CCL 2025: ಕರ್ನಾಟಕ ಬುಲ್ಡೋಜರ್ಸ್ ಪಡೆಗೆ ಮುಂದಿನ ಎದುರಾಳಿ ಯಾರು? ಪಂದ್ಯದ ಮಾಹಿತಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2025ರ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಧಿಸಿರುವ ಕರ್ನಾಟಕ ಬುಲ್ಡೋಜರ್ಸ್ ಇದೀಗ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಬಲಿಷ್ಟ ತೆಲುಗು ವಾರಿಯರ್ಸ್ ವಿರುದ್ಧ ಜಯಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಡಾರ್ಲಿಂಗ್ ಕೃಷ್ಣ 39 ಎಸೆತಗಳಲ್ಲಿ 80 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಕರಣ್ ಆರ್ಯನ್ ಮತ್ತು ರಾಜೀವ್ ಹನು ಅವರ ಬ್ಯಾಟಿಂಗ್, ಚಂದನ್ ಕುಮಾರ್, ಮಂಜುನಾಥ್ ಗೌಡ, ಗೋಲ್ಡನ್ ಸ್ಟಾರ್ ಗಣೇಶ್‌ರ ಮಾರಕ ಬೌಲಿಂಗ್‌ನಿಂದ ಕರ್ನಾಟಕ ಬುಲ್ಡೋಜರ್ಸ್ 46 ರನ್‌ಗಳಿಂದ ಗೆಲುವು ಸಾಧಿಸಿತ್ತು.

ನಾಯಕ ಕಿಚ್ಚ ಸುದೀಪ್ ಕೂಡ 9 ಎಸೆತಗಳಲ್ಲಿ 14 ರನ್ ಗಳಿಸಿ ಮೈದಾನದಲ್ಲಿದ್ದ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ ಕಾಲು ನೋವಿನಿಂದ ಬಳಲುತ್ತಿದ್ದ ಕಾರಣ ರಿಟೈರ್ಡ್ ಹರ್ಟ್ ಆಗಿದ್ದರು.
ಚೆನ್ನೈ ರ್‍ಹಿನೋಸ್ ವಿರುದ್ಧ ಪಂದ್ಯ
ಕರ್ನಾಟಕ ಬುಲ್ಡೋಜರ್ಸ್ ಮುಂದಿನ ಪಂದ್ಯದಲ್ಲಿ ಚೆನ್ನೈ ರ್‍ಹಿನೋಸ್ ತಂಡವನ್ನು ಎದುರಿಸಲಿದೆ. ಫೆಬ್ರವರಿ 14 ರಂದು ಈ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.
ಪಂದ್ಯದ ಸಮಯ, ದಿನಾಂಕ
ಫೆಬ್ರವರಿ 14 ರಂದು, ಶುಕ್ರವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕರ್ನಾಟಕ ಬುಲ್ಡೋಜರ್ಸ್ ವಿಶ್ವಾಸದಿಂದಲೇ ಚೆನ್ನೈ ರ್‍ಹಿನೋಸ್ ವಿರುದ್ಧ ಕಣಕ್ಕಿಳಿಯಲಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಬೆಂಗಳೂರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋತಿರುವ ಚೆನ್ನೈ ರ್‍ಹಿನೋಸ್ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಸೋನಿ ಸ್ಪೋರ್ಟ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಈ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು.
ಕರ್ನಾಟಕ ಬುಲ್ಡೋಜರ್ಸ್ ತಂಡ
ಕಿಚ್ಚ ಸುದೀಪ್ (ನಾಯಕ), ರಾಜೀವ್ ಹನು, ಮಂಜುನಾಥ್ ಗೌಡ, ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್, ಅನೂಪ್ ಭಂಡಾರಿ, ಚಂದನ್ ಕುಮಾರ್, ಕರಣ್ ಆರ್ಯನ್, ಕಾರ್ತಿಕ್ ಜಯರಾಮ್, ಸುನೀಲ್ ರಾವ್, ಸಾಗರ್ ಗೌಡ.












Click it and Unblock the Notifications