3 ವರ್ಷ ಎಲ್ಲೂ ನಟಿಸಬಾರದು ಅಂತ ಲೆಟರ್ ಕಳಿಸಿದ್ರು: ಬಿಗ್‌ಬಾಸ್‌ಗೆ ಹೋದಾಗ ಶಿಶಿರ್‌ಗೆ ಆಗಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್-11ರ (Bigg Boss Kannada) ಸ್ಪರ್ಧಿಗಳಲ್ಲಿ ಶಿಶಿರ್ ಶಾಸ್ತ್ರಿ (Shishir Shastry) ಕೂಡ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ಮಿಂಚಿದ್ದ ಶಿಶಿರ್ ಅವರಿಗೆ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕಿತ್ತು. ರಿಯಾಲಿಟಿ ಶೋನಲ್ಲಿ ಶಿಶಿರ್ ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದರು. ಎಲ್ಲರೂ ಬಿಗ್‌ಬಾಸ್‌ಗೆ ಅವಕಾಶ ಸಿಕ್ಕಾಗ ಫುಲ್ ಖುಷಿಯಲ್ಲಿರುತ್ತಾರೆ. ಆದರೆ ಶಿಶಿರ್ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕ ಮೇಲೆ ಹಲವು ಸಮಸ್ಯೆಗಳನ್ನು ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಆ ಸಮಯದಲ್ಲಿ ನನಗೆ ಮಾನಸಿಕ ಕಿರುಕುಳ ನೀಡಿದ್ರು, ಅದರಿಂದ ಹೊರಬರಲು ನನಗೆ ಸಾಕಷ್ಟು ಸಮಯ ಬೇಕಾಯ್ತು' ಎಂದು ಶಿಶಿರ್ ಬೇಸರದ ಮಾತುಗಳನ್ನಾಡಿದ್ದಾರೆ.
ಶಿಶಿರ್ ಬಿಗ್‌ಬಾಸ್‌ನಲ್ಲಿ ಸದಾ ನಗುತ್ತಾ ಕಾಣಿಸಿಕೊಂಡಿದ್ದರು. ಇದೇ ಸಮಯದಲ್ಲಿ ಅವರು ಮೂರು ವರ್ಷಗಳ ಕಾಲ ಯಾವ ಭಾಷೆಯಲ್ಲೂ ನಟಿಸಬಾರದು ಎಂದು ಷರತ್ತು ಹಾಕಲಾಗಿತ್ತು ಎಂದು ಶಿಶಿರ್ ಹೇಳಿಕೊಂಡಿದ್ದಾರೆ. 'ಬಿಗ್‌ಬಾಸ್ ನಂತರ ನಾನು ಒಂದಷ್ಟು ಏಳುಬೀಳುಗಳನ್ನ ನೋಡಬೇಕಾಯಿತು. ವೈಯಕ್ತಿಕ ಕಾರಣಗಳಿಂದಲೂ ಕೆಲ ಘಟನೆಗಳು ನಡೆದವು. ಅದನ್ನು ಹೇಳೋಕೆ ಇಷ್ಟವಿಲ್ಲ. ಆದರೆ ವೃತ್ತಿ ಜೀವನದಲ್ಲೂ ತುಂಬಾ ಸಮಸ್ಯೆಗಳನ್ನ ಎದುರಿಸಬೇಕಾಯ್ತು' ಎಂದಿದ್ದಾರೆ.

'ಬಿಗ್‌ಬಾಸ್‌ಗೆ ಹೋಗುವ ಸಮಯದಲ್ಲಿ ನಾನು ತೆಲುಗು ಪ್ರಾಜೆಕ್ಟ್‌ನಲ್ಲಿದ್ದೆ. ಅವರಿಗೆ ತೊಂದರೆ ಆಯ್ತು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ರೋ ಗೊತ್ತಿಲ್ಲ. ಆದರೆ ನಾನು ಅವರಿಗೆ ತೊಂದರೆ ಮಾಡಲಿಲ್ಲ. ಬಿಗ್‌ಬಾಸ್‌ಗೆ ಹೋಗುವ ವಿಚಾರವನ್ನು ಮೂರು ತಿಂಗಳ ಹಿಂದೆಯೇ ತಿಳಿಸಿದ್ದೆ. ಎಲ್ಲವನ್ನೂ ತಿಳಿಸಿ, ಅಲ್ಲಿನ ಪ್ರಾಜೆಕ್ಟ್‌ನ ಕ್ಲೈಮ್ಯಾಕ್ಸ್ ಶೂಟ್ ಕೂಡ ಮುಗಿಸಿಯೇ ಬಂದಿದ್ದೆ' ಎಂದು ವಿವರಿಸಿದ್ದಾರೆ.
'ಆದರೂ ತೆಲುಗು ಇಂಡಸ್ಟ್ರಿಯವರು ನಾನು ಬೇರೆ ಯಾವುದೇ ಪ್ರಾಜೆಕ್ಟ್ ಮಾಡಬಾರದು ಅಂತ ಲೆಟರ್ ಕಳಿಸಿದ್ರು. ಈ ವಿಚಾರದಲ್ಲಿ ಮಾನಸಿಕವಾಗಿ ನನಗೆ ತುಂಬಾ ನೋವು ಕೊಟ್ಟರು. ನನ್ನ ಭಾಷೆಯಾದ ಕನ್ನಡದಲ್ಲೂ ಮೂರು ವರ್ಷ ಯಾವುದೇ ಪ್ರಾಜೆಕ್ಟ್ ಮಾಡಬಾರದು ಎಂದಿದ್ರು. ತೆಲುಗು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಯಾವ ಭಾಷೆಯಲ್ಲೂ ನಾನು ನಟಿಸಬಾರದು ಎಂದು ಕಂಡೀಷನ್ ಹಾಕಿದ್ರು' ಎಂದು ಶಿಶಿರ್ ತಿಳಿಸಿದ್ದಾರೆ.
'ಮೂರು ವರ್ಷ ಹೊಟ್ಟೆಪಾಡಿಗೆ ಏನ್ ಮಾಡ್ಬೇಕು?'
'ಸೆಪ್ಟೆಂಬರ್‌ನಲ್ಲಿ ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅವರು ಅಕ್ಟೋಬರ್‌ನಲ್ಲಿ ಲೆಟರ್ ಕಳಿಸಿದ್ದರು. ಇವನು ಎಲ್ಲೂ ಪ್ರಾಜೆಕ್ಟ್ ಮಾಡಬಾರದು, ಯಾವ ಭಾಷೆಯಲ್ಲೂ ಕೆಲಸ ಮಾಡಂಗಿಲ್ಲ ಅಂತ ಅದರಲ್ಲಿತ್ತು. ನಮ್ಮ ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಕುಟುಂಬಕ್ಕಾಗಿ ದುಡಿಯುವವನೂ ನಾನೇ, ಮೂರು ವರ್ಷ ನಾನು ಯಾವುದೇ ಕೆಲಸ ಮಾಡಬಾರದು ಅಂದ್ರೆ ಹೇಗೆ?' ಎಂದು ಬೇಸರ ಹೊರಹಾಕಿದ್ದಾರೆ.
'ಬಿಗ್‌ಬಾಸ್ ನನಗೆ ಹನ್ನೊಂದು ವಾರಕ್ಕೆ ಕೊಡುವ ಸಂಭಾವನೆ ಇಟ್ಟುಕೊಂಡು, ಮೂರು ವರ್ಷ ನಿಭಾಯಿಸೋಕೆ ಆಗುತ್ತಾ? ಅಥವಾ ಅವರೇ ಬಂದು ನನ್ನ ಸಾಕ್ತಾರಾ? ಬೇರೆ ಒಂದು ಭಾಷೆಯ ಇಂಡಸ್ಟ್ರಿಯವರು ನನ್ನ ಸ್ವಂತ ಭಾಷೆಯಲ್ಲೂ ಕೆಲಸ ಮಾಡಬಾರದು ಅಂತ ಮಾನಸಿಕವಾಗಿ ಒತ್ತಡ ಹಾಕಿದ್ರು. ಇದರಿಂದ ಹೊರಬರಲು ನಾನು ಮೂರು ತಿಂಗಳ ಕಾಲ ಒದ್ದಾಡಿದ್ದೀನಿ' ಎಂದು ಶಿಶಿರ್ ಆ ದಿನಗಳನ್ನು ನೆನೆದಿದ್ದಾರೆ.












Click it and Unblock the Notifications