Bigg Boss: ಬಿಗ್‌ಬಾಸ್‌ಗೆ ಹೋಗಿ 11 ಕೆ.ಜಿ ತೂಕ ಕಳೆದುಕೊಂಡೆ: ಕಾರಣ ಬಿಚ್ಚಿಟ್ಟ ನಟ ಅಭಿಷೇಕ್
ಕಿರುತೆರೆ ನಟ ಅಭಿಷೇಕ್ ಶ್ರೀಕಾಂತ್ ಬಿಗ್‌ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿಯಾಗಿ 70 ದಿನಗಳ ಕಾಲ ಇದ್ದರು. ಕಳೆದ ವಾರ ನಡೆದ ಎಲಿಮಿನೇಷನ್‌ನಲ್ಲಿ ಅಭಿಷೇಕ್ ಬಿಗ್‌ಬಾಸ್ ಮನೆಯಿಂದ ಹೊರಬಂದರು. ಆದರೆ ಬಿಗ್‌ಬಾಸ್‌ನಲ್ಲಿದ್ದಾಗ ಅಭಿಷೇಕ್ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾದವು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ತೂಕ ಕಡಿಮೆಯಾಗಿದ್ದು, ಸಣ್ಣಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಅಸಲಿ ಕಾರಣವೇನು ಎಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
'ನನಗೆ ಮೊದಲ ಮೂರು ವಾರಗಳಲ್ಲಿ ಆಟವನ್ನು ಜಡ್ಜ್ ಮಾಡಬೇಕಿತ್ತು. ಆಗ ಎನರ್ಜಿ ಕೂಡ ಹೆಚ್ಚಾಗಿತ್ತು. ಆರಂಭದ ದಿನಗಳಲ್ಲಿ ನಮಗೆ ಮಾತನಾಡುವ ಅವಕಾಶ ಜಾಸ್ತಿ ಇತ್ತು. ಅಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಜಗಳ ಆಗ್ತಿತ್ತು. ಆದರೂ ಅವರವರೇ ಬಗೆಹರಿಸಿಕೊಳ್ತಿದ್ರು. ಆಲೂಗಡ್ಡೆಯಂತಹ ಸಣ್ ಸಣ್ಣ ವಿಚಾರಗಳಿಗೆ ನಾನು ಮಾತನಾಡಬೇಕಾ ಅನಿಸುತ್ತಿತ್ತು. ಅಲ್ಲಿಂದ ಇಲ್ಲಿವರೆಗೆ ಆದ ಗಲಾಟೆಗಳು ಗಮನಿಸಿದಾಗ ಯಾವುದಕ್ಕೆ ತೂಕ ಇತ್ತೋ ಅದಕ್ಕೆ ನಾನು ಮಾತನಾಡಿದ್ದೀನಿ, ಆ ವಿಚಾರಗಳ ಪರ ನಾನು ನಿಂತಿದ್ದೀನಿ. ಆದರೆ ಸಣ್ಣ ವಿಚಾರಗಳಿಗೆ ಮಾತನಾಡುವುದು, ಜಗಳ ಆಡುವುದು ನನ್ನ ಪರ್ಸನಾಲಿಟಿ ಅಲ್ಲ. ಹಾಗಾಗಿ ನಾನು ಹೆಚ್ಚಿಗೆ ಅಂತದ್ದನ್ನು ಮಾತನಾಡಲು ಹೋಗಲಿಲ್ಲ' ಎಂದಿದ್ದಾರೆ ಅಭಿಷೇಕ್.

'ಸ್ಟ್ರೆಸ್ ಜಾಸ್ತಿ ಇತ್ತು'
'ಬಿಗ್‌ಬಾಸ್‌ನಲ್ಲಿ ಊಟದ ಸಮಸ್ಯೆ ಏನಿಲ್ಲ. ಅಲ್ಲಿಗೆ ಪ್ರತಿ ವಾರವೂ ಅಗತ್ಯ ದಿನಸಿ ಬರುತ್ತೆ. ನಮ್ಮ ಆರೋಗ್ಯ ದೃಷ್ಟಿಯಿಂದ ಅವರು ನಮ್ಮನ್ನು ಚೆನ್ನಾಗಿಯೇ ನೋಡಿಕೊಳ್ತಿದ್ರು. ನಾನು ಬಿಗ್‌ಬಾಸ್ ಹೋದ ಆರಂಭಕ್ಕೂ ಈಗ ನಾನಿರುವ ಸ್ಥಿತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಬಿಗ್‌ಬಾಸ್‌ಗೆ ಹೋಗಿ ಸುಮಾರು 11 ಕೆ.ಜಿಯಷ್ಟು ತೂಕ ಕಡಿಮೆಯಾಗಿದೆ. ಇದಕ್ಕೆ ಕಾರಣ ಏನು ಎಂದು ನನಗೂ ತಿಳಿಯುತ್ತಿಲ್ಲ. ಬಿಗ್‌ಬಾಸ್‌ನಲ್ಲಿ ಊಟ ಅಂತೂ ಇತ್ತು. ಆದರೆ ನನ್ನ ಪ್ರಕಾರ ಒತ್ತಡದಿಂದ ಹೀಗೆ ಆಗಿರಬಹುದು' ಎಂದಿದ್ದಾರೆ ಅಭಿಷೇಕ್.
'ಬಿಗ್‌ಬಾಸ್ ಮನೆಯಲ್ಲಿ ಅಷ್ಟು ಕ್ಯಾಮೆರಾಗಳ ಮುಂದೆ ನಾನೊಬ್ಬ ನಟನಾಗಿ ಚೆನ್ನಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಇರುತ್ತೆ. ಆದರೆ ನನಗೆ ಆರೋಗ್ಯ ಸಮಸ್ಯೆಗಳೂ ಇದ್ದಿದ್ದರಿಂದ ಸವಾಲಾಗಿತ್ತು. ನಾನು ಬಿಗ್‌ಬಾಸ್ ಮನೆಗೆ ತಗೊಂಡು ಹೋಗಿದ್ದ ಬಟ್ಟೆಗಳು ಕೂಡ ತುಂಬಾ ಲೂಸ್ ಆಗಲು ಶುರುವಾಯ್ತು. ಆಗ ಭಾವನಾತ್ಮಕವಾಗಿ ನಾನು ಕುಗ್ಗಿದೆ. ಅಲ್ಲದೆ ಇಂತಹ ವಿಚಾರಗಳನ್ನು ಅಲ್ಲಿ ಯಾರ ಬಳಿಯೂ ಹೇಳಿಕೊಳ್ಳೋಕೆ ಆಗಲ್ಲ. ಯಾಕಂದ್ರೆ ಎಲ್ಲರೂ ಅಲ್ಲಿಗೆ ಕಾಂಪಿಟೇಷನ್ ಅಂತಲೇ ಬಂದಿರೋದು' ಎಂದಿದ್ದಾರೆ.
'ಮನೆಯವ್ರೂ ಶಾಕ್ ಆದ್ರು'
'ಬೇರೆಯವರಿಗೆ ಗೊತ್ತಾದರೆ ಇವನು ಮೆಂಟಲಿ ಸ್ಟ್ರಾಂಗ್ ಇಲ್ಲ ಅನ್ಕೋತಾರೆ ಅಂತ ಅದನ್ನು ಒಳಗೇ ಇಟ್ಟುಕೊಂಡಿದ್ದೆ. ಇದು ಕೂಡ ಕಾರಣ ಇರಬಹುದು. ಬಿಗ್‌ಬಾಸ್‌ನಿಂದ ಹೊರ ಬಂದ ಕೂಡಲೇ ಮನೆಯವರು ನನ್ನ ನೋಡಿ ಯಾಕೆ ಇಷ್ಟು ಸಣ್ಣ ಆಗಿದ್ದೀಯ ಅಂತ ಶಾಕ್ ಆಗಿ ಕೇಳಿದ್ರು. ನನಗೂ ಇಷ್ಟೆಲ್ಲ ತೂಕ ಕಳೆದುಕೊಳ್ತೀನಿ ಅಂತ ಅನಿಸಿರಲಿಲ್ಲ. ಈಗ ಮನೆಯ ಊಟ ಕೂಡ ಸರಿಯಾಗಿ ಸೇರುತ್ತಿಲ್ಲ. 70 ದಿನ ಬಿಗ್‌ಬಾಸ್ ಮನೆಯಲ್ಲಿ ಇದ್ದಿದ್ದರಿಂದ ಸಾಕಷ್ಟು ಬದಲಾವಣೆಗಳಾಗಿವೆ' ಎಂದು ಇತ್ತೀಚಿನ ಸಂದರ್ಶನದಲ್ಲಿ ಅಭಿಷೇಕ್ ಹೇಳಿದ್ದಾರೆ.












Click it and Unblock the Notifications