Bigg Boss 12 Winner: ನಿಜವಾಯ್ತು ಜನರೇ ನುಡಿದ ಭವಿಷ್ಯ, ಗಿಲ್ಲಿ ಕೈಸೇರಿದ ಬಿಗ್‌ಬಾಸ್ ಟ್ರೋಫಿ
ರಾಜ್ಯದ ಜನತೆಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್‌ಬಾಸ್ ಕನ್ನಡ ಸೀಸನ್-12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಶೋ ಆರಂಭದಿಂದಲೇ ಗಿಲ್ಲಿಯೇ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದು, ಜನರು ನುಡಿದ ಭವಿಷ್ಯ ಕೊನೆಗೂ ನಿಜವಾಗಿದೆ.
ಇಂದು ನಡೆದ ಭರ್ಜರಿ ಫಿನಾಲೆಯಲ್ಲಿ ಗಿಲ್ಲಿ ಸೇರಿದಂತೆ ಧನುಷ್ ಗೌಡ, ರಘು, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಟಾಪ್-6 ಸ್ಪರ್ಧಿಗಳಾಗಿ ವೇದಿಕೆ ಏರಿದ್ದರು. ಕೊನೆಯ ಹಂತದಲ್ಲಿ ಮತಗಳ ಅಂತರ ತೀರಾ ಕಡಿಮೆ ಇದ್ದುದಾಗಿ ನಿರೂಪಕ ಕಿಚ್ಚ ಸುದೀಪ್ ತಿಳಿಸಿದ್ದಾರೆ. ಭಾರೀ ಪೈಪೋಟಿಯ ನಡುವೆಯೇ ಗಿಲ್ಲಿ ಹೆಚ್ಚಿನ ಮತಗಳನ್ನು ಪಡೆದು ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.

ಶೋ ಆರಂಭದಿಂದ ಕೊನೆಯವರೆಗೂ ಗಿಲ್ಲಿ ನೇರವಾದ ಮಾತು ಹಾಗೂ ಟಾಸ್ಕ್‌ಗಳಲ್ಲಿ ದಕ್ಷತೆಯಿಂದ ಗಮನ ಸೆಳೆದಿದ್ದರು. ಅನೇಕ ಸಂದರ್ಭಗಳಲ್ಲಿ ಒತ್ತಡದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ಜನಮನ ಗೆದ್ದಿದ್ದೇ ಅವರ ಗೆಲುವಿಗೆ ಪ್ರಮುಖ ಕಾರಣವೆಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಫಿನಾಲೆಗೆ ಮುನ್ನವೇ ಗಿಲ್ಲಿಗೆ ಭಾರೀ ಅಭಿಮಾನಿಗಳ ಬೆಂಬಲ ಕಂಡುಬಂದಿತ್ತು. ಬಿಗ್‌ಬಾಸ್ ಮನೆ ಎದುರು ಗಿಲ್ಲಿಯ ಕಟೌಟ್‌ಗಳು, ಬ್ಯಾನರ್‌ಗಳು ಅಳವಡಿಸಲಾಗಿದ್ದು, ಹಾಲಿನ ಅಭಿಷೇಕ ಕೂಡ ಮಾಡಲಾಗಿತ್ತು. ಫಿನಾಲೆ ದಿನ ನೂರಾರು ಅಭಿಮಾನಿಗಳು ಸೇರಿದ್ದರಿಂದ ಪೊಲೀಸರು ಜನಸಂದಣಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು.
ವಿನ್ನರ್ ಘೋಷಣೆಯಾದ ತಕ್ಷಣ ಗಿಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. "ಜನರ ವಿನ್ನರ್" ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಬಿಗ್‌ಬಾಸ್ ಕನ್ನಡ ಸೀಸನ್-12 ಗಿಲ್ಲಿಯ ಗೆಲುವಿನೊಂದಿಗೆ ಯಶಸ್ವಿಯಾಗಿ ಅಂತ್ಯ ಕಂಡಿದ್ದು, ಜನಮನದ ತೀರ್ಪು ಮತ್ತೊಮ್ಮೆ ಸ್ಪಷ್ಟವಾಗಿದೆ. ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು, ನಟ-ನಟಿಯರು ಕೂಡ ಗಿಲ್ಲಿನೇ ಗೆಲ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಗಿಲ್ಲಿ ಅವರ ಈ ಗೆಲುವು ಎಲ್ಲರ ನಿರೀಕ್ಷೆಗಳನ್ನು ನಿಜವಾಗಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ
ಗಿಲ್ಲಿ ವಿನ್ನರ್ ಘೋಷಣೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದ ಮಹಾಪೂರ ಹರಿದುಬಂದಿದೆ. "ಜನರ ವಿನ್ನರ್", "ನಿಜವಾದ ಗೆಲುವು", "ಗಿಲ್ಲಿ ಫೈರ್" ಎನ್ನುವ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಹಲವರು ಗಿಲ್ಲಿಯ ಪ್ರಯಾಣವನ್ನು ಶ್ಲಾಘಿಸಿ, ಅವರ ಸರಳತೆ ಮತ್ತು ಹೋರಾಟ ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ. ಗೆಲುವು ಗಿಲ್ಲಿಗೆ ಸಿಕ್ಕಿದರೂ, ಫಿನಾಲೆ ತಲುಪಿದ ಧನುಷ್ ಗೌಡ, ರಘು, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರ ಆಟಕ್ಕೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಶೋಗೆ ರಂಗು ತಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಟ್ರೋಫಿ ಕೈಗೆತ್ತಿಕೊಂಡ ಗಿಲ್ಲಿಗೆ ಅಭಿಮಾನಿಗಳು, ಸಹಸ್ಪರ್ಧಿಗಳು ಹಾಗೂ ಗಣ್ಯರಿಂದ ಅಭಿನಂದನೆಗಳ ಸುರಿಮಳೆ ಮುಂದುವರಿದಿದೆ.

ಗಿಲ್ಲಿಯ ಹಿನ್ನೆಲೆ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಗಿಲ್ಲಿ ನಟ (ನಟರಾಜ್) ಒಬ್ಬ ಕನ್ನಡ ಹಾಸ್ಯ ನಟ, ಯೂಟ್ಯೂಬರ್. ತಮ್ಮ ಐಟಿಐ ಓದಿನ ನಂತರ ಬೆಂಗಳೂರಿಗೆ ಬಂದು ಸೆಟ್ ಬಾಯ್ ಆಗಿ ಕೆಲಸ ಮಾಡಿದರು, ನಂತರ ಹಾಸ್ಯ ಕಲಾವಿದರಾದರು. ಯೂಟ್ಯೂಬ್‌ನಲ್ಲಿ 'ನಲ್ಲಿಮೂಳೆ' ಸ್ಕಿಟ್‌ಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ತಮ್ಮ ಹಳ್ಳಿಯ ಸೊಗಡಿನ ಹಾಸ್ಯ, ಪಂಚ್ ಡೈಲಾಗ್ಸ್‌ನಿಂದ ಜನಪ್ರಿಯತೆ ಪಡೆದಿದ್ದಾರೆ. ಅಲ್ಲದೆ 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮುಂತಾದ ಶೋಗಳಲ್ಲಿ ಭಾಗವಹಿಸಿದ್ದರು. ದರ್ಶನ್ ನಟನೆಯ 'ಡೆವಿಲ್' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications