150 ಬಾಡಿಗಾರ್ಡ್ಸ್, 800 ಕೆಲಸದವರು, ದೊಡ್ಡ ಬಂಗಲೆ: ಬಿಗ್‌ಬಾಸ್ ಸ್ಪರ್ಧಿಯ ಐಷಾರಾಮಿ ಜೀವನ ನಿಜಾನಾ?
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಹೋಗುವ ಅನೇಕರು ಟ್ರೋಲ್‌ಗಳಿಗೆ ಆಹಾರವಾಗ್ತಾರೆ. ತಾವು ಹೇಳುವ ಡೈಲಾಗ್, ಮಾತು, ಹಾವಭಾವ, ಅಳು, ನಗು ಎಲ್ಲವೂ ಒಂದಲ್ಲ ಒಂದು ರೀತಿ ಟ್ರೋಲ್ ಆಗುತ್ತವೆ. ಆದರೆ ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ತಮ್ಮ ಬಗ್ಗೆ ಕೊಟ್ಟಿರುವ ಬಿಲ್ಡಪ್‌ನಿಂದಲೇ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ. ನಗರದಲ್ಲೇ ದೊಡ್ಡ ಬಂಗಲೆ, 150 ಬಾಡಿಗಾರ್ಡ್ಸ್, 800 ಮನೆಗೆಲಸದವರಿದ್ದಾರೆ ಎಂಬ ಹೇಳಿಕೆಗಳಿಂದಲೇ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಹೌದು ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 19ರ ಸ್ಪರ್ಧಿಯಾಗಿ ಹೋಗಿರುವ ಗ್ವಾಲಿಯರ್ ಮೂಲದ ಉದ್ಯಮಿ ತಾನ್ಯಾ ಮಿತ್ತಲ್ ತಮ್ಮ ಐಷಾರಾಮಿ ಜೀವನಶೈಲಿಯ ಬಗ್ಗೆ ಹೇಳುತ್ತಾ ವೈರಲ್ ಆಗಿದ್ದಾರೆ. ತಾನ್ಯಾ ಮಿತ್ತಲ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. 2025ರ ಮಹಾ ಕುಂಭ ಮೇಳದ ನಂತರ ಪ್ರಸಿದ್ಧರಾದ ತಾನ್ಯಾ, ತಮ್ಮ ಕುಟುಂಬವು ಗ್ವಾಲಿಯರ್‌ನಲ್ಲಿ ಹಾಗೂ ಇಡೀ ಮಧ್ಯಪ್ರದೇಶದಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದು ಹೇಳಿಕೊಂಡಿದ್ದಾರೆ.

ಅಡುಗೆಮನೆಯಲ್ಲಿ ಲಿಫ್ಟ್ ಇದೆ
ನಮ್ಮ ಕುಟುಂಬವು ಬಾಡಿಗಾರ್ಡ್ ಇಲ್ಲದೆ ಓಡಾಡುವುದಿಲ್ಲ. ನನಗೆ ಪಾರ್ಟಿ ಮಾಡುವುದು ಇಷ್ಟವಿಲ್ಲ. ಆದರೆ ಸಿಬ್ಬಂದಿ ಮತ್ತು ಅಂಗರಕ್ಷಕರನ್ನು ಒಳಗೊಂಡ ಜೀವನಶೈಲಿಯನ್ನು ಆನಂದಿಸುತ್ತೇನೆ. ಅಡುಗೆಮನೆಯಲ್ಲಿ ಲಿಫ್ಟ್ ಇದೆ. ಮನೆಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಬಿಗ್‌ಬಾಸ್‌ನಲ್ಲಿ ಇದೆಲ್ಲ ನನಗೆ ಹೊಸ ಅನುಭವ ಎಂದಿದ್ದಾರೆ. 150 ಅಂಗರಕ್ಷಕರು ಮತ್ತು 800 ಮನೆ ಸಿಬ್ಬಂದಿ ಇದ್ದಾರೆ ಎಂಬ ಅವರ ಹೇಳಿಕೆಗಳು ಸಖತ್ ಟ್ರೋಲ್ ಆಗ್ತಿದೆ.
ಸ್ನಾನ ಮಾಡುವ ಮೊದಲು ಏನು ಒಯ್ಯಬೇಕೆಂದು ನನಗೆ ತಿಳಿದಿಲ್ಲ, ಮಹಾಕುಂಭದಲ್ಲಿ ನನ್ನ ಅಂಗರಕ್ಷಕರು ಹಲವರ ಜೀವಗಳನ್ನು ಉಳಿಸಿದರು. ನಮ್ಮ ಮನೆ 7-ಸ್ಟಾರ್ ಹೋಟೆಲ್‌ನಂತೆ ಕಾಣುತ್ತೆ. ಇಡೀ ಮಹಡಿ ನನ್ನ ಬಟ್ಟೆಗಳಿಗೆ ಮಾತ್ರ ಸೀಮಿತ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದಾರೆ. ಅಲ್ಲದೇ ಅವರು 800 ಸೀರೆಗಳು, ಏಳು ಬಾಕ್ಸ್ ಆಭರಣಗಳು ಮತ್ತು ಎರಡು ಸೂಟ್‌ಕೇಸ್‌ಗಳೊಂದಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ತಾನ್ಯಾ ನಾನು ಕೋಟ್ಯಾಧಿಪತಿ, ನನ್ನತ್ರ ಸಾಕಷ್ಟು ಹಣವಿದೆ. ನಿರುದ್ಯೋಗಿಯನ್ನು ಮದುವೆಯಾಗಲು ಇಷ್ಟ ಎಂದೆಲ್ಲ ಹೇಳಿದ್ದರು. ಅದು ಕೂಡ ಈಗ ವೈರಲ್ ಆಗುತ್ತಿದೆ. ಆದರೆ ಕೆಲ ವರದಿಗಳ ಪ್ರಕಾರ ತಾನ್ಯಾ ಅವರ ಹಳೆಯ ಪೋಸ್ಟ್‌ಗಳೊಂದಿಗೆ ಅಸಲಿ ವಿಚಾರ ತಿಳಿಸಿದ್ದಾರೆ. ಅಲ್ಲಿ ಅವರ ಮನೆ ಸರಳ ಮತ್ತು ಮಧ್ಯಮ ವರ್ಗದವರಂತೆ ಕಾಣುತ್ತದೆ. ಐಷಾರಾಮಿ ಹೋಟೆಲ್‌ನಂತೆ ಅಲ್ಲ ಎನ್ನುತ್ತಿದ್ದಾರೆ. ಸುಮ್ಮನೆ ಹೈಪ್ ತೆಗೆದುಕೊಳ್ಳಲು ತಾನ್ಯಾ ಈ ರೀತಿ ತಮ್ಮನ್ನು ತಾವು ಹೊಗಳುತ್ತಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.












Click it and Unblock the Notifications