ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಅವನೇ ಗೆಲ್ತಿದ್ದ- ತಮ್ಮನ ಗೆಲುವು ಸಂಭ್ರಮಿಸಿದ ರಜತ್
ಕಿರುತೆರೆ ಪ್ರೇಕ್ಷಕರು ಕಳೆದ ನೂರ ಇಪ್ಪತ್ತು ದಿನಗಳಿಂದ ಬಹಳ ಕಾತುರದಿಂದ ಕಾಯುತ್ತಿದ್ದ, ನಿರೀಕ್ಷಿಸುತ್ತಿದ್ದ ಬಿಗ್ ಬಾಸ್ ಸೀಜನ್ 11ರ ಗ್ರ್ಯಾಂಡ್ ಫಿನಾಲೆ ಬಹಳ ಅದ್ಧೂರಿಯಾಗಿ ನಡೆದು ಹೋಗಿದೆ. ಈ ಬಾರಿಯ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿದ್ದು, ವಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಡುಗಾರ ಹನುಮಂತ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ಇನ್ನು ನಟ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ಹನುಮಂತನ ಗೆಲುವಿನ ಬಗ್ಗೆ ಸೆಕೆಂಡ್ ರನ್ನರ್ ಅಪ್ ರಜತ್ ಮಾತನಾಡಿದ್ದು, 'ನಾನು ಇರುವುದೇ ಹೀಗೆ ಹೊರಗಡೆ ಹೇಗೆ ಇದ್ದೆನೋ ಬಿಗ್ ಬಾಸ್ ಮನೆಯೊಳಗೂ ಹಾಗೇ ಇದ್ದೆ. ವಿಷಯ ಏನಂದ್ರೆ ಈ ಹನುಮಂತನ ಮುಂದೆ ಗಾಂಧೀಜಿ ನಿಂತು ಕೊಂಡರೂ, ಕರ್ನಾಟಕದಲ್ಲಿ ಅವನೇ ಗೆಲ್ಲುವುದು. ಹನುಮಂತನೇ ಗೆಲ್ಲುವುದು. ಇನ್ನು ನಮ್ಮಂತವರು ಎಲ್ಲಿ ಗೆಲ್ಲುತ್ತೇವೆ. ನೂರಕ್ಕೆ ನೂರು ಅವನೇ ಗೆಲ್ಲುವುದು ಅಂತಾ ಯಾವಾಗಲೋ ಗೊತ್ತಿತ್ತು. ಬಿಗ್ ಬಾಸ್ ಮನೆಯಲ್ಲಿ ಅವನನ್ನು ವಿರೋಧಿಸಿದ್ದು ನಾನು ಒಬ್ಬನೇ. ಏನು ಮಾಡಲಾಗುವುದಿಲ್ಲ. ಅವನು ಗೆದ್ದಾಯ್ತು' ಎಂದರು.

'ಹನುಮಂತನೂ ತುಂಬಾ ಒಳ್ಳೆಯವನು. ಅವನೇನು ಕೆಟ್ಟವನಲ್ಲ. ಆದರೆ ಒಳ್ಳೆಯ ಆಟಗಾರ. ಅವನು ಕಷ್ಟಪಟ್ಟೇ ಮುಂದೆ ಬಂದಿರುವವನು. ಈ ಫಲಿತಾಂಶದ ಬಗ್ಗೆ ಬೇಜಾರಿಲ್ಲ. ಅವನು ನನ್ನ ತಮ್ಮನೇ. ನಾನು ಐವತ್ತು ದಿನ ಆದ ಮೇಲೆ ಬಂದೆ, ಅವನು ವಲ್ಡ್ ಕಾರ್ಡ್‌ನಲ್ಲಿ ಬಂದ ಎನ್ನುವುದು ವಿಷಯ ಅಲ್ಲ, ಎಲ್ಲರೂ ಚೆನ್ನಾಗಿ ಆಡಿಕೊಂಡು ಒಟ್ಟಿಗೆ ಬಂದೆವಲ್ಲಾ ಅದೇ ಖುಷಿ' ಎಂದು ರಜತ್ ಹೇಳಿದರು.
ಇನ್ನು ಚೈತ್ರಾ ಕುಂದಾಪುರ ಬಗ್ಗೆ ಮಾತನಾಡಿದ ರಜತ್, 'ನನ್ನ ಬಾಸ್ ಅವಳು. ಅವಳ ಸಮಸ್ಯೆ ಅಂದರೆ ಹೇಳಿದ ಮಾತೇ ಕೇಳಲ್ಲ. ಅದಕ್ಕೆ ಅವಳನ್ನೇ ನನ್ನ ಬಾಸ್ ಮಾಡಿಕೊಂಡುಬಿಟ್ಟೆ. ಅವಳ ಜೊತೆ ಒಡನಾಟವೂ ಚೆನ್ನಾಗಿತ್ತು. ಹೊರಗಡೆ ದೊಡ್ಡ ಹೆಸರಿರುವ ವ್ಯಕ್ತಿ ಅವಳು. ಆದರೆ ನಾನು ಎಲ್ಲರನ್ನೂ ಹಾಗೇ ಫ್ರೆಂಡ್ಲಿ ಆಗಿ ನೋಡುತ್ತೇನೆ' ಎಂದ ರಜತ್, 'ಎಲ್ಲಾ ಮನುಷ್ಯನಿಗೂ ಕೋಪ-ತಾಪ ಇದ್ದೇ ಇರುತ್ತದೆ. ಉಪ್ಪು ಖಾರವನ್ನು ಉಪ್ಪಿನ ಕಾಯಿ ಜೊತೆ ಬಿರಿಯಾನಿ ಜೊತೆ ನೆಕ್ಕಿಕೊಂಡು ತಿನ್ನೋರು ನಾವು' ಎಂದು ಬಿಗ್ ಬಾಸ್ ಮನೆಯಲ್ಲಿ ಆಗಾಗ ಕೋಪಗೊಳ್ಳುತ್ತಿದ್ದ ಬಗ್ಗೆ ತಮಾಷೆಯಾಗಿ ಉತ್ತರಿಸಿದರು.












Click it and Unblock the Notifications