BBK-12: ಬಿಗ್‌ಬಾಸ್‌ಗೆ ಮತ್ತೊಂದು ಶಾಕ್, ಈ ಸ್ಪರ್ಧಿ ವಿರುದ್ಧ ದೂರು ದಾಖಲು, ಕಾರಣವೇನು?
ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ವಿಘ್ನಗಳು ಒಂದೊಂದಾಗಿ ಎದುರಾಗುತ್ತಿವೆ. ಶೋ ಶುರುವಾಗಿ ಒಂದೇ ವಾರಕ್ಕೆ ದೊಡ್ಡ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ನೀಡಿತ್ತು. ಬಿಗ್‌ಬಾಸ್ ಮನೆಗೆ ಬೀಗ ಹಾಕಿ, ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಬಳಿಕ ವಿವಾದ ಇತ್ಯರ್ಥಗೊಂಡು ಕಾರ್ಯಕ್ರಮ ಮತ್ತೆ ಎಂದಿನಂತೆ ಮುಂದುವರಿದಿದೆ. ಇದೀಗ ಬಿಗ್‌ಬಾಸ್ ಸ್ಪರ್ಧಿಯೊಬ್ಬರ ಮೇಲೆ ದೂರು ದಾಖಲಾಗಿದೆ. ಕಳೆದ ಸೀಸನ್‌ಗಳಲ್ಲಿ ಕೆಲ ಸ್ಪರ್ಧಿಗಳಿಗೆ ಕಾನೂನು ಸಂಕಷ್ಟ ಎದುರಾಗಿತ್ತು. ನೇರವಾಗಿ ಬಿಗ್‌ಬಾಸ್ ಮನೆಯಿಂದಲೇ ಅರೆಸ್ಟ್ ಕೂಡ ಆಗಿದ್ದರು. ಈ ಸೀಸನ್‌ನಲ್ಲಿಯೂ ಸ್ಪರ್ಧಿಯೊಬ್ಬರ ಮೇಲೆ ದೂರು ದಾಖಲಾಗಿದೆ.
ಕನ್ನಡ ಹೋರಾಟಗಾರ್ತಿ ಹಾಗೂ ನಟಿಯಾಗಿ ಗುರುತಿಸಿಕೊಂಡು ಬಿಗ್‌ಬಾಸ್ ಮನೆ ಪ್ರವೇಶಿಸಿರುವ ಅಶ್ವಿನಿ ಗೌಡ ಅವರಿಗೆ ಕಂಟಕ ಎದುರಾಗಿದೆ. ಹೈಕೋರ್ಟ್ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಶ್ವಿನಿ ಅವರು ಮಾಡಿದ ಆ ಒಂದು ಎಡವಟ್ಟಿನಿಂದಾಗಿ ಈಗ ಕಾನೂನು ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳೊಂದಿಗೆ ಅಶ್ವಿನಿ ಗೌಡ ಅವರು ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದಾರೆ. ಕೋಪದಲ್ಲಿ ನಡೆದ ಘಟನೆಯಿಂದಾಗಿ ಅವರ ವಿರುದ್ಧ ದೂರು ದಾಖಲಾಗಿದೆ.

ಅಶ್ವಿನಿ ಗೌಡ ಅವರು ಈ ಸೀಸನ್‌ನ ಪ್ರಬಲ ಸ್ಪರ್ಧಿ ಎಂದು ಪ್ರೂವ್ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಜೊತೆಗಿನ ಕಿರಿಕ್ ಇದಕ್ಕೆ ಸಾಕ್ಷಿಯಾಗಿತ್ತು. ರಕ್ಷಿತಾ ವಿಚಾರವಾಗಿ ಅಶ್ವಿನಿ ಅವರ ನಡೆಗೆ ಎಲ್ಲರ ವಿರೋಧವೂ ವ್ಯಕ್ತವಾಗಿದೆ. ಈ ವೇಳೆ ರಕ್ಷಿತಾ ಬಗ್ಗೆ ಮಾತನಾಡುವಾಗ ಅಶ್ವಿನಿ ಗೌಡ ಬಳಸಿದ್ದ ಆ ಒಂದು ಪದ ಆಕ್ಷೇಪಿಸಿ ದೂರು ನೀಡಲಾಗಿದೆ.
ರಕ್ಷಿತಾ ಶೆಟ್ಟಿಯ ತೊಡುವ ಬಟ್ಟೆ, ನಡೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಅಶ್ವಿನಿ ಗೌಡ, ಆಕೆಯನ್ನು "She Is a S" ಎಂದಿದ್ದರು. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಕೂಡ ಖಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಅಶ್ವಿನಿ ಗೌಡ ಅವರು ಯಾವ ಅರ್ಥದಲ್ಲಿ "ಎಸ್" ಎಂದರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಏನೇನೋ ಅರ್ಥ ಕಲ್ಪಿಸಿಕೊಂಡು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಶ್ವಿನಿಗೌಡ ಅವರು ಜಾತಿಯನ್ನು ಉಲ್ಲೇಖಿಸಿ ಈ ರೀತಿ ಮಾತನಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇದೀಗ ರಕ್ಷಿತಾ ಶೆಟ್ಟಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅಶ್ವಿನಿಗೌಡ ಅವರಿಗೆ ಬಂಧನದ ಭೀತಿ ಶುರುವಾಗಿದೆ.












Click it and Unblock the Notifications