Bigg Boss Kannad: ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ ಕುಂದಾಪುರ; ಪರಿಸ್ಥಿತಿ ಗಂಭೀರ
ಬೆಂಗಳೂರು, ನವೆಂಬರ್ 16: ಬಿಗ್‌ಬಾಸ್ ಕನ್ನಡ 11ರಲ್ಲಿ ಚೈತ್ರಾ ಕುಂದಾಪುರ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಬಳಿಕ ಬಾತ್‌ರೂಂನಲ್ಲಿ ಕುಸಿದು ಬಿದ್ದ ಅವರನ್ನು ಮನೆಮಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದಾರೆ. ಅವರೊಬ್ಬರೇ ಬಾತ್ ರೂಮ್‌ನಲ್ಲಿ ಇರುವಾಗ ಈ ಘಟನೆ ನಡೆದಿದೆ. ಕೂಡಲೇ ಉಳಿದ ಸದಸ್ಯರಿಗೆ 'ಬಿಗ್ ಬಾಸ್' ಅಲರ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಕೂಡಲೇ ಅವರ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಓಡೋಡಿ ಬಂದರು. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ.
ತಕ್ಷಣವೇ ಚೈತ್ರ ಕುಂದಾಪುರ ಅವರಿಗೆ ನೀರು ಹಾಕಿ, ಎಬ್ಬಿಸಲು ಗೌತಮಿ ಮತ್ತು ಮೋಕ್ಷಿತಾ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಮನೆಯ ಎಲ್ಲಾ ಸದಸ್ಯರು ಕೂಡ ಅಲ್ಲಿಗೆ ಆಗಮಿಸಿದರು. ಎಲ್ಲರ ಮುಖದಲ್ಲೂ ಆತಂಕ, ಗಾಬರಿ ಕಾಣಿಸುತ್ತಿತ್ತು.ಕೂಡಲೇ ಅವರನ್ನು ಕನ್ಫೆಷನ್ ರೂಮಿಗೆ ಕರೆದುಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದರು. ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್‌ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟಾಸ್ಕ್ ಇರುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಎನರ್ಜಿ ಲೆವೆಲ್ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇನ್ನೂ ಚೈತ್ರಾ ಅವರು ಹೀಗೆ ಏಕಾಏಕಿ ಪ್ರಜ್ಞೆ ತಪ್ಪಿ ಬೀಳಲು ಕಾರಣ ಆಗಿದ್ದು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇನ್ನೂ ಚೈತ್ರಾ ಕುಂದಾಪುರ ಅವರನ್ನು ಎತ್ತಿಕೊಂಡು ಹೋಗುವಾಗ ತ್ರಿವಿಕ್ರಮ್ ಮಾತನಾಡಿ, ಅವರು ಬೆಳಗ್ಗೆಯಿಂದ ಏನೂ ತಿಂದಿಲ್ಲ, ಈಗ ತಿಂದ್ರು ಅಂತ ಕಾಣತ್ತೆ ಎಂದು ಹೇಳಿದರು. ಬಹುಶಃ ಊಟವನ್ನು ಸರಿಯಾಗಿ ಮಾಡದೇ ಇರುವುದಕ್ಕೆ ನಿಶ್ಯಕ್ತಿಯಿಂದ ಬಳಲಿದ ಚೈತ್ರಾ ಕುಂದಾಪುರ ಈ ರೀತಿ ಪ್ರಜ್ಞೆ ತಪ್ಪಿ ಬಿದ್ದಿರಬಹುದೇ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಬಿಗ್ ಬಾಸ್ ಮಾತ್ರ ಚೈತ್ರಾಗೆ ಏನಾಯಿತು ಎಂಬುದು ತಿಳಿಸಿಲ್ಲ. ಅತ್ತ ಎಂದಿನ ಟಾಸ್ಕ್‌ಗಳು ಮುಂದುವರಿದಿವೆ. ಕಳಪೆ ಮತ್ತು ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ಕಾಣಿಸಿಕೊಳ್ಳಲಿಲ್ಲ.
ಈ ಮೊದಲಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಶಿಶಿರ್ ನಡುವೆ ದೊಡ್ಡ ಜಗಳ ಆಗಿತ್ತು. ಆಗ ಚೈತ್ರಾ ಮೇಲೆ ಶಿಶಿರ್ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು. ಅನೇಕರ ಜೊತೆ ಚೈತ್ರಾ ಕಿರಿಕ್ ಮಾಡಿಕೊಂಡಿದ್ದಾರೆ. ಅನಗತ್ಯವಾಗಿ ಜೋರು ಧ್ವನಿಯಲ್ಲಿ ಮಾತನಾಡುವ ಮೂಲಕ ಅವರು ಕಿರಿಕ್ಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕುಂದಾಪುರ ಅವರಿಗೆ ಏನಾಗಿದೆ ಎಂಬುದನ್ನ ಬಿಗ್ ಬಾಸ್ ಸ್ಪಷ್ಟಪಡಿಸಬೇಕಾಗಿದೆ.












Click it and Unblock the Notifications