Bigg Boss: ಕೈ ಹಿಡಿಯದ ಕಳ್ಳೋಟು: ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ಹಂತಕ್ಕೆ ಬಂದು ತಲುಪಿದೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಫಿನಾಲೆಗೆ ಬಂದ ಆರು ಜನರ ಪೈಕಿ ಭವ್ಯ ಗೌಡ ಈಗಾಗಲೇ ಎಲಿಮಿನೇಟ್ ಆಗಿದ್ದು, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಟಾಪ್ ಐದು ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದಾರೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಮುಂದಿನ ಎಲಿಮಿನೇಷನ್ ಕೂಡ ನಡೆದಿದ್ದು, ಉಗ್ರಂ ಮಂಜು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಒಬ್ಬ ಬಲಿಷ್ಠ ಬಿಗ್ ಬಾಸ್ ಸ್ಪರ್ಧಿಗೆ ಇರಬೇಕಾದಂತಹ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಉಗ್ರಂ ಮಂಜು ಬಿಗ್ ಬಾಸ್ ಕನ್ನಡ ಸೀಜನ್ 11ರ ಆರಂಭದಲ್ಲಿಯೇ ಇವರು ಪಕ್ಕಾ ಫಿನಾಲೆ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಉಗ್ರಂ ಮಂಜು ಗುಡುಗಿಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಅಲ್ಲದೇ ಆಟದಲ್ಲಿ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದ ಉಗ್ರಂ ಮಂಜು ಗ್ರೇ ಏರಿಯಾ ಕಿಂಗ್ ಅಂತಾ ಕರೆಸಿಕೊಂಡರು. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಉಗ್ರಂ ಮಂಜು ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.

ಆದರೆ ಕಳೆದ ಕೆಲವು ವಾರದಿಂದ ಚಾರ್ಮ್ ಕಳೆದುಕೊಂಡಿದ್ದು, ಸ್ನೇಹ ಇನ್ನೊಂದು ಮತ್ತೊಂದು ಎಂದುಕೊಂಡು ಆಟದಲ್ಲಿಯು ಆಸಕ್ತಿ ಕಳೆದುಕೊಂಡಿದ್ದರು. ಕಿಚ್ಚ ಸುದೀಪ್ ಬುದ್ಧಿವಾದಕ್ಕೂ ಬದಲಾಗದ ಉಗ್ರಂ ಮಂಜು ಅಂತಿಮ ವಾರಗಳಲ್ಲಿ ಮತ್ತೆ ಆಟ ಆರಂಭಿಸಿದ್ದರು. ಅದೇನೇ ಇದ್ದರೂ ಮಂಜು ಗೆದ್ದೇ ಗೆಲ್ಲುತ್ತಾರೆ ಎನ್ನುವ ನಂಬಿಕೆ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ ಈ ಆಸೆ ಈಗ ನಿರಾಸೆಯಾಗಿದ್ದು ಮಂಜು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗ್ರ್ಯಾಂಡ್ ಫಿನಾಲೆ ಆರಂಭವಾಗಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಬಿಗ್ ಬಾಸ್‌ನಲ್ಲಿ ಉಗ್ರಂ ಮಂಜು ಗೆಲ್ಲಿಸಲು ಕಳ್ಳೋಟು
ಮಂಜು ಅವರು ಮದ್ಯ ಪ್ರಿಯರಾಗಿರುವ ಕಾರಣ ಮದ್ಯದ ಬಾಟಲಿಗಳು ಮಂಜುಗಾಗಿ ವಿಶೇಷ ಪ್ರಚಾರ ನಡೆಸಿವೆ ಎನ್ನುವ ತಮಾಷೆಯ ವಿಡಿಯೋವನ್ನು ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಹಾಕಲಾಗಿದೆ. ಈ ಹಿಂದೆ ಕೂಡ ಮಂಜುಗಾಗಿ ಈ ಮೂರು ಬಾಟಲಿಗಳು ವೇದಿಕೆ ಮೇಲೆ ಬಂದಿದ್ದವು. ಇದೀಗ ಮತ್ತೆ ವೇದಿಕೆ ಮೇಲೆ ಬಂದಿರುವ ಮೂರು ಬಾಟಲಿಗಳು, 'ಅಣ್ಣ ಅಂದರೆ ನಮ್ಮಣ್ಣ, ನಮಗಿರುವ ಒಬ್ಬರೇ ಅಣ್ಣ ಮಂಜಣ್ಣ. ನಮ್ಮನ್ನೆಲ್ಲಾ ಎಷ್ಟು ಮಿಸ್ ಮಾಡಿಕೊಳ್ಳುತ್ತೀದ್ದೀರಾ ಅಂತಾ ನೀವು ಸೊರಗಿ ಹೋಗಿರುವುದು ನೋಡಿದರೆ ಗೊತ್ತಾಗುತ್ತದೆ. ನಮ್ಮ ಇಡೀ ಸಮುದಾಯ ನಿಮಗೋಸ್ಕರ 90, 90 ವೋಟ್ ಹಾಕಿದ್ದೇವೆ ನಿಮಗೋಸ್ಕರ'.
'ನಿಮ್ಮನ್ನು ಗೆಲ್ಲಿಸದೇ ಹೋದರೆ ನಾಳೆಯಿಂದ ಯಾರಿಗೂ ಕುಡಿಯಲು ಸಿಗಲ್ಲ ಅಂತಾ ಜನರಿಗೆ ಹೆದರಿಸಿ ಬಿಟ್ಟಿದ್ದೇವೆ. ಎಲ್ಲರೂ ಒಳ್ಳೆ ವೋಟಿನಿಂದ ಗೆಲ್ಲಲು ಆಗುತ್ತದಾ? ಅದಕ್ಕೆ ಸ್ವಲ್ಪ ಕಳ್ಳೋಟು ಸಹ ಹಾಕಿಸಿದ್ದೇವೆ. ಅದರಿಂದ ಆದರೂ ಗೆದ್ದೇ ಗೆಲ್ಲುತ್ತೀಯಾ. ನೀವು ಗೆಲ್ಲಬೇಕು ಮಂಜಣ್ಣ, ಉಳಿದವರೆಲ್ಲಾ ಗೆಲ್ಲಿ ಮಂಜಣ್ಣಗೆ ಕಪ್ ಸಿಗಲಿ' ಎಂದು ಬಾಟಲಿಗಳು ಹೇಳಿರುವ ವಿಡಿಯೋ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.












Click it and Unblock the Notifications