Mukul Dev Passes Away: ಕನ್ನಡ ಸೇರಿ ಬಹುಭಾಷೆಗಳಲ್ಲಿ ನಟಿಸಿದ್ದ ಖ್ಯಾತ ನಟ ನಿಧನ
ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಮುಕುಲ್ ದೇವ್ ನಿಧನರಾಗಿದ್ದಾರೆ. ಇವರು ರಿಯಲ್ ಸ್ಟಾರ್ ಉಪೇಂದ್ರ ಅವರ ರಜನಿ ಸಿನಿಮಾದಲ್ಲಿ ಖಳನಟನ ಪಾತ್ರದಲ್ಲಿ ನಟಿಸಿದ್ದರು. 54 ವರ್ಷ ವಯೋಮಾನದ ನಟ ಮುಕುಲ್ ದೇವ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯ ಸಮಸ್ಯೆಯಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮುಕುಲ್ ಸಾವನ್ನಪ್ಪಿದ್ದಾರೆ.
ಖ್ಯಾತ ಖಳನಟ ರಾಹುಲ್ ದೇವ್ ಕೂಡ ಮುಕುಲ್ ದೇವ್ ಅವರ ಸಹೋದರ. ಮುಕುಲ್ ಅವರ ನಿಧನದ ಕುರಿತು ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ನಮ್ಮ ಸಹೋದರ ಮುಕುಲ್ ದೇವ್ ನಿನ್ನೆ ರಾತ್ರಿ ನವದೆಹಲಿಯಲ್ಲಿ ನಿಧನರಾದರು. ಅವರ ಪುತ್ರಿ ಸಿಯಾ ದೇವ್, ಸಹೋದರರಾದ ರಶ್ಮಿ ಕೌಶಲ್, ರಾಹುಲ್ ದೇವ್ ಮತ್ತು ಸೋದರಳಿಯ ಸಿದ್ಧಾಂತ್ ದೇವ್ ಅವರನ್ನು ಮುಕುಲ್ ಅಗಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆಗೆ ನಮ್ಮೊಂದಿಗೆ ಸೇರಿ ಎಂದು ರಾಹುಲ್ ಪೋಸ್ಟ್ ಮಾಡಿದ್ದಾರೆ.

'ಸನ್ ಆಫ್ ಸರ್ದಾರ್' ಚಿತ್ರದಲ್ಲಿ ಮುಕುಲ್ ಅವರೊಂದಿಗೆ ಕೆಲಸ ಮಾಡಿದ್ದ ವಿಂದು ದಾರಾ ಸಿಂಗ್ ಅವರು ಮುಕುಲ್ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ತನ್ನ ಪೋಷಕರ ಮರಣದ ನಂತರ, ಮುಕುಲ್ ತನ್ನನ್ನು ತಾನೇ ನೋಡಿಕೊಳ್ಳುತ್ತಿದ್ದ. ಅವನು ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ. ಯಾರನ್ನೂ ಭೇಟಿಯಾಗುತ್ತಿರಲಿಲ್ಲ. ಕಳೆದ ಕೆಲವು ದಿನಗಳಿಂದ ಅವನ ಆರೋಗ್ಯ ಹದಗೆಟ್ಟಿತು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಮುಕುಲ್ ದೇವ್ ಜಲಂಧರ್ ಮೂಲದವರು. ಅವರ ತಂದೆ ಹರಿ ದೇವ್ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಮುಕುಲ್ ಅವರಿಗೆ ಆಪ್ಘನ್ ಸಂಸ್ಕೃತಿಯ ಪರಿಚಯವಿತ್ತು, ಪರ್ಷಿಯನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಮುಕುಲ್ ದೇವ್ ಅವರು 8ನೇ ತರಗತಿಯಲ್ಲಿದ್ದಾಗ ದೂರದರ್ಶನ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮವೊಂದರಲ್ಲಿ ಮೈಕೆಲ್ ಜಾಕ್ಸನ್ ಅವರಂತೆ ನಟಿಸಿ ಗಮನ ಸೆಳೆದಿದ್ದರು.
1996ರಲ್ಲಿ 'ಮಮ್ಕಿನ್' ಧಾರಾವಾಹಿಯಲ್ಲಿ ವಿಜಯ್ ಪಾಂಡೆ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ಬಳಿಕ ದೂರದರ್ಶನದ ʼಏಕ್ ಸೆ ಬಾಧ್ ಕರ್ ಏಕ್ʼ ಎಂಬ ಹಾಸ್ಯ ಬಾಲಿವುಡ್ ಕೌಂಟ್‌ಡೌನ್ ಶೋನಲ್ಲಿಯೂ ನಟಿಸಿದ್ದರು. ಕಿಲಾ, ವಾಜೂದ್, ಕೊಹ್ರಾಮ್, ಮುಝೆ ಮೇರಿ ಬಿವಿ ಸೆ ಬಚಾವೊ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಇವರು ನಟಿಸಿದ್ದರು.
ನಟನಾಗುವ ಮೊದಲು ಮುಕುಲ್ ದೇವ್ ಸುಮಾರು ಒಂದು ದಶಕದ ಕಾಲ ವಾಣಿಜ್ಯ ಪೈಲಟ್ ಆಗಿ ಕೆಲಸ ಮಾಡಿದ್ದರು. ಅವರ ಬಾಲಿವುಡ್ ಚೊಚ್ಚಲ ಚಿತ್ರ ಮಹೇಶ್ ಭಟ್ ಅವರ ದಸ್ತಕ್, ಇದು ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಗೆದ್ದ ನಂತರ ಸುಶ್ಮಿತಾ ಸೇನ್ ಅವರ ಮೊದಲ ಚಿತ್ರವಾಗಿತ್ತು. ಮುಕುಲ್ ಹಿಂದಿ ಮತ್ತು ಪಂಜಾಬಿ ಸಿನಿಮಾಗಳು, ಟಿವಿ ಧಾರಾವಾಹಿಗಳು ಮತ್ತು ಸಂಗೀತ ಆಲ್ಬಮ್‌ಗಳಲ್ಲಿನ ಕೆಲಸಗಳಿಗೆ ಹೆಸರುವಾಸಿಯಾಗಿದ್ದರು. ಇದಲ್ಲದೆ ಅವರು ಕೆಲವು ಬಂಗಾಳಿ, ಮಲಯಾಳಂ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. "ಯಮ್ಲಾ ಪಗ್ಲಾ ದೀವಾನಾ" ಸಿನಿಮಾದ ಅಭಿನಯಕ್ಕಾಗಿ ಅವರಿಗೆ ಅಮರೀಶ್ ಪುರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.












Click it and Unblock the Notifications