Drone Prathap: ಜೈಲಿಂದ ರಿಲೀಸ್ ಆದ ಕೂಡಲೇ ಯೂಟ್ಯೂಬರ್‌ಗಳ ಮೇಲೆ ಡ್ರೋನ್ ʼಪ್ರತಾಪʼ
ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟಿಸಿದ್ದ ಕೇಸ್‌ನಲ್ಲಿ ತುಮಕೂರು ಜಿಲ್ಲೆಯ ಮಿಡಿಗೇಶಿ ಪೊಲೀಸರು ಪ್ರತಾಪ್ ಅವರನ್ನು ಬಂಧಿಸಿದ್ದರು. ಈ ಕೇಸ್‌ನಲ್ಲಿ ನಿನ್ನೆ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಡ್ರೋನ್ ಪ್ರತಾಪ್‌ಗೆ ಜಾಮೀನು ನೀಡಿತ್ತು.
ಈ ಹಿನ್ನೆಲೆ ಇಂದು ಡ್ರೋನ್ ಪ್ರತಾಪ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಪ್ರತಾಪ್ ಕೆಮಿಕಲ್ ಬಳಸಿ ಸ್ಫೋಟಿಸಿದ್ದರು. ಇದರ ವಿಡಿಯೋ ಮಾಡಿದ್ದಲ್ಲದೆ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆದ ಹಿನ್ನೆಲೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅರೆಸ್ಟ್ ಮಾಡಿದ್ದರು.

ಬಂಧನದ ಬಳಿಕ ಪ್ರತಾಪ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸುಮಾರು 10 ದಿನಗಳ ಕಾಲ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಮೊದಲಿಗೆ ಪ್ರತಾಪ್‌ಗೆ ಡಿಸೆಂಬರ್ 26ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ನಿನ್ನೆ ಜಾಮೀನು ಮಂಜೂರಾದರಿಂದ ಅವರಿಗೆ ಇಂದೇ ಬಿಡುಗಡೆ ಭಾಗ್ಯ ಸಿಕ್ಕಿದೆ.
ಜಾಮೀನು ಪ್ರಕ್ರಿಯೆ ಪೂರ್ಣಗೊಂಡು ಪ್ರತಾಪ್ ಜೈಲಿನಿಂದ ಹೊರಬರಲು ಇನ್ನೂ ಎರಡು ಮೂರು ದಿನಗಳು ಆಗಬಹುದು ಎಂದು ಹೇಳಲಾಗಿತ್ತು. ಆದರೆ ಇಂದೇ ಪ್ರತಾಪ್ ಅವರಿಗೆ ಮಂಜೂರಾದ ಜಾಮೀನು ಪ್ರತಿಯನ್ನು ಕಾರಾಗೃಹಕ್ಕೆ ಸಲ್ಲಿಕೆ ಮಾಡಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಮಧುಗಿರಿ ಕಾರಾಗೃಹದಿಂದ ಡ್ರೋನ್ ಪ್ರತಾಪ್ ಹೊರಗೆ ಬಂದಿದ್ದಾರೆ.
ಇನ್ನು ಇದು ತುಮಕೂರು ಜಿಲ್ಲೆಯ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪ್ರತಾಪ್ ಅಲ್ಲಿ ಯಾವುದೇ ಅನುಮತಿ ಪಡೆಯದೆ ಈ ರೀತಿ ಕೆಮಿಕಲ್ ಬಳಸಿ ಸ್ಫೋಟ ಮಾಡಿದ್ದರಿಂದ ಜೈಲು ಸೇರಬೇಕಾಯಿತು. ಅದರಂತೆ ಬಿಎನ್ಎಸ್ ಸೆಕ್ಷನ್ 288 ಹಾಗೂ ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರಡಿಯಲ್ಲಿ ಪ್ರತಾಪ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಪ್ರತಾಪ್ ಅವರನ್ನ ಡಿಸೆಂಬರ್ 12ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

ಡ್ರೋನ್ ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಪ್ರತಾಪ್ ಅವರು ಹಲವು ಗೌರವ ಹಾಗೂ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಬಳಿಕ ಅವೆಲ್ಲವೂ ಸುಳ್ಳು ಎಂದು ಕೆಲವರು ಆರೋಪ ಮಾಡಿದ್ದರು. ಆ ಬಳಿಕ ಪ್ರತಾಪ್ ಅವರು ಡ್ರೋನ್ ಪ್ರತಾಪ್ ಎಂದೇ ಎಲ್ಲೆಡೆ ಮನೆಮಾತಾಗಿದ್ದರು. ಇದೇ ಖ್ಯಾತಿ ಮೇರೆಗೆ ಪ್ರತಾಪ್ ಅವರಿಗೆ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಯೂ ಪ್ರತಾಪ್ ಜನಮನ್ನಣೆ ಗಳಿಸಿದ್ದರು.
ಇತ್ತೀಚೆಗೆ ವೈಜ್ಞಾನಿಕ ಪ್ರಯೋಗ ಮಾಡುತ್ತೇನೆ ಎಂದು ಹುರುಪಿನಲ್ಲಿದ್ದ ಪ್ರತಾಪ್ ಕೃಷಿ ಹೊಂಡದಲ್ಲಿ ಕಾನೂನುಬಾಹಿರವಾಗಿ ಸ್ಫೋಟಿಸಿದ್ದರು. ಈ ಕೇಸ್‌ನಲ್ಲಿ ಬಂಧನವಾಗಿ, ಜೈಲುವಾಸ ಅನುಭವಿಸಿ ಪ್ರತಾಪ್ ಇಂದು ಮಧುಗಿರಿ ಜೈಲಿನಿಂದ ಹೊರಬಂದಿದ್ದಾರೆ.
ದೇಶದಲ್ಲಿ ಹಲವು ಯೂಟ್ಯೂಬರ್‌ಗಳು 1 ಕೆ.ಜಿ.ಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಆದರೆ ನನ್ನ ಮೇಲೆ ಮಾತ್ರ ಏಕೆ ಕ್ರಮ ತೆಗೆದುಕೊಂಡಿದ್ದಾರೆ? ಎಂದು ಪ್ರತಾಪ್ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು ಎಂದೂ ಪ್ರತಾಪ್ ಆಗ್ರಹಿಸಿದ್ದಾರೆ.












Click it and Unblock the Notifications