ತನಿಖೆ ನಡೆದಿದ್ದು, ಕೋರ್ಟ್‌ನಿಂದ ಇನ್ನೂ ಅಂತಿಮ ತೀರ್ಪು ಪ್ರಕಟವಾಗಿಲ್ಲ.

ಸದ್ಯ ದರ್ಶನ್ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತ ದರ್ಶನ್ ಅವರ ಅಭಿಮಾನಿಗಳು ಡಿಬಾಸ್ ಸಿನಿಮಾಗಳಿಲ್ಲದೆ ಬೇಸರದಲ್ಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಶೂಟಿಂಗ್‌ಗಳಲ್ಲಿ ಭಾಗವಹಿಸುವುದಿಲ್ಲ. ಅವರಿಗೆ ಕಾಲಿನ ಸಮಸ್ಯೆ ಕೂಡ ಇದ್ದು, ಅವರ ಆರೋಗ್ಯ ಸುಧಾರಿಸದರಷ್ಟೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ದರ್ಶನ್ ಅವರ ಸಿನಿಮಾಗಳ ಸಹೋದರ ದಿನಕರ್ ಅವರು ಕೂಡ ಅಪ್‌ಡೇಟ್ ನೀಡಿದ್ದಾರೆ. ಮೊದಲು ದರ್ಶನ್ ಅವರ ಆರೋಗ್ಯ ಸುಧಾರಿಸಬೇಕು. ದರ್ಶನ್ ಅವರಿಗೆ ನಾನು ಸಿನಿಮಾ ಮಾಡುವುದು ಪಕ್ಕಾ. ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಅಥವಾ 2026ರಲ್ಲಿ ದರ್ಶನ್‌ಗೆ ಸಿನಿಮಾ ಮಾಡ್ತೀನಿ ಎಂದು ದಿನಕರ್ ಹೇಳಿದ್ದಾರೆ.












Click it and Unblock the Notifications