ನನ್ನ ಹೆಸರಲ್ಲಿ ದೇವಸ್ಥಾನವಿದೆ, ಜನ ಪೂಜಿಸ್ತಾರೆ: 'ಐರಾವತ' ನಟಿಯ ಬಣ್ಣ ಬಯಲು ಮಾಡಿದ ಜನ
ಕನ್ನಡದಲ್ಲಿ ನಟ ದರ್ಶನ್ ತೂಗುದೀಪ ಅವರ ಐರಾವತ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ವಿವಾದಕ್ಕೆ ಕಾರಣವಾಗಿದ್ದಾರೆ. ಉತ್ತರಾಖಂಡದ ಪ್ರಸಿದ್ಧ ದೇವಾಲಯವು ನನಗೆ ಸಮರ್ಪಿಸಲಾಗಿದೆ. ಅಲ್ಲಿ ನನ್ನ ಫೋಟೋ ಇದ್ದು ಅದಕ್ಕೆ ಹಾರ ಹಾಕಿ ಪೂಜೆ ಮಾಡ್ತಾರೆ, ನನಗೆ ಭಕ್ತರೂ ಇದ್ದಾರೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬದರಿನಾಥದ ಪುರೋಹಿತರು ಮತ್ತು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಸಲಿಗೆ ರೌಟೇಲಾ ಹೇಳಿದ್ದು ನಿಜವೇ ಎಂಬ ಅಚ್ಚರಿ ಮಾಹಿತಿಯೂ ಹೊರಬಿದ್ದಿದೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಊರ್ವಶಿ ರೌಟೇಲಾ ಅವರು ಬದರಿನಾಥ ಧಾಮದ ಬಳಿಯ ಬಾಮ್ನಿಯಲ್ಲಿರುವ ಊರ್ವಶಿ ದೇವಾಲಯದಲ್ಲಿ ಭಕ್ತರು ನನ್ನನ್ನು ಪೂಜಿಸುತ್ತಾರೆ. ಅಲ್ಲಿ ನನ್ನ ಚಿತ್ರಗಳಿಗೆ ಹಾರ ಹಾಕಿ, ನನ್ನನ್ನು 'ದಂದಮಮಾಯಿ' ಎಂದು ಪೂಜಿಸುತ್ತಾರೆ ಎಂದು ನಟಿ ಹೇಳಿಕೊಂಡಿದ್ದರು.

ಸಂದರ್ಶನದಲ್ಲಿ ಮಾತನಾಡಿರುವ ರೌಟೇಲಾ ಅವರು ದಕ್ಷಿಣ ಭಾರತದಲ್ಲಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವುದರಿಂದ ನನ್ನ ಹೆಸರಿನಲ್ಲಿ ದೇವಾಲಯ ಕೂಡ ಇರಬೇಕು ಎಂಬ ಬಯಕೆ ಇದೆ ಎಂದಿದ್ದಾರೆ. ನಾನು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಸೌತ್‌ನಲ್ಲಿ ನನ್ನ ಚೊಚ್ಚಲ ಪ್ರವೇಶ ಮಾಡಿದೆ. ನಂತರ ನಾನು ಪವನ್ ಕಲ್ಯಾಣ್, ಬಾಲಕೃಷ್ಣ ಅವರೊಂದಿಗೆ ಸಹ ಕೆಲಸ ಮಾಡಿದ್ದೇನೆ. ದಕ್ಷಿಣದಲ್ಲಿ ಅವರಿಗೆ ದೇವಾಲಯಗಳಿದ್ದರೆ, ನನ್ನ ಅಭಿಮಾನಿಗಳು ಕೂಡ ಒಂದು ದೇವಸ್ಥಾನ ಹೊಂದಿರಬೇಕು ಎಂದಿದ್ದಾರೆ. ಇದು ಭಾರಿ ವಿವಾದ ಸೃಷ್ಟಿಸಿದೆ.
ಆದರೆ ಉತ್ತರಾಖಂಡದ ದೇವಾಲಯವನ್ನು ಪವಿತ್ರವೆಂದು ಪರಿಗಣಿಸುವ ಪುರೋಹಿತರು ಮತ್ತು ಸ್ಥಳೀಯರು ನಟಿಯ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಟಿ ರೌಟೇಲಾ ಅವರ ಹೇಳಿಕೆಗಳು ದಾರಿ ತಪ್ಪಿಸುವಂತಿವೆ, ಬಾಮ್ನಿ ಮತ್ತು ಪಾಂಡುಕೇಶ್ವರ ಗ್ರಾಮಗಳ ನಿವಾಸಿಗಳ ಆಧ್ಯಾತ್ಮಿಕ ಆಚರಣೆಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿರುವ ಈ ದೇವಾಲಯದ ಬಗ್ಗೆ ಅವರು ಅಪಹಾಸ್ಯ ಮಾಡಿದ್ದಾರೆ ಎಂದು ಬದರಿನಾಥ ಧಾಮದ ಮಾಜಿ ಧಾರ್ಮಿಕ ಅಧಿಕಾರಿ ಸ್ಥಳೀಯ ಅರ್ಚಕ ಭುವನ್ ಚಂದ್ರ ಉನಿಯಾಲ್ ಖಂಡಿಸಿದ್ದಾರೆ.
ಊರ್ವಶಿ ದೇವಾಲಯವು ಹಿಂದೂ ಪುರಾಣದ ದೇವತೆ ಸತಿಯೊಂದಿಗೆ ಸಂಬಂಧ ಹೊಂದಿದೆ. ಇದನ್ನು 108 ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಿ ಪೂಜಿಸಲಾಗುತ್ತಿದೆ. ಪುರಾಣಗಳ ಪ್ರಕಾರ ಸತಿ ದೇವಿಯ ದೇಹವು ಬಿದ್ದ ಸ್ಥಳದಲ್ಲಿ ಈ ದೇವಾಲಯವಿದೆ ಎಂಬ ನಂಬಿಕೆ ಇದೆ. ಈ ದೇವಸ್ಥಾನದ ಬಗ್ಗೆ ಊರ್ವಶಿ ಅವರು ನೀಡಿರುವ ಹೇಳಿಕೆಗಳಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇದು ನಟಿ ಊರ್ವಶಿ ಅವರ ದೇವಸ್ಥಾನವಲ್ಲ, ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಇಂತಹ ಹೇಳಿಕೆಗಳನ್ನು ನೀಡುವ ಯಾರ ವಿರುದ್ಧವೂ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದೇವಸ್ಥಾನದ ಪ್ರಮುಖರು ಆಗ್ರಹಿಸಿದ್ದಾರೆ.

ನಟಿ ಕೊಟ್ಟ ಸ್ಪಷ್ಟನೆ ಏನು?
ನಟಿ ಊರ್ವಶಿ ರೌಟೇಲಾ ಅವರ ಹೇಳಿಕೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ತಂಡ, ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನವಿದೆ ಎಂದು ಊರ್ವಶಿ ರೌಟೇಲಾ ಹೇಳಿದ್ದಾರೆ. ಆದರೆ ಅದು ಊರ್ವಶಿ ರೌಟೇಲಾ ಅವರ ದೇವಸ್ಥಾನವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜನ ನಟಿಯ ಹೇಳಿಕೆಯನ್ನು ತಪ್ಪಾಗಿ ಭಾವಿಸಿದ್ದಾರೆ. ಆ ವೀಡಿಯೊವನ್ನು ಸರಿಯಾಗಿ ಕೇಳಿಸಿಕೊಂಡು ನಂತರ ಮಾತನಾಡಿ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಲ್ಲದೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಸುದ್ದಿ ಹಬ್ಬಿಸಲು ಪ್ರಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರೌಟೇಲಾ ಎಚ್ಚರಿಕೆ ನೀಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಅವರನ್ನು 'ದಂಧಾಮಿ ಮಾಯ್' ಎಂದು ಪೂಜಿಸಲಾಗುತ್ತಿತ್ತು ಎಂದು ಊರ್ವಶಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದು ಸುದ್ದಿ ಲೇಖನವೂ ಇದೆ. ಊರ್ವಶಿ ರೌಟೇಲಾ ಅವರ ಹೇಳಿಕೆಯ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಯಾವುದೇ ವ್ಯಕ್ತಿಯ ವಿರುದ್ಧ ಆಧಾರರಹಿತ ಆರೋಪಗಳು ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ಮೊದಲು ಸತ್ಯಾಂಶವನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅಗತ್ಯ. ಸಮಾಜದ ಪ್ರತಿಯೊಬ್ಬರೂ ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ವರ್ತಿಸಬೇಕು. ಇದರಿಂದ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಿರುತೆರೆ ನಟಿ ರಶಾಮಿ ದೇಸಾಯಿ ಖಂಡನೆ
ನಟಿ ಊರ್ವಶಿ ರೌಟೇಲಾ ಅವರ ವಿವಾದದ ಬಗ್ಗೆ ಕಿರುತೆರೆ ನಟಿ ರಶಾಮಿ ದೇಸಾಯಿ ಕೂಡ ಪ್ರತಿಕ್ರಿಯಿಸಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಅಸಂಬದ್ಧತೆಯ ವಿರುದ್ಧ ಜನರು ಕ್ರಮ ಕೈಗೊಳ್ಳದಿರುವುದು ದುಃಖಕರ ಎಂದು ಹೇಳಿದ್ದಾರೆ. ಭಾರತದಲ್ಲಿ ಅದರಲ್ಲೂ ಹಿಂದೂ ಧರ್ಮವು ತಮಾಷೆಯಾಗುತ್ತಿದೆ. ಅಂದಹಾಗೆ, ಅವರು ಭಾರತವನ್ನು ಪ್ರತಿನಿಧಿಸುವುದು ಮತ್ತು ಉದ್ದೇಶಪೂರ್ವಕವಾಗಿ ಅರ್ಥಹೀನವಾಗಿ ಮಾತನಾಡಿದ್ದಾರೆ. ಇದು ದುಃಖಕರ. ಧರ್ಮದ ಹೆಸರಿನಲ್ಲಿ ಆಟವಾಡಬೇಡಿ ಎಂದು ರಶಾಮಿ ಹೇಳಿದ್ದಾರೆ.
ನೆಟ್ಟಿಗರು ಕೂಡ ಊರ್ವಶಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಊರ್ವಶಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿಗೆ ಏನು ತಪ್ಪಾಗಿದೆ? ಅವರು ಏಕೆ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ? ಅವರು ತಾನು ಮೂರ್ಖನಂತೆ ಕಾಣುತ್ತಿದ್ದೇನೆಂದು ಏಕೆ ಅರಿತುಕೊಳ್ಳುವುದಿಲ್ಲ? ಯಾವುದೇ ಮನುಷ್ಯ ತನ್ನ ಹೆಸರಿನಲ್ಲಿ ದೇವಾಲಯವನ್ನು ಹೊಂದಲು ಹೇಗೆ ಸಾಧ್ಯ? ಇದು ವಿಚಿತ್ರ ಎಂದಿದ್ದಾರೆ. ನಟಿಯ ಹೇಳಿಕೆ ಸ್ವೀಕಾರಾರ್ಹವಲ್ಲ. ನಮ್ಮ ಧರ್ಮ ಅವರಿಗೆ ತಮಾಷೆಯೇ? ಅವಳು ಯಾವಾಗಲೂ ಇಂತಹ ಮೂರ್ಖತನದ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾಳೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಟಿಯ ಹೇಳಿಕೆ ಸಂಬಂಧ ಉತ್ತರಾಖಂಡ ಚಾರ್ ಧಾಮ್ ತೀರ್ಥ ಪುರೋಹಿತ ಮಹಾಪಂಚಾಯತ್ ಮತ್ತು ಬ್ರಹ್ಮ ಕಪಾಲ ತೀರ್ಥ ಪುರೋಹಿತ ಪಂಚಾಯತ್ ಸಮಿತಿಗಳು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿಪಿ ದೀಪಮ್ ಸೇಠ್ ಅವರನ್ನು ಭೇಟಿಯಾಗಿ ಮನವಿ ಪತ್ರಗಳನ್ನ ಸಲ್ಲಿಸಿದ್ದಾರೆ. ವೈರಲ್ ಆಗಿದರು ವೀಡಿಯೊದಲ್ಲಿ ರೌಟೇಲಾ ಅವರು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications