ವಯಸ್ಸು 90.. ಆದರೂ ಕುಗ್ಗದ ಹುಮ್ಮಸ್ಸು.. ಗ್ರೇಟ್ ಆಶಾ ಭೋಂಸ್ಲೆ!
ಅವರ ಹೆಸರು ಕೇಳಿದರೆ ಸಾಕು ಕಿವಿ ಇಂಪಾಗುತ್ತದೆ, ಅವರ ಹಾಡು ಕೇಳುತ್ತಿದ್ದರೆ ಮನಸ್ಸು ತಂಪಾಗುತ್ತದೆ. ರೆಟ್ರೋ ಹಾಡುಗಳಿಂದ ಹಿಡಿದು, ಮೆಟ್ರೋ ತನಕ ಇವರು ಸದ್ದು ಮಾಡಿ, ಜನರ ಮನಸ್ಸು ಗೆದ್ದವರು. ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಮಾತಾಡ್ತಾ ಇದ್ದೀವಿ ಅಂತಾ ನಿಮಗೆ ಗೊತ್ತಾಗಿರಬಹುದು. ಹೌದು ಅವರು ಬೇರೆ ಯಾರೂ ಅಲ್ಲ 10ನೇ ವರ್ಷ ವಯಸ್ಸಿಗೆ ಗಾನ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಆಶಾ ಭೋಂಸ್ಲೆ ಅವರು.
ಕೋಟ್ಯಂತರ ಭಾರತೀಯರ ಹೃದಯ ಗೆದ್ದು, ಜಗತ್ತಿನಾದ್ಯಂತ ಸದ್ದು ಮಾಡಿರುವ ಗಾಯಕಿ ಆಶಾ ಭೋಂಸ್ಲೆ ಅವರು ಇಂದು 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಕೋಟ್ಯಂತರ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಸೆಲೆಬ್ರಿಟೀಸ್ ತಮ್ಮ ನೆಚ್ಚಿನ ಗಾಯಕಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ, ಸ್ಯಾಂಡಲ್‌ವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸೇರಿ ಭಾರತೀಯ ಸಿನಿಮಾ ಜಗತ್ತಿನ ದಿಗ್ಗಜರು ಕೂಡ ಆಶಾ ಭೋಂಸ್ಲೆ ಅವರಿಗೆ ಶುಭ ಕೋರಿದ್ದಾರೆ. ಹಾಗಾದರೆ ಆಶಾ ಭೋಂಸ್ಲೆ ಹಾಡಲು ಶುರು ಮಾಡಿದ್ದು ಯಾವಾಗ? ಬನ್ನಿ ತಿಳಿಯೋಣ.

ಸ್ವಾತಂತ್ರ್ಯ ಬರುವ ಮೊದಲೇ ಹಾಡಿದ್ದರು!
ಹೌದು, ಆಶಾ ಭೋಂಸ್ಲೆ ಅವರು ಹಾಡಲು ಶುರು ಮಾಡಿ ಇನ್ನೇನು ಒಂದು ಶತಮನಾವೇ ಪೂರ್ಣಗೊಳ್ಳುತ್ತದೆ. ಏಕೆಂದರೆ 1943ರಲ್ಲಿ ತೆರೆ ಕಂಡಿದ್ದ ಮರಾಠಿ ಸಿನಿಮಾ 'ಮಜಾ ಬಾಲ್' ಮೂಲಕ ಆಶಾ ಅವರು ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡರು. ಹೀಗೆ 10ನೇ ವಯಸ್ಸಿಗೆ ಗಾಯನ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಇದಾಗಿ 5 ವರ್ಷಗಳ ನಂತರ 1949ರಲ್ಲಿ 'ರಾತ್ ಕಿ ರಾಣಿ' ಮೂಲಕ ಸೋಲೋ ಹಾಡು ಹಾಡಿದರು. ಅಲ್ಲದೆ ಮತ್ತೊಂದು ವಿಶೇಷತೆ ಏನೆಂದ್ರೆ ಆಶಾ ಭೋಂಸ್ಲೆ ಅವರು ಮತ್ತೊಬ್ಬ ಖ್ಯಾತ ಗಾಯಕಿ ಸಹೋದರಿ ಕೂಡ ಹೌದು.
ಲತಾ ಮಂಗೇಶ್ಕರ್ ಸಹೋದರಿ ಆಶಾ!
ಭಾರತದ ಗಾಯನ ಲೋಕದಲ್ಲಿ ಮಿಂಚಿದ ಆಶಾ ಭೋಂಸ್ಲೆ ಅವರು ಲತಾ ಮಂಗೇಶ್ಕರ್‌ರ ಸಹೋದರಿ. ಹೀಗೆ ಅಕ್ಕ-ತಂಗಿ ಇಬ್ಬರೂ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದರು. ಹೀಗೆ ಆಶಾ ಭೋಂಸ್ಲೆ ಹಾಗೂ ಲತಾ ಮಂಗೇಶ್ಕರ್ ಅವರು ಸಾವಿರಾರು ಹಾಡುಗಳಿಗೆ ಧ್ವನಿಯಾದರು. ಒಂದು ಕಾಲದಲ್ಲಿ ಈ ಇಬ್ಬರ ಹಿನ್ನೆಲೆ ಗಾಯನ ಇಲ್ಲದೆಯೇ ಭಾರತದಲ್ಲಿ ಸಿನಿಮಾ ರಿಲೀಸ್ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸಿನಿಮಾ ಪ್ರೇಮಿಗಳ ಮೇಲೆ ಹಾಗೂ ಹಾಡುಗಳನ್ನ ಇಷ್ಟಪಡುತ್ತಿದ್ದವರ ಮೇಲೆ ಪ್ರಭಾವ ಬೀರಿದ್ದರು ಆಶಾ ಭೋಂಸ್ಲೆ.

ಕಷ್ಟದ ದಿನಗಳನ್ನು ನೆನೆದಿದ್ದ ಗಾಯಕಿ
ಸಾಧನೆ ಮಾಡುವುದು ಸುಲಭದ ಮಾತಲ್ಲ, ಆದರೆ ಆ ಸಾಧನೆ ಮಾಡಿದ ನಂತರ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರೆ ಕಣ್ಣೀರು ಬರುತ್ತದೆ. ಹೀಗೆ ಪ್ರತಿಯೊಬ್ಬ ಸಾಧಕನಿಗೆ ಇಂತಹ ಕಷ್ಟದ ಅರಿವು ಖಂಡಿತ ಆಗಿರುತ್ತದೆ. ಅದೇ ರೀತಿ ಆಶಾ ಭೋಂಸ್ಲೆ ಅವರು ಕೂಡ ಸಾಕಷ್ಟು ಕಷ್ಟ ಹಾಗೂ ಸವಾಲುಗಳನ್ನು ಎದುರಿಸಿ, ಕಷ್ಟಗಳನ್ನ ಮೆಟ್ಟಿ ನಿಂತರು. ಹೀಗೆ ತಮ್ಮ ಅಭಿಮಾನಿಗಳಿಗೆ ಗಾಯನದ ಮೂಲಕ ಮಾತ್ರವಲ್ಲ, ಹಾಡುಗಳ ಜೊತೆಗೆ ತಮ್ಮಲ್ಲಿನ ಆತ್ಮಸ್ಥೈರ್ಯದ ಮೂಲಕವು ಆಶಾ ಭೋಂಸ್ಲೆ ಅವರು ಮಾದರಿಯಾದರು. ಅಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳಿಗೂ ತಮ್ಮ ಧ್ವನಿ ಮೂಲಕ ಹತ್ತಿರವಾಗಿದ್ದರು.
ಕನ್ನಡದಲ್ಲೂ ಆಶಾ ಭೋಂಸ್ಲೆ ಹಾಡು
ಅಂದಹಾಗೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಆಶಾ ಭೋಂಸ್ಲೆ ಅವರು ದೇಶದ ವಿವಿಧ ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಈ ಮೂಲಕ ಆಶಾ ಅವರು ಈವರೆಗೆ ಎಲ್ಲಾ ಭಾಷೆಗಳು ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಕನ್ನಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ 'ಯಾಕೋ ಏನೋ', ದೂರದ ಬೆಟ್ಟದ 'ಸವಾಲು ಹಾಕಿ ಸೋಲಿಸಿ', ಸೇರಿದಂತೆ ಮತ್ತೆ ಮುಂಗಾರು ಚಿತ್ರದ 'ಹೇಳದೆ ಕಾರಣ..' ಹಾಡುಗಳನ್ನು ಹಾಡಿದ್ದಾರೆ. ಹೀಗೆ ಕನ್ನಡ ಸಿನಿಮಾ ಪ್ರೇಮಿಗಳ ಮನವನ್ನೂ ಗೆದ್ದಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಗಾಯಕಿ ಆಶಾ ಭೋಂಸ್ಲೆ ಅವರು, ಚುರಾಲಿಯಾ ಹೈ ತುಮ್‌ನೇ ಜೋ ದಿಲ್ ಕೋ, ತೂ ತೂ ಹಿ ವಹಿ, ಪಿಯಾ ತೂ ಅಬ್ ತೋ ಆಜಾ, ಧಮ್ ಮಾರೋ ಧಮ್, ಓ ಮೆರಿ ಸೋನಾ ರೇ ಸೋನಾರೆ, ಜುಮ್ ಕಾ ಗೀರಾ ರೆ, ಜವಾನಿ ಜಾನೇ ಮನ್ ಹೀಗೆ ಸಾವಿರಾರು ಹಿಂದಿ ಹಾಡು ಹಾಡಿದ್ದಾರೆ. ಇದರ ಜೊತೆಗೆ ಕನ್ನಡ, ಬಂಗಾಳಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಒರಿಯಾ, ಪಂಜಾಬಿ ಹಾಗೂ ಭೋಜ್‌ಪುರಿ ಭಾಷೆಗಳಲ್ಲೂ ಹಾಡು ಹಾಡಿದ್ದಾರೆ.












Click it and Unblock the Notifications