Bigg Boss Kannada: ಈ ಬಾರಿ ಬಿಗ್ ಬಾಸ್ ಟ್ರೋಫಿಯ ಲುಕ್ ಬದಲಾಯಿಸಿದ್ದು ಯಾಕೆ?
ಬಿಗ್ ಬಾಸ್ ಕನ್ನಡ ಸೀಜನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ. ಕಿಚ್ಚ ಸುದೀಪ್ ನಿರೂಪಣೆಯ ಕೊನೆಯ ಸೀಜನ್ ಆಗಿರುವ ಕಾರಣ ಬಿಗ್ ಬಾಸ್ ಕನ್ನಡ ಸೀಜನ್ 11 ಸುದೀಪ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಬಿಗ್ ಬಾಸ್ ಅಭಿಮಾನಿಗಳಿಗೂ ಕೂಡ ಬಹಳ ವಿಶೇಷವಾದ ಆವೃತ್ತಿಯಾಗಿದೆ.
ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ರಜತ್ ಹಾಗೂ ಭವ್ಯಾ ಗೌಡ ಫಿನಾಲೆಗೆ ಕಾಲಿಟ್ಟಿದ್ದು, ಈ ಬಾರಿ ಗೆಲುವು ಸಾಧಿಸುವುದು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಫಿನಾಲೆಗೆ ಕಾಲಿಟ್ಟ ಆರು ಸ್ಪರ್ಧಿಗಳಲ್ಲಿ ಇವರೇ ಬಿಗ್ ಬಾಸ್ ಕನ್ನಡ ಸೀಜನ್ 11ರ ವಿಜೇತರು ಎಂದು ಊಹಿಸುವುದು ಕಷ್ಟವಾಗಿದೆ.

ಇಲ್ಲಿವರೆಗೂ ಬಿಗ್ ಬಾಸ್ ಕನ್ನಡ 10 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, 11ನೇ ಸೀಸನ್ ಕೂಡ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 11ನೇ ಸೀಸನ್‌ನಿಂದ ಬಿಗ್ ಬಾಸ್ ಕಾರ್ಯಕ್ರಮದ ಶೈಲಿ ಬದಲಾಗಿದ್ದು, ಈ ಬಾರಿ ವಿಜೇತರಿಗೆ ನೀಡುವ ಟ್ರೋಫಿಯ ರೂಪ ಕೂಡ ಬದಲಾಗಿದೆ. ಈವರೆಗೂ ಇದ್ದ ಬಿಗ್ ಬಾಸ್ ಟ್ರೋಫಿಯನ್ನು ಬದಲಾಯಿಸಿ ಈ ಬಾರಿ ಹೊಸದಾಗಿ ರಚಿಸಲಾಗಿದ್ದು, ಬಿಗ್ ಬಾಸ್ ಲಾಂಛನವಿರುವ ಎರಡು ರೆಕ್ಕೆಗಳಿರುವ ಟ್ರೋಫಿ ರಚಿಸಲಾಗಿದೆ.
ಬಿಗ್ ಬಾಸ್ ಹೊಸ ಟ್ರೋಫಿ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದು, ಈ ಟ್ರೋಫಿ ಯಾರ ಕೈ ಸೇರಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಈ ಬಾರಿ ಬಿಗ್ ಬಾಸ್ ತಂಡ ಟ್ರೋಫಿಯ ಲುಕ್ ಬದಲಾಯಿಸಿದ್ದು ಯಾಕೆ ಎನ್ನುವ ಪ್ರಶ್ನೆ ಹಲವರಿಗಿದೆ. ಈ ಪ್ರಶ್ನೆಗೆ ವಾಹಿನಿ ಅಥವಾ ತಂಡ ಈವರೆಗೂ ಅಧೀಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಬಿಗ್ ಬಾಸ್ ತಂಡ ಟ್ರೋಫಿಯ ಲುಕ್ ಯಾಕೆ ಬದಲಿಸಿರಬಹುದು ಎನ್ನುವ ಕೆಲವು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಹತ್ತು ಸೀಜನ್‌ಗಳಲ್ಲಿ ಒಂದೇ ರೀತಿಯ ಟ್ರೋಫಿಗಳನ್ನು ವಿಜೇತರಿಗೆ ನೀಡಿದ್ದು, ಬಿಗ್ ಬಾಸ್ ಕನ್ನಡ ಸೀಜನ್ 11ರಿಂದ ಹೊಸ ಅಧ್ಯಾಯದಂತೆ ಹೊಸ ಶೈಲಿಯ ಟ್ರೋಫಿಯನ್ನು ತಂಡ ಪರಿಚಯಿಸಿದೆ ಎನ್ನುವ ಊಹೆ ಒಂದೆಡೆಯಾದರೆ. ಈ ಬಾರಿ ಇಬ್ಬರು ಸ್ಪರ್ಧಿಗಳನ್ನು ಗೆಲ್ಲಿಸಲು ಈ ರೀತಿಯ ಎರಡು ರೆಕ್ಕೆಯ ಟ್ರೋಫಿ ರಚಿಸಲಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಅದೇನೇ ಇದ್ದರೂ ಬಿಗ್ ಬಾಸ್ ತಂಡವೇ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಬಹುಶಃ ಗ್ರ್ಯಾಂಡ್ ಫಿನಾಲೆ ದಿನ ಉತ್ತರ ಸಿಗುವ ಸಾಧ್ಯತೆ ಇದೆ.












Click it and Unblock the Notifications