Anusha Rai: ವಿದೇಶದಲ್ಲಿ ಬಿಗ್ ಬಾಸ್ ಅನುಷಾ ರೈ: HMPV ವೈರಸ್ ಬಗ್ಗೆ ಹೇಳಿದ್ದೇನು?
ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದ ಜಗತ್ತಿಗೆ ಇದೀಗ ಚೀನಾದಿಂದಲೇ ಹೊಸ ವೈರಸ್‌ನ ಭೀತಿ ಶುರುವಾಗಿದೆ. HMPV ವೈರಸ್ ಅಂದರೆ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವ ಹೊಸ ವೈರಸ್ ಆತಂಕ ಎದುರಾಗಿದ್ದು, ಚೀನಾದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಸದ್ಯ ಭಾರತದಲ್ಲಿಯೂ ಈ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಎರಡು, ಗುಜರಾತ್‌ನಲ್ಲಿ ಒಂದು ಹಾಗೂ ತಮಿಳುನಾಡಿನಲ್ಲಿ ಎರಡು ಪ್ರಕರಣ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಸದ್ಯ ದೇಶದಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಆತಂಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಎಚ್ಚೆತ್ತುಕೊಂಡಿದ್ದು, ಹೊಸ ವೈರಸ್ ಬಗ್ಗೆ ಜನ ಅತಿಯಾಗಿ ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ತಿಳಿಸಿದೆ.

ಇನ್ನು ವೈರಸ್‌ಗಳನ್ನು ಜಗತ್ತಿಗೆ ಕೆಟ್ಟ ಉಡುಗೊರೆಯಾಗಿ ನೀಡುತ್ತಿರುವ ಚೀನಾ ದೇಶದಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾದಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಚರ್ಚೆ ಆಗುತ್ತಿದೆ. ಆದರೆ ಅಲ್ಲೇ ಇರುವ ಕೆಲ ಕನ್ನಡಿಗರು ಚೀನಾದಲ್ಲಿ ಅಂತಹ ಪರಿಸ್ಥಿತಿ ಏನೂ ಇಲ್ಲ. ಯಾರೂ ಹೆದರಬೇಡಿ, ಆತಂಕ ಪಡುವ ಅಗತ್ಯ ಇಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.
ಸದ್ಯ ಈ ಬಗ್ಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಅನುಷಾ ರೈ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಗ್ ಬಾಸ್ ಮನೆಯಿಂದ ಬಂದ ಅನುಷಾ ರೈ ಹಾಂಕಾಂಗ್ ಪ್ರವಾಸದಲ್ಲಿದ್ದಾರೆ. ಅನುಷಾ ರೈ ಅಲ್ಲಿನ ವಿಶೇಷ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಚೀನಾದಲ್ಲಿ ಇದ್ದೀರಾ? ಎಚ್ಚರವಾಗಿರಿ, ಬೇಗ ವಾಪಸ್ ಬನ್ನಿ ಎಂದು ಮೆಸೇಜ್ ಹಾಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಅನುಷಾ ರೈ, 'ಸಾಕಷ್ಟು ಜನ ನನಗೆ ಮೆಸೇಜ್ ಮಾಡಿ ಹೇಳುತ್ತಿದ್ದೀರಾ? ನೀವು ಚೀನಾದಲ್ಲಿ ಇದ್ದೀರಾ? ಎಚ್ಚರ ಅಂತ. ನಾನು ಇರುವುದು ಹಾಂಕಾಂಗ್‌ನಲ್ಲಿ. ಇಲ್ಲಿ ಎಲ್ಲವೂ ಸಹಜವಾಗಿದೆ. ಯಾವುದೇ ಸಾಂಕ್ರಾಮಿಕ ರೋಗದ ಆತಂಕ ಕಾಣಿಸುತ್ತಿಲ್ಲ. ಯಾರು ಕೂಡ ಮಾಸ್ಕ್ ಹಾಕಿಕೊಳ್ಳುವುದು, ಅಥವಾ ಒತ್ತಡದಲ್ಲಿ ಇರುವಂತಹ ಪರಿಸ್ಥಿತಿ ಇಲ್ಲ, ಜನ ಜೀವನ ಸಹಜವಾಗಿಯೇ ಇದೆ' ಎಂದಿದ್ದಾರೆ.
ಇನ್ನು 'ಪ್ರೀತಿಯಿಂದ ಮೆಸೇಜ್ ಮಾಡುತ್ತಿದ್ದೀರಾ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ನನ್ನ ಬಗ್ಗೆ ವಿಚಾರಿಸುತ್ತಿದ್ದೀರಾ? ಅಲ್ಲಿರಬೇಡಿ ಬೇಗ ವಾಪಸ್ ಬನ್ನಿ ಅಂತ ಹೇಳುತ್ತಿದ್ದೀರಾ. ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ನಾವು ಭಾರತೀಯರು ಯಾವಾಗಲೂ ಎಚ್ಚರಿಕೆಯಿಂದ ಇರುತ್ತೇವೆ. ಅಂತಹ ಸಮಸ್ಯೆ ಇಲ್ಲಿ ಕಾಣುತ್ತಿಲ್ಲ' ಎಂದು ಅನುಷಾ ರೈ ವಿಡಿಯೋ ಮೂಲಕ ಹೇಳಿದ್ದಾರೆ.












Click it and Unblock the Notifications