Bro Gowda: ಪ್ರೀತಿಸಿದ ಹುಡುಗಿ ಜೊತೆ ನಟ ಬ್ರೋ ಗೌಡ ಅದ್ಧೂರಿ ಮದುವೆ
ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಶಮಂತ್ ಬ್ರೋ ಗೌಡ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ. ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಅವರೊಂದಿಗೆ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಇವರ ಆರತಕ್ಷತೆ ಕೂಡ ಅದ್ಧೂರಿಯಾಗಿ ನೆರವೇರಿತ್ತು. ಇಂದು ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯುವ ಮೂಲಕ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.
ಶಮಂತ್ ಉತ್ತರ ಕರ್ನಾಟಕದ ಹುಡುಗ. ಅವರ ಪೂರ್ತಿ ಹೆಸರು ಶಮಂತ್ ಹಿರೇಮಠ. ಮೇಘನಾ ಕುಟುಂಬಸ್ಥರು ಮರಾಠಿಗರು ಎನ್ನಲಾಗಿದ್ದು, ಹೀಗಾಗಿ ಎರಡೂ ಶೈಲಿ ಕೊಂಚ ಸಾಮ್ಯತೆ ಇದ್ದು, ಸಾಂಪ್ರದಾಯಿಕವಾಗಿ ಈ ಜೋಡಿ ಹಸೆಮಣೆ ಏರಿದ್ದಾರೆ. ಈ ಮದುವೆಗೆ ಕಿರುತೆರೆ ನಟ, ನಟಿಯರು, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮುದ್ದಾದ ಜೋಡಿಯ ಫೋಟೋಗಳು ಹರಿದಾಡುತ್ತಿವೆ.

ನಿನ್ನೆ ಬ್ರೋ ಗೌಡ ಅವರ ಆರತಕ್ಷತೆ ಸಮಾರಂಭ ಕೂಡ ಬಹಳ ಅದ್ಧೂರಿಯಾಗಿ ನೆರವೇರಿತ್ತು. ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್, ಬಿಗ್‌ಬಾಸ್ ನವಾಜ್, ರ‍್ಯಾಪರ್ ಆಲ್ ಓಕೆ, ನಟಿ ಮೌನ ಹಾಗೂ ಸೀರಿಯಲ್ ನಟ, ನಟಿಯರು ಆಗಮಿಸಿದ್ದರು.
ಲವ್ ಆಗಿದ್ದು ಹೇಗೆ?
ಮೇಘನಾ ಹಾಗೂ ಬ್ರೋ ಗೌಡ ಇಬ್ಬರೂ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಕಾಲೇಜುವೊಂದರ ಕಾರ್ಯಕ್ರಮದಲ್ಲಿ ಶಮಂತ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮೇಘನಾ ಅವರನ್ನು ಭೇಟಿಯಾಗಿ ಪರಿಚಯವಾಗಿತ್ತು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ತಮ್ಮ ಪೋಷಕರಿಗೆ ವಿಷಯ ತಿಳಿಸಿ ಮದುವೆಯಾಗಲು ನಿರ್ಧರಿಸಿದರು. ಇತ್ತೀಚೆಗಷ್ಟೇ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಬ್ರೋಗೌಡ ಎಂದೇ ಫೇಮಸ್ ಆಗಿದ್ದ ಶಮಂತ್ ಬಳಿಕ ಕನ್ನಡ ಬಿಗ್‌ಬಾಸ್ ಸೀಸನ್-8ರ ಸ್ಪರ್ಧಿಯಾಗಿದ್ದರು. ಇದಾದ ನಂತರವೂ ಬ್ರೋಗೌಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಕ್ರೇಜ್‌ನಲ್ಲಿ ಬಿಗ್‌ಬಾಸ್ ಬಳಿಕ "ಲಕ್ಷ್ಮಿ ಬಾರಮ್ಮ" ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸುವ ಅವಕಾಶ ಬ್ರೋಗೌಡ ಅವರಿಗೆ ಸಿಕ್ಕಿತ್ತು.
ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿರುವ ಬ್ರೋಗೌಡ ಮದುವೆ ಕೂಡ ಅದ್ಧೂರಿಯಾಗಿ ಮಾಡಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇತ್ತೀಚೆಗೆ ಅವರ ಹಳದಿ ಶಾಸ್ತ್ರ ಕೂಡ ನಡೆದಿತ್ತು. ಇದರ ಫೋಟೋಗಳನ್ನು ಶಮಂತ್ ಹಂಚಿಕೊಂಡಿದ್ದರು. ಮೇಘನಾ ಅವರ ಮನೆಯಲ್ಲಿ ನಡೆದಿದ್ದ ಹಳದಿ ಶಾಸ್ತ್ರದ ಫೋಟೊ ಹಾಗೂ ವೀಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುವ ಶಮಂತ್ ಬ್ರೋ, ನಟರಾಗಿಯೂ ಮಿಂಚುತ್ತಿದ್ದಾರೆ. ನಟ, ನಿರ್ದೇಶಕ, ಗಾಯಕನಾಗಿಯೂ ಗುರುತಿಸಿಕೊಂಡಿರುವ ಅವರು ಬೈಕ್ ರೈಡಿಂಗ್‌ನಲ್ಲೂ ಮುಂದು. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬ್ರೋಗೌಡ ದಂಪತಿಗೆ ನೂರ್ಕಾಲ ಬಾಳಿ ಎಂದು ಅವರ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.












Click it and Unblock the Notifications