Ramya vs Fans: ಜಾಣಕಿವುಡರಾಗಿರೋ ಕಲಾವಿದರಿಗೆ ನೂರ್ಕಾಲ ಆಯಸ್ಸು ಸಿಗಲಿ: ರಮ್ಯಾ ಪರ ನಿಂತ ಪ್ರಥಮ್
ಸ್ಯಾಂಡಲ್‌ವುಡ್ ಮೋಹಕತಾರೆ ನಟಿ ರಮ್ಯಾ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವಿನ ಗಲಾಟೆ ತಾರಕಕ್ಕೇರಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಧ್ವನಿ ಎತ್ತಿದ್ದಕ್ಕೆ, ಡಿಬಾಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದಿದ್ದಾರೆ. ರಮ್ಯಾ ಬಗ್ಗೆ ಕೆಟ್ಟ, ಅಶ್ಲೀಲ ಕಾಮೆಂಟ್‌ಗಳನ್ನು ಹಾಕಿ ವಿಕೃತಿ ಮೆರೆದಿದ್ದಾರೆ. ಇದಕ್ಕೆ ಜಗ್ಗದ ರಮ್ಯಾ, ಡಿಬಾಸ್ ಅಭಿಮಾನಿಗಳು ಮಾಡಿದ್ದ ಸ್ಕ್ರೀನ್‌ಶಾಟ್‌ಗಳನ್ನ ಬಹಿರಂಗವಾಗಿ ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಈಗ ರಮ್ಯಾ ಅವರ ಬೆಂಬಲಕ್ಕೆ ಬಿಗ್‌ಬಾಸ್ ವಿನ್ನರ್ ಹಾಗೂ ನಟ ಒಳ್ಳೆ ಹುಡುಗ ಪ್ರಥಮ್ ನಿಂತಿದ್ದಾರೆ. ಇದೇ ವೇಳೆ ಚಿತ್ರರಂಗದ ಇತರ ಕಲಾವಿದರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸದ್ಯ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ದರ್ಶನ್ ಜಾಮೀನು ರದ್ದು ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಮೊದಲಿನಿಂದಲೂ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಬೆಂಬಲಕ್ಕೆ ನಿಂತಿದ್ದರು. ಇದರಿಂದಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಕಿಡಿಕಾರುತ್ತಿದ್ದರು. ಇತ್ತೀಚೆಗೆ ವಿಚಾರಣೆ ನಡೆದಾಗಲೂ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದರು. ಹೀಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು.

ರಮ್ಯಾ ಪೋಸ್ಟ್‌ಗೆ ಕೆಟ್ಟದಾಗಿ ಕಾಮೆಂಟ್ ಹಾಕುವ ಮೂಲಕ ಕೆಲವರು ವಿಕೃತಿ ತೋರಿದ್ದರು. ರಮ್ಯಾ ಬಗ್ಗೆ ಕೆಟ್ಟ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ್ದರು. ಆದರೆ ರಮ್ಯಾ ಈ ಎಲ್ಲ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ದಿಟ್ಟತನ ಪ್ರದರ್ಶಿಸಿದ್ದರು. ಅಲ್ಲದೆ ರೇಣುಕಾಸ್ವಾಮಿಗೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ಡಿಬಾಸ್ ಅಭಿಮಾನಿಗಳ ಕಾಮೆಂಟ್‌ಗಳೇ ಸಾಕ್ಷಿ. ಡಿಬಾಸ್ ಫ್ಯಾನ್ಸ್ ಮಾಡಿರುವ ಮೆಸೇಜ್‌ಗಳಿಗೂ ರೇಣುಕಾಸ್ವಾಮಿ ಅವರ ಮೆಸೇಜ್‌ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ವಿರುದ್ಧ ಡಿಬಾಸ್ ಅಭಿಮಾನಿಗಳ ಟ್ರೋಲ್‌ಗಳು ಮಿತಿಮೀರಿದ್ದು, ಈ ಎಲ್ಲದಕ್ಕೂ ರಮ್ಯಾ ತಮ್ಮ ಪೋಸ್ಟ್‌ನಿಂದಲೇ ಟಕ್ಕರ್ ಕೊಡುತ್ತಿದ್ದಾರೆ.
ರಮ್ಯಾ ಮೇಡಂ ಘನತೆ ಪರ ನಿಲ್ಲೋಣ!
ಇದೀಗ ರಮ್ಯಾ ಅವರ ಬೆಂಬಲಕ್ಕೆ ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್ ನಿಂತಿದ್ದಾರೆ. ನಾನು ರಮ್ಯಾ ಅವರ ಜೊತೆಯಲ್ಲಿ, ಮೇಡಂ ಘನತೆ ಪರ ನಿಲ್ಲುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ, ನಾವು ರಮ್ಯಾ ಅವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು! ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ! ಇಷ್ಟೆಲ್ಲಾ ಆದರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ ಎಂದು ಚಿತ್ರರಂಗದ ಇತರ ಕಲಾವಿದರ ಬಗ್ಗೆಯೂ ಪ್ರಥಮ್ ವ್ಯಂಗ್ಯವಾಡಿದ್ದಾರೆ. ನಟಿಯೊಬ್ಬರಿಗೆ ಇಷ್ಟೆಲ್ಲ ಆಗುತ್ತಿದ್ದರೂ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಮೌನವನ್ನು ಪ್ರಥಮ್ ಪ್ರಶ್ನಿಸಿದ್ದಾರೆ.












Click it and Unblock the Notifications