ನಾನು ಡಿ ಗ್ಯಾಂಗ್ ಅಲ್ಲ, ಈಗ ಅದೆಲ್ಲ ನಡೆಯಲ್ಲ: ವಿನಯ್ ಗೌಡ ಹೀಗಂದಿದ್ದೇಕೆ?
ರೀಲ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿ ಹೊರಬಂದಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೆವಿಲ್ ಸಿನಿಮಾದಲ್ಲಿ ವಿಲನ್ ಆಗಿ ವಿನಯ್ ನಟಿಸುತ್ತಿದ್ದಾರೆ. ಇತ್ತೀಚೆಗೆ ರಜತ್ ಜೊತೆಗೆ ಡಿ ಬಾಸ್ ಅವತಾರದ ರೀಲ್ ಮಾಡಿಯೇ ಜೈಲು ಕೂಡ ಸೇರಿದ್ದರು. ಹಾಗಾಗಿ ವಿನಯ್ ಗೌಡ ಅವರನ್ನು ಡಿ ಗ್ಯಾಂಗ್ ಎಂದು ಜನ ಕರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಡಿ ಗ್ಯಾಂಗ್ ಅಲ್ಲ ಎಂದು ಖಡಕ್ ಆಗಿ ಹೇಳುವ ಮೂಲಕ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿನಯ್ ಗೌಡ ಅವರು, ಇಲ್ಲಿ ಡಿ ಗ್ಯಾಂಗ್ ಅನ್ನೋ ವಿಚಾರನೇ ಬರಲ್ಲ, ನನ್ನದು ಒಂದು ಪ್ರೊಫೆಶನ್, ಬೆಳಿಗ್ಗೆ ಎದ್ದರೆ ಕೆಲಸಕ್ಕೆ ಹೋಗುತ್ತಿನೇ ಹೊರತು ಯಾವುದೇ ಗ್ಯಾಂಗ್ ಕೆಲಸಕ್ಕೆ ಅಲ್ಲ. ನಾನು ನನ್ನ ಕುಟುಂಬಕ್ಕಾಗಿ ಹಣ ಸಂಪಾದಿಸಲು ಹೋಗುತ್ತೇನೆ. ಹಾಗಾಗಿ ನಾನು ಮನೆಯಿಂದ ಹೊರಗೆ ಹೋಗೋದು ದುಡಿಯುವ ಉದ್ದೇಶದಿಂದ, ಗ್ಯಾಂಗ್ ಕೆಲಸಕ್ಕೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಾನು ಕೆಲಸ ಮಾಡುತ್ತಿರುವುದು ನನ್ನ ಹೆಂಡತಿ, ಮಕ್ಕಳಿಗೋಸ್ಕರ. ಅದನ್ನು ಗ್ಯಾಂಗ್ ಎಂದು ಕರೆಯುವುದು ತಪ್ಪಾಗುತ್ತೆ. ಇನ್ನು ಡೆವಿಲ್ ಸಿನಿಮಾದಲ್ಲಿ ನಾನೊಬ್ಬ ಉದ್ಯೋಗಿ ಅಷ್ಟೇ. ಅಲ್ಲಿ ನಾನೊಬ್ಬ ನಟ, ನನಗೆ ಮಿಲನಾ ಪ್ರಕಾಶ್ ಸರ್ ನನಗೆ ಹಳೇ ಪರಿಚಯ. ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ನಾನು ಕೆಲಸ ಮಾಡಿದ್ದೇನೆ. ಅವರಿಗೆ ನನ್ನ ನಟನೆ ಬಗ್ಗೆ ಚೆನ್ನಾಗಿ ಗೊತ್ತು. ಇದೇ ಕಾರಣಕ್ಕೆ ನನ್ನನ್ನು ಡೆವಿಲ್ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ವಿನಯ್ ಗೌಡ ಹೇಳಿದ್ದಾರೆ.
ಡೆವಿಲ್ ಸಿನಿಮಾದಲ್ಲಿ ನಾನು ವಿಲನ್ ಆಗಿ ನಟಿಸುತ್ತಿರುವುದರಿಂದ, ಈ ಕೇಸ್‌ನಲ್ಲೂ ಕನೆಕ್ಷನ್ ಇರುವುದರಿಂದ ಡಿ ಗ್ಯಾಂಗ್ ಅಂತ ಫ್ರೇಮ್ ಮಾಡಿದ್ರು. ಆದರೆ, ಇಲ್ಲಿ ಯಾವುದೇ ಗ್ಯಾಂಗ್ ಅನ್ನೋದು ಇಲ್ಲವೇ ಇಲ್ಲ. ಈಗ ಗ್ಯಾಂಗ್‌ಗಳೆಲ್ಲ ನಡೆಯೋದಿಲ್ಲ, ಏಕೆಂದರೆ ಕಾನೂನುಗಳು ಪ್ರತಿಯೊಬ್ಬರಿಗೂ ಕಟ್ಟುನಿಟ್ಟಾಗಿವೆ. ಇಲ್ಲಿ ಗ್ಯಾಂಗ್ ಮಾಡ್ಕೊಂಡು ಹೋಗ್ತೀನಿ, ರೌಡಿಸಂ ಮಾಡ್ತೀನಿ ಅಂದ್ರೆ ನಡೆಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಸುದೀಪ್ ಸರ್ ನನ್ನ ಗಾಡ್‌ಫಾದರ್
ನನಗೆ ಇಂಡಸ್ಟ್ರಿಯಲ್ಲಿ ತುಂಬಾ ಸಪೋರ್ಟಿಂಗ್ ಆಗಿರೋದು ಅಂದ್ರೆ ಸುದೀಪ್ ಸರ್. ಪ್ರತಿ ಸಲ ನನಗೆ ಏನೇ ಸಮಸ್ಯೆ ಆದ್ರೂ ಅಥವಾ ಪ್ರಶ್ನೆ ಇದ್ರೂ ನಾನು ಅವರ ಬಳಿಯೇ ಕೇಳ್ತೀನಿ. ನಾನು ಅವರಿಂದಲೇ ಸಲಹೆಗಳನ್ನ ತಗೋತೀನಿ. ಡೆವಿಲ್ ಸಿನಿಮಾ ಮಾಡುವಾಗಲೂ ಅವರ ಬಳಿ ಕೇಳಿದ್ದೆ. ಅದಕ್ಕೆ ಅವರು ಒಳ್ಳೆಯ ಅವಕಾಶ, ಚೆನ್ನಾಗಿ ನಟನೆ ಮಾಡು ಎಂದು ಬೆನ್ನುತಟ್ಟಿದ್ರು. ನಿನ್ನ ಕೆಲಸವನ್ನಷ್ಟೇ ನೀನು ಮಾಡು, ಬೇರೆ ಕನೆಕ್ಷನ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ಸುದೀಪ್ ಸರ್ ನನಗೆ ಹೇಳಿದ್ರು ಎಂದು ವಿನಯ್ ಹೇಳಿಕೊಂಡಿದ್ದಾರೆ.
ಇನ್ನು ರೀಲ್ಸ್ ಕೇಸ್ ಆದಾಗಲೂ ಕೂಡ ಸುದೀಪ್ ಸರ್ ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅದು ಯಾವ ರೀತಿ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಅದನ್ನ ಎಲ್ಲರಿಗೂ ವಿವರಿಸಲು ಹೋಗಲ್ಲ. ನಾನು ಅವರ ಹೆಸರನ್ನು ಹಿಡಿದುಕೊಂಡು ತಪ್ಪು ದಾರಿಗೆ ಹೋಗಲ್ಲ. ಹಾಗಾಗಿ ಅವರ ಸದಾ ನನ್ನೊಂದಿಗೆ ನಿಂತಿದ್ದಾರೆ. ಅವರು ನನ್ನ ಹಿರಿಯಣ್ಣ ಹಾಗೂ ಗಾಡ್ ಫಾದರ್. ನಾನು ಏನೇ ಒಂದು ಹೆಜ್ಜೆ ಇಟ್ರೂ ಅದಕ್ಕೆ ಸಪೋರ್ಟ್ ಮಾಡೋದು ಸುದೀಪ್ ಸರ್ ಮಾತ್ರ ಎಂದು ವಿನಯ್ ಹೇಳಿದ್ದಾರೆ.











Click it and Unblock the Notifications