ನಾನು ಗಂಡ್ಸಲ್ಲ ಅಂತಾರೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಕಾಮಿಡಿ ಪ್ರಶಾಂತ್
ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳನ್ನ ಮಾಡಿಕೊಂಡೇ ಫೇಮಸ್ ಆಗಿದ್ದ ಪ್ರಶಾಂತ್ ರಿಯಾಲಿಟಿ ಶೋಗಳಲ್ಲೂ ಮಿಂಚುತ್ತಾ ಎಲ್ಲರನ್ನೂ ಹೊಟ್ಟೆಹುಣ್ಣಾಗಿಸುವಂತೆ ನಗಿಸುವುದರಲ್ಲಿ ನಿಪುಣರು. ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಪ್ರಶಾಂತ್ ಕೂಡ ಇದ್ದಾರೆ. ಸದಾ ನಗುವಿನ ಒಡೆಯನಂತಿದ್ದ ಅವರು ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಪ್ರಶಾಂತ್ ಗಂಡಸ್ತನದ ಬಗ್ಗೆ ಅಪಹಾಸ್ಯ ಮಾಡುವವರ ಬಗ್ಗೆ ನೆನೆದು ವೇದಿಕೆಯಲ್ಲೇ ಗಳಗಳನೆ ಅತ್ತಿದ್ದಾರೆ.
ಪ್ರಶಾಂತ್ ಅವರು ಸದಾ ಎಲ್ಲರನ್ನೂ ನಗಿಸುವ ಕಾಮಿಡಿ ಕಿಲಾಡಿ. ಹಾಗಾಗಿ ಅವರನ್ನು ಎಲ್ಲರೂ ಕಾಲೆಳೆಯುವುದು ಕಾಮನ್. ಆದರೆ ಎಲ್ಲದಕ್ಕೂ ಇತಿ ಮಿತಿ ಅನ್ನೋದು ಇರಬೇಕಲ್ಲಾ ಎಂದು ಪ್ರಶಾಂತ್ ಕೋಪಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಬೆರಕೆ ಪ್ರಶಾಂತ್, ಗಂಡ್ಸಲ್ಲ, ಹೆಂಗಸಲ್ಲ ಎಂದೆಲ್ಲ ಅವರನ್ನು ತಮಾಷೆಯಾಗಿ ಕಾಲೆಳೆಯಲಾಗುತ್ತಿತ್ತು. ಈ ವಿಚಾರವನ್ನು ಉಲ್ಲೇಖಿಸಿರುವ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಇದು ಎಕ್ಸ್‌ಟ್ರೀಮ್ ಆಯ್ತು ಎನ್ನುವ ಮೂಲಕ ಕಣ್ಣೀರು ಸುರಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಪ್ರಶಾಂತ್ ಇತ್ತೀಚೆಗೆ ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಸೀಮಂತ ಕೂಡ ಮಾಡಲಾಗಿತ್ತು. ಮುಂದುವರಿದಂತೆ ಈಗ ಪ್ರಶಾಂತ್‌ಗೆ ಮಗು ಆಗಿದೆ ಎಂದು ಅನುಪಮಾ ಗೌಡ ಒಂದು ಗೊಂಬೆ ತಂದರು. ಮಗು ತಾಯಿಯನ್ನ ಮಿಸ್ ಮಾಡಿಕೊಳ್ತಿದೆ, ಕೆಲ ವಾರಗಳ ಹಿಂದಷ್ಟೇ ನಮ್ಮ ವೇದಿಕೆಯಲ್ಲಿ ಗರ್ಭಿಣಿಯ ಸೀಮಂತ ನಡೆದು ಕಳೆದ ವಾರ ಗಂಡು ಮಗು ಜನಿಸಿತ್ತು ಎಂದು ಅನುಪಮಾ ಗೌಡ ಹೇಳಿದ್ದರು.
ಇದಕ್ಕೆ ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ ಪ್ರಶಾಂತ್ ಒಂದು ಸಲ ಸರಿ, ಎರಡು ಸಲ ಸರಿ, ಪ್ರತಿ ಬಾರಿಯೂ ಅದನ್ನೇ ಮಾಡಿದರೆ ನನಗೂ ಬೇಜಾರಾಗುತ್ತೆ. ನಮ್ಮನೆ ಹೊರಗೆಲ್ಲ ಅದನ್ನೇ ಮಾತನಾಡಿಕೊಳ್ತಾರೆ. ಪ್ರಶಾಂತ್ ಗಂಡ್ಸಲ್ಲ ಅನ್ನೋದು ಪ್ರತಿ ಬಾರಿ ಮಾಡಿದ್ರೆ ಸರಿಯಲ್ಲ. ಇದನ್ನ ಇಲ್ಲಿಗೇ ನಿಲ್ಲಿಸಿದ್ರೆ ಒಳ್ಳೇದು ಎನ್ನುವುದು ನನ್ನ ಅನಿಸಿಕೆ ಎಂದಿದ್ದಾರೆ. ಇದಕ್ಕೆ ಅಲ್ಲಿದ್ದವರೆಲ್ಲರೂ ಶಾಕ್ ಆಗಿದ್ದಾರೆ. ಇದೆಲ್ಲಾ ತಮಾಷೆಗೆ ಮಾಡೋದಲ್ವಾ ಎಂದು ಅನುಪಮಾ ಗೌಡ ಕೇಳಿದ್ದಾರೆ.
ಮೊದಲು ಸೀಮಂತ ಮಾಡಿಸಿಕೊಂಡೆ, ಮಗು ಎಲ್ಲ ಯಾಕ್ ಬೇಕು? ಇದೆಲ್ಲ ಅತಿ ಆಯ್ತಲ್ವಾ? ಕಂಟೆಂಟ್‌ಗಾಗಿ ನಮ್ಮನ್ನ ನಾವೇ ಏನೇನೋ ಅನಿಸಿಕೊಳ್ಳೋಕೆ ಆಗಲ್ಲ ಎಂದು ಬೇಸರ ಹಂಚಿಕೊಂಡ್ರು. ಪ್ರತಿ ಬಾರಿ ಗಂಡ್ಸಲ್ಲ, ಗಂಡ್ಸಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡ್ತಾರೆ, ಗಂಡ್ಸಲ್ಲ ಅಂದಾಗ ನೋವಾಗುತ್ತೆ ಎಂದು ಪ್ರಶಾಂತ್ ಕಣ್ಣೀರು ಸುರಿಸಿದರು. ಅದನ್ನ ಕಂಡ ಸ್ಪರ್ಧಿಗಳೆಲ್ಲ ಇನ್ಮುಂದೆ ಹಾಗೆಲ್ಲ ಮಾಡೋಲ್ಲ ಎಂದು ಕ್ಷಮೆ ಕೇಳಿದ್ರು. ಅನುಪಮಾ ಗೌಡ ಕೂಡ ಕ್ಷಮೆ ಕೇಳಿದ್ರು.
ಪ್ರಾಂಕ್ ಮಾಡಿ ಮತ್ತೆ ಬಕ್ರಾ ಆದ ಪ್ರಶಾಂತ್
ಪ್ರಶಾಂತ್ ಮಾತಿನಿಂದ ಎಲ್ಲರೂ ಸೀರಿಯಸ್ ಆಗಿದ್ದರು. ಆದರೆ ಪ್ರಶಾಂತ್ ಮಾಡಿದ್ದು ಪ್ರಾಂಕ್ ಎಂದು ಮತ್ತೆ ಹಳೆಯ ಅವತಾರ ಎತ್ತಿದರು. ಮಗುಗೆ ಏನು ಹೆಸರಿಡಬೇಕೋ ಇಡಿ ಎಂದು ಪ್ರಶಾಂತ್ ನಗುತ್ತಾ ತಮ್ಮದೇ ಸ್ಟೈಲಲ್ಲಿ ಕಾಗೆ ಹಾರಿಸಿದ್ರು. ಕೊನೆಗೆ ನಾನು ಮಾಡಿದ್ದೆಲ್ಲ ಪ್ರಾಂಕ್ ಎಂದಿದ್ದಾರೆ. ಆದರೆ ಅನುಪಮಾ ಗೌಡ ಅವರ ಕೋಪ ತಣ್ಣಗಾಗಲಿಲ್ಲ. ಈ ರೀತಿಯ ಕಂಟೆಂಟ್ ನಾನು ಮಾಡಲ್ಲ, ನಾವು ಮಾಡಿದ್ದು ತಮಾಷೆಗೇ ಹೊರತು ನಿಮ್ಮ ಗಂಡಸ್ತನ ಪ್ರಶ್ನಿಸುವ ಹಕ್ಕು ನಮಗಿಲ್ಲ ಎಂದು ಗರಂ ಆದರು. ಪ್ರಶಾಂತ್ ಮತ್ತೆ ಅನುಪಮಾ ಅವರನ್ನು ಸಮಾಧಾನ ಪಡಿಸಲು ಹೋಗಿದ್ದಕ್ಕೆ ನೀನು ಹೀಗೆ ಮಾತಾಡುತ್ತಿದ್ದರೆ ನಾನು ಶೋನಿಂದ ಹೊರಹೋಗ್ತೀನಿ ಅಂದ್ರು. ಕೊನೆಗೆ ಆ ಮಗುನಾ ತರಿಸಿ ಹೆಸರಿಡೋಣ ಎಂದ ಅನುಪಮಾ ಮತ್ತೆ ಪ್ರಶಾಂತ್‌ಗೆ ನೀವು ಗಂಡ್ಸಾ ಎಂದು ಕಾಲೆಳೆದಿದ್ದಾರೆ. ಇದರಿಂದ ಪ್ರಶಾಂತ್ ಮತ್ತೆ ಬಕ್ರಾ ಆಗಿದ್ದಾರೆ.












Click it and Unblock the Notifications