Bigg Boss: ಬಿಗ್‌ಬಾಸ್‌ಗೆ 'ರಣಹದ್ದು' ಸಂಕಷ್ಟ, ಫಿನಾಲೆ ಹೊತ್ತಲ್ಲೇ ಬಂತು ನೋಟಿಸ್
ಕನ್ನಡ ಬಿಗ್‌ಬಾಸ್ ಸೀಸನ್-12 ಈ ಬಾರಿ ಹೆಚ್ಚು ವಿವಾದಗಳಿಂದಲೂ ಸುದ್ದಿ ಮಾಡುತ್ತಿದೆ. ಇನ್ನೇನು ಫಿನಾಲೆಗೆ ಒಂದೇ ದಿನ ಬಾಕಿ ಇರುವಾಗಲೂ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಪ್ರಸಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಸಿಲುಕಿದೆ. ರಣಹದ್ದು ಕುರಿತು ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ, ರಣಹದ್ದು ಸಂರಕ್ಷಣಾ ಟ್ರಸ್ಟ್ ಅರಣ್ಯ ಇಲಾಖೆಗೆ ದೂರು ನೀಡಿದ್ದ ಹಿನ್ನೆಲೆ ಇದೀಗ ಬಿಗ್‌ಬಾಸ್ ಆಯೋಜಕರಿಗೆ ಅರಣ್ಯ ಇಲಾಖೆಯಿಂದ ಅಧಿಕೃತ ತಿಳುವಳಿಕೆ ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.
ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನ ಅನ್ವಯ ಕ್ರಮ ಕೈಗೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ರಣಹದ್ದುಗಳು ಯಾವುದೇ ಜೀವಂತ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದು, ಹದ್ದು ಮತ್ತು ರಣಹದ್ದು ಎರಡೂ ಪಕ್ಷಿಗಳಾಗಿದ್ದರೂ, ಅವುಗಳ ಸ್ವಭಾವ, ಆಹಾರ ಪದ್ಧತಿ ಹಾಗೂ ಪರಿಸರದ ಪಾತ್ರದಲ್ಲಿ ಭಾರೀ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ. ಆದರೆ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ವೇಳೆ, ರಣಹದ್ದುಗಳನ್ನು "ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವ" ಪಕ್ಷಿಗಳಂತೆ ಚಿತ್ರಿಸಿರುವುದು ಸಂಪೂರ್ಣ ತಪ್ಪು ಮಾಹಿತಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಣಹದ್ದು ಬಗ್ಗೆ ತಪ್ಪು ಮಾಹಿತಿ ಆರೋಪ
ಈ ರೀತಿಯ ತಪ್ಪು ನಿರೂಪಣೆ ಪಕ್ಷಿ ಪ್ರೇಮಿಗಳು ಹಾಗೂ ಪರಿಸರ ಸಂರಕ್ಷಣಾ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಈಗಾಗಲೇ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಇಂತಹ ನಕಾರಾತ್ಮಕ ಹಾಗೂ ತಪ್ಪು ಸಂದೇಶಗಳು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಹುಟ್ಟಿಸಬಹುದಲ್ಲದೆ, ರಣಹದ್ದು ಸಂರಕ್ಷಣಾ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಟ್ರಸ್ಟ್ ತನ್ನ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆ ರಾಮನಗರ ಡಿಆರ್‌ಎಫ್ಓ ಸುಷ್ಮಾ ಅವರು ಖುದ್ದಾಗಿ ಬಿಗ್‌ಬಾಸ್ ಕಾರ್ಯಕ್ರಮದ ಪ್ರೋಗ್ರಾಂ ಹೆಡ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹದ್ದು ಮತ್ತು ರಣಹದ್ದು ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಜನರಿಗೆ ತಿಳಿಸುವಂತೆ ಹಾಗೂ ಕಾರ್ಯಕ್ರಮದಲ್ಲೇ ಸೂಕ್ತ ಸ್ಪಷ್ಟೀಕರಣ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ವನ್ಯಜೀವಿ ಹಾಗೂ ಪರಿಸರ ಸಂಬಂಧಿತ ವಿಷಯಗಳನ್ನು ಪ್ರಸಾರ ಮಾಡುವಾಗ ತಜ್ಞರ ಅಭಿಪ್ರಾಯ ಪಡೆದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ಎಚ್ಚರಿಕೆಯನ್ನೂ ಬಿಗ್‌ಬಾಸ್‌ಗೆ ನೀಡಲಾಗಿದೆ.

ಕನ್ನಡ ಬಿಗ್‌ಬಾಸ್ ಫೈನಲ್ ಹಂತದಲ್ಲಿರುವ ಈ ಸಂದರ್ಭದಲ್ಲಿ ಈ ವಿವಾದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ಸಣ್ಣ ನಿರೂಪಣಾ ದೋಷ ಎಂದು ಹೇಳುತ್ತಿದ್ದರೆ, ಅನೇಕರು ಜನಪ್ರಿಯ ಕಾರ್ಯಕ್ರಮಗಳು ಸಮಾಜಕ್ಕೆ ತಪ್ಪು ಸಂದೇಶ ನೀಡಬಾರದು ಎನ್ನುತ್ತಿದ್ದಾರೆ. ಈಗ ಎಲ್ಲರ ಗಮನ ಬಿಗ್‌ಬಾಸ್ ತಂಡದ ಮೇಲಿದ್ದು, ಅರಣ್ಯ ಇಲಾಖೆಯ ನೋಟಿಸ್‌ಗೆ ಯಾವ ರೀತಿಯ ಸ್ಪಷ್ಟೀಕರಣ ನೀಡಲಾಗುತ್ತದೆ ಮತ್ತು ಕಾರ್ಯಕ್ರಮದಲ್ಲಿ ರಣಹದ್ದುಗಳ ಬಗ್ಗೆ ಸರಿಯಾದ ಮಾಹಿತಿ ಪ್ರಸಾರ ಮಾಡಲಾಗುತ್ತದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications