ನನ್ನ ಕಣ್ಣ ಮುಂದೆ ಅಪ್ಪನನ್ನು ಪೊಲೀಸರು ಎಳೆದುಕೊಂಡು ಹೋದರು- ಅನುಪಮಾ ಗೌಡ
ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಅವರ ಬಹುಕಾಲದ ಕನಸು ಇತ್ತೀಚಿಗಷ್ಟೆ ನನಸಾಗಿತ್ತು. ಚಿಕ್ಕ ವಯಸ್ಸಿನಿಂದಲೂ ತುಂಬ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದ ಅನುಪಮಾ ಗೌಡ ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಮತ್ತೊಂದು ಸಂತೋಷ ಕೂಡ ಅರಸಿ ಬಂದಿದ್ದು, 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ದೊರೆತಿದೆ.
ಸದ್ಯ ತಮ್ಮ ಜೀವನವನ್ನು ಸುಂದರವಾಗಿ ಕಟ್ಟಿಕೊಂಡಿರುವ ಅನುಪಮಾ ಗೌಡ, ಬಾಲ್ಯದಲ್ಲಿ ಬಹಳ ಕಷ್ಟ ಅನುಭವಿಸಿದ್ದರು. ಈ ಬಗ್ಗೆ ಅವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 'ನಾವು ಚಿಕ್ಕವರಿದ್ದಾಗಲೂ ಬಾಡಿಗೆ ಮನೆಯಲ್ಲಿ ಇದ್ದೆವು. ನಾನು ಅಪ್ಪ ಅಮ್ಮ, ನನಗೆ ಐದೂವರೆ ವರ್ಷ ಆದ ಮೇಲೆ ತಂಗಿ ಹುಟ್ಟಿದ್ದಳು. ಚಿಕ್ಕವಳಿದ್ದಾಗ ನಾನು ಅಮ್ಮನ ಮಗಳು. ಅಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಪ ಸಿನಿಮಾದಲ್ಲಿ ಅಸೋಸಿಯೇಟೆಡ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಪ್ಪನಿಂದ ಮನೆಗೆ ಯಾವುದೇ ಆದಾಯ ಇರಲಿಲ್ಲ. ಅಮ್ಮನೇ ಬೇರೆಯವರ ಮನೆ ಕೆಲಸ ಮಾಡಿ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ಮನೆ ಹಾಗೂ ನಮ್ಮ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು' ಎಂದರು.

'ಅಪ್ಪ ಸಿನಿಮಾ ಅಂತಾ ತುಂಬಾ ಓಡಾಡುತ್ತಿದ್ದರು. ಮನೆಗೆ ಬಂದರು ಸಹ ದುಡ್ಡು ತರುತ್ತಿರಲಿಲ್ಲ. ಹಣ ಇಲ್ಲದೇ ಇರುವುದಕ್ಕೆ ಅವರೇನೋ ಒಂದು ಕಾರಣ ಕೊಡುತ್ತಿದ್ದರು. ಆ ಸಮಯದಲ್ಲಿ ಅಮ್ಮ ಅವರ ಫ್ರೆಂಡ್‌ಗೆ ಸಾಲ ಮಾಡಿಕೊಟ್ಟಿದ್ದರು. ಅದನ್ನು ಕೇಳಲು ಹೋದಾಗ ಅಮ್ಮನ ಮೇಲೆ ದೂರು ಕೊಟ್ಟರು. ನಮ್ಮ ತಂದೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಕಂಪ್ಲೈಟ್ ಕೊಟ್ಟರು'.
'ಆ ದಿನ ನಾನು, ನಮ್ಮ ಅಪ್ಪ ಇದ್ದಾಗ ಪೊಲೀಸರು ಬಂದು ನನ್ನ ಅಪ್ಪನನ್ನು ಕರೆದುಕೊಂಡು ಹೋದರು. ನಮ್ಮ ಅಪ್ಪನನ್ನು ಪೊಲೀಸರು ಕರೆದುಕೊಂಡು ಹೋಗಿರುವುದು ನನಗೆ ಇನ್ನೂ ನೆನಪಿದೆ. ರಾತ್ರಿ ಅಮ್ಮ ಅವನ್ನು ವಾಪಸ್ ಕರೆದುಕೊಂಡು ಬಂದಾಗ ಅವರ ಮುಖಕ್ಕೆಲ್ಲಾ ಹೊಡೆದು ಬಿಟ್ಟಿದ್ದರು. ಆ ದಿನ ನಮ್ಮ ಅಪ್ಪ ನಿರ್ಧಾರ ಮಾಡಿದರು ಆ ಸಾಲವನ್ನು ಏನೇ ಆಗಲಿ ನೀನೇ ತೀರಿಸಬೇಕು ಎಂದು ಹೇಳಿದರು. ಅಲ್ಲಿಂದ ನಾವು ಕಷ್ಟಗಳನ್ನು ನೋಡಲು ಶುರು ಮಾಡಿದೆವು' ಎಂದು ಹೇಳಿದರು.

'ಮೊದಲು ಜೀವನ ತುಂಬಾ ಚೆನ್ನಾಗಿತ್ತು. ನಮ್ಮಮ್ಮ ಗಾರ್ಮೆಂಟ್ಸ್‌ನಿಂದ ಬಂದು ಬಿಸಿ ಬಿಸಿ ಊಟ ಮಾಡಿ ತಿನ್ನಿಸುತ್ತಿದ್ದರು. ನಮ್ಮ ಅಪ್ಪ ಶೂಟಿಂಗ್‌ಗೆ ಅಂತಾ ಎರಡು ಮೂರು ದಿನ ಹೋಗಿ ವಾಪಸ್ ಬಂದರೂ ಕೂಡ ನಾವು ಖುಷಿಯಾಗಿದ್ದೆವು. ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ನಮ್ಮ ಕುಟುಂಬ ತುಂಬಾ ಚೆನ್ನಾಗಿತ್ತು. ಆದರೆ ಒಂದು ಸಲ ಶುರುವಾದ ಕಷ್ಟ ಆರು ವರ್ಷಗಳ ಹಿಂದೆ ಅಂದರೆ 2019ರ ತನಕ ನಾವು ನೋಡಿದ್ದೇವೆ. ನಾನು ಬರಿ ಕಷ್ಟವನ್ನೇ ನೋಡಿಕೊಂಡು ಬಂದಿರುವುದು'.
'ಚಿಕ್ಕ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಅಂತಹ ಅದ್ಭುತವಾಗಿ ಏನಿರಲಿಲ್ಲ. ನಮ್ಮ ಪೋಷಕರಿಗೆ ವಿದ್ಯಾಭ್ಯಾಸ ಇರಲಿ, ಒಂದು ಹೊತ್ತಿನ ಊಟ ಕೊಡುವುದು ಕೂಡ ಕಷ್ಟ ಆಗಿತ್ತು. ಈ ಒಂದು ಸಾಲದಿಂದ ಶುರುವಾಗಿದ್ದು ಜೀವನ ಪರ್ಯಂತ ಸಾಲ ಆಯ್ತು. ಈ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಹೀಗೆ ಸಾಲಗಳು ದೊಡ್ಡದಾಗಿ ಹೋಯಿತು. ಅಮ್ಮ ಹಗಲು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಮನೆಯಲ್ಲಿ ಪೀಸ್ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ನನ್ನನ್ನು ಸೇರಿಸಿಕೊಂಡರು. ನಾನು ಟ್ರೈಲರಿಂಗ್ ಕಲಿಯಬೇಕು ಎಂದರು'.
'ಅವರು ಒಬ್ಬರೇ ಕೆಲಸ ಮಾಡುತ್ತಿದ್ದರಿಂದ ಅವರ ಒತ್ತಡಕ್ಕೆ ನನಗೆ ಹೊಡೆಯುತ್ತಿದ್ದರು. ಹೀಗಾಗಿ ಶರ್ಟ್ ಹೊಲಿಯುವುದನ್ನು ನಾನು ಐದನೇ ತರಗತಿಯಲ್ಲೇ ಕಲಿತೆ. ಅವರ ಜೊತೆ ಭಾನುವಾರ ಕೆಲಸಕ್ಕೆ ಹೋಗುತ್ತಿದ್ದೆ. ಇಡೀ ದಿನ ಅಲ್ಲೇ ಕೆಲಸ ಮಾಡುತ್ತಿದ್ದೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಕಷ್ಟದಲ್ಲಿ ಕೆಲಸ ಕಲಿತು ಮಾಡಲು ಶುರು ಮಾಡಿದೆ' ಎಂದರು.
'ಇದರಿಂದ ದಿನ ಕಳೆದಂತೆ ಅಮ್ಮ-ಅಮ್ಮನ ಸಂಬಂಧದಲ್ಲಿಯೂ ಮನಸ್ತಾಪ ಆರಂಭವಾಯಿತು. ಮನೆಯಲ್ಲಿ ಒಂದು ಗಂಡು ಮಗು, ಗಂಡಸು ಅಥವಾ ಗಂಡ ಏನೂ ಮಾಡದೇ ಇದ್ದಾಗ, ಅದರಲ್ಲೂ ಇಬ್ಬರು ಹೆಣ್ಣು ಮಕ್ಕಳು ಇದ್ದಾಗ ಸಾಮಾನ್ಯವಾಗಿ ಎಲ್ಲರಿಗೂ ಕೋಪ ಬರುತ್ತದೆ. ಮೊದಲು ಮಾತಿನಿಂದ ಶುರುವಾಗುತ್ತಿದ್ದ ಗಲಾಟೆ ಬಳಿಕ ದೈಹಿಕವಾಗಿಯು ನಡೆಯುತ್ತಿದ್ದನ್ನು ನಾನು ನೋಡಿದ್ದೇನೆ. ಆದರೆ ಅವರಿಬ್ಬರ ನಡುವೆ ಎಂತಹ ಹೊಂದಾಣಿಕೆ ಇತ್ತು ಎಂದರೆ ಎರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತಿತ್ತು. ನೋಡುವವರಿಗೆ ಇವರಿಬ್ಬರೇನಾ ಇಷ್ಟೆಲ್ಲಾ ಜಗಳ ಮಾಡಿರುವುದು ಅಂತಾ ಅನಿಸುತ್ತಿತ್ತು'.
'ಆ ಸಮಯದಲ್ಲಿ ನಾನು ಯಾವಾಗಲೂ ನನ್ನ ತಾಯಿ ಕಡೆ ಇರುತ್ತಿದ್ದೆ. ನನ್ನ ತಂದೆ ಹೊಡೆಯುವುದನೆಲ್ಲಾ ನೋಡಿದ ಮೇಲೆ ಅವರ ಮೇಲೆ ಅವರೆಂದರೆ ನನಗೆ ಆಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಅಮ್ಮ ಕಷ್ಟಪಡುವುದನ್ನು ನಾನೇ ಸ್ವತಃ ನೋಡುತ್ತಿದ್ದೆ. ನಾನೇ ಒಂದು ದಿನ ಅಮ್ಮನಿಗೆ ಹೇಳಿದ್ದೆ ಅವರು ಹೊಡೆದಾಗ ನೀನು ತಿರುಗಿಸಿ ಕೊಡು ಇಲ್ಲ ಅಂದರೆ ಅವರು ಹೊಡೆಯುತ್ತಲೇ ಇರುತ್ತಾರೆ ಅಂತಾ. ಆ ಒಂದು ದಿನಾ ಅದೇನಾಯ್ತೋ ಗೊತ್ತಿಲ್ಲ ಅಮ್ಮ ಹಾಗೇ ಮಾಡಿದರು ಕೂಡ. ಬಳಿಕ ಅದು ಸ್ವಲ್ಪಮಟ್ಟಿಗೆ ಕಮ್ಮಿ ಆಯಿತು'.
'ಆಮೇಲೆ ಇಬ್ಬರಿಗೂ ಸ್ವಲ್ಪ ವಯಸ್ಸಾಗಿ ಜವಾಬ್ದಾರಿ ಜಾಸ್ತಿಯಾದ ಮೇಲೆ ಅವರಿಬ್ಬರ ಬರೀ ಗಲಾಟೆಗಳನ್ನೇ ನಾನು ನೋಡಿದ್ದೇನೆ. ಎಷ್ಟೇ ಜಗಳ ಗಲಾಟೆ ಮಾಡಿದರೂ ಮತ್ತೆ ಸರಿ ಹೋಗುತ್ತಿದ್ದರು. ಯಾವತ್ತೂ ಆ ಸಂಬಂಧನಾ ಕೊನೆ ಮಾಡಬೇಕು ಅಂತಾ ಅಂದುಕೊಳ್ಳಲೇ ಇಲ್ಲ. ಹಾಗೇ ಇದ್ದರೂ ಕೂಡ. ನಾನು ಬಾಲ್ಯದಲ್ಲಿ ಎಲ್ಲಾ ಕೆಟ್ಟ ವಿಚಾರಗಳನ್ನು ನೋಡಿದ್ದೇನೆ. ಕೆಲವೊಂದನ್ನು ಹೇಳಿಕೊಳ್ಳಲೂ ಸಹ ಆಗುವುದಿಲ್ಲ'.
'ನಮ್ಮ ಅಮ್ಮ ಸಂಬಂಧಿಕರನ್ನು ಮನೆಗೆ ಸೇರಿಸುತ್ತಿರಲಿಲ್ಲ. ನಮ್ಮ ತಂದೆ ಕಡೆ ಸ್ವಲ್ಪ ಜನ, ತಾಯಿ ಕಡೆ ಕೆಲವರು ಮಾತ್ರ ನನಗೆ ಗೊತ್ತು. ಈಗ ಅಮ್ಮ ಬೈತಾರೆ ಯಾರ ಮನೆ ಕಾರ್ಯಕ್ರಮಕ್ಕೂ ಹೋಗಲ್ಲ ಅಂತಾ. ಆದರೆ ನನಗೆ ಅವರೆಲ್ಲಾ ಯಾರೂ ಅಂತಾನೂ ಗೊತ್ತಿಲ್ಲ. ಆ ಕಷ್ಟದ ಸಮಯದಲ್ಲಿ ಅಮ್ಮ ಯಾರನ್ನೂ ಸೇರಿಸುತ್ತಿರಲಿಲ್ಲ, ಯಾರ ಜೊತೆಗೂ ಬೆರೆಯುತ್ತಿರಲಿಲ್ಲ. ಒಟ್ಟಾರೆ ನನ್ನ ಬಾಲ್ಯ ಚೆನ್ನಾಗಿ ಇರಲಿಲ್ಲ. ಬಾಲ್ಯ ಅಂತಲ್ಲಾ ನನಗೆ ಇಪ್ಪತ್ತೊಂಬತ್ತು ವರ್ಷ ಆಗುವ ತನಕ ಕಷ್ಟಗಳನ್ನೇ ನಾನು ಜಾಸ್ತಿ ನೋಡಿದ್ದೇನೆ' ಎಂದರು.












Click it and Unblock the Notifications