'ಅಮ್ಮನ ಬಳಿ ಒಂದು ರೂಪಾಯಿ ಇಲ್ಲ..ಒಂದು ಆಸ್ತಿ ಇಲ್ಲ': ತಾಯಿ ಬಗ್ಗೆ ಸೃಜನ್ ಹೆಮ್ಮೆ
ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಕನ್ನಡದ ಜನಪ್ರಿಯ ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಅವರಿಗೆ ಒಂದು ವಿಶೇಷವಾದ ಗುಣವಿದೆ. ತಮ್ಮ ಮಾತಿನಿಂದಲೇ ಸದಾ ಎಲ್ಲರನ್ನೂ ನಗಿಸುವ ಅವರು, ಎಂದೂ ಇನ್ನೊಬ್ಬರ ಬಗ್ಗೆ ಹಿಂದಿನಿಂದ ಮಾತನಾಡುವುದಿಲ್ಲ. ಈ ಬಗ್ಗೆ ಅವರ ಆಪ್ತರಿಗೆ ತಿಳಿದಿದ್ದು, ಸೃಜನ್ ಲೋಕೇಶ್ ಎಂದೂ ತಮ್ಮ ಸ್ನೇಹಿತರ ಜೊತೆಗಾಗಾಲೀ, ಕುಟುಂಬಸ್ಥರ ಜೊತೆಗಾಗಲೀ, ಆಪ್ತರ ಜೊತೆಗಾಗಲೀ ಯಾರ ಬಗ್ಗೆಯೂ ಹಿಂದಿನಿಂದ ಕೆಟ್ಟ ವಿಚಾರಗಳನ್ನು ಅಥವಾ ನೆಗೆಟಿವ್ ವಿಚಾರಗಳನ್ನು ಮಾತನಾಡುವುದಿಲ್ಲವಂತೆ. ತಮ್ಮ ಈ ಗುಣದ ಬಗ್ಗೆ ಹೇಳುತ್ತಾ ಸೃಜನ್ ತಮ್ಮ ತಾಯಿ, ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಬಗ್ಗೆ ಯಾರಿಗೂ ಗೊತ್ತಿರದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನಮಗೆ ನಮ್ಮ ಜೀವನದಲ್ಲಿ ಮುಂದೆ ಎಷ್ಟು ಸಮಯ ಇದೆ ಅಂತಾ ಗೊತ್ತಿರುವುದಿಲ್ಲ. ಹೀಗಿರುವಾಗ ನಿಮ್ಮ ಒಂದು ಕ್ಷಣವನ್ನು ಬೇರೆಯವರ ಬಗ್ಗೆ ಮಾತನಾಡಿ ಯಾಕೆ ಹಾಳು ಮಾಡಿಕೊಳ್ಳಬೇಕು. ನಾನು ಎಂದೂ ಬೇರೆಯವರ ಬಗ್ಗೆ ವಿಷಕಾರುವ ವ್ಯಕ್ತಿ ಅಲ್ಲ. ನಾವು ಒಬ್ಬರಿಗೆ ಸಹಾಯ ಮಾಡಿಲ್ಲ ಅಂದರೂ ತೊಂದರೆ ಇಲ್ಲ. ಅವರಿಗೆ ಸಮಸ್ಯೆ ಆಗಬಾರದು. ಒಬ್ಬರಿಗೆ ಒಳ್ಳೆಯದು ಮಾಡದೇ ಇದ್ದರೂ ತೊಂದರೆ ಇಲ್ಲ. ಕೆಟ್ಟದಂತೂ ಮಾಡಬಾರದು. ನಾನು ಮಾಡುವುದೂ ಇಲ್ಲ. ನಮ್ಮ ಅಪ್ಪ ಅಮ್ಮ ನನಗೆ ಅಂತದೆಲ್ಲಾ ಹೇಳಿಯೂ ಕೊಟ್ಟಿಲ್ಲ' ಎಂದರು.

ಈ ವೇಳೆ ತಮ್ಮ ತಾಯಿ ಬಗ್ಗೆ ಮಾತನಾಡಿದ ಅವರು, 'ಇವತ್ತಿನ ವರೆಗೂ ನಮ್ಮ ಅಮ್ಮ ಯಾರ್ಯಾರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಸಹಾಯ ಮಾಡುತ್ತಾರೆ ನಮ್ಮಮ್ಮ. ಅವರು ಇಷ್ಟು ವರ್ಷ ದುಡಿದಿರುವ ಹಣದಲ್ಲಿ ಒಂದು ರೂಪಾಯಿಯನ್ನೂ ಅವರಿಗಾಗಿ ಉಳಿಸಿಕೊಂಡಿಲ್ಲ. ಅವರಿಗೆ ಅಂತಾ ಒಂದು ಆಸ್ತಿ ಮಾಡಿಕೊಂಡಿಲ್ಲ. ಅವರು ದುಡಿದಿರುವ ಒಂದು ರೂಪಾಯಿ ಹಣ ಕೂಡ ಅವರ ಅಕೌಂಟ್‌ನಲ್ಲಿ ಇಲ್ಲ. ಅವರು ಮಾಡಿರೋದೆಲ್ಲಾ ಬರೀ ಬೇರೆಯವರಿಗೆ. ಇದಕ್ಕಿಂತ ಸಾರ್ಥಕ ಜೀವನ ಇನ್ನೇನು ಬೇಕು'.
'ಅವರ ಖರ್ಚಿಗೆ ನನ್ನ ಬಳಿ ಕೇಳುತ್ತಾರೆ. ನಾನು ದುಡಿಯುತ್ತಿರುವುದು ಅವರಿಗಾಗಿ ಹಾಗಾಗಿ ಕೊಡುತ್ತೇನೆ. ಆದರೆ ಅವರು ಇಂದಿಗೂ ದುಡಿದ ಹಣವನ್ನು ಅವರಿಗಾಗಿ ಖರ್ಚು ಮಾಡುವುದಿಲ್ಲ. ನೂರಾರು ಜನರನ್ನು ದತ್ತು ತೆಗೆದುಕೊಂಡಿದ್ದಾರೆ. ಅವರ ಖುರ್ಚುಗಳಿಗೆ ನನ್ನ ಬಳಿ ಇಷ್ಟು ಹಣ ಬೇಕು ಅಂತಾ ಕೇಳುತ್ತಾರೆ. ನಾನು ಖುಷಿಯಿಂದಲೇ ಕೊಡುತ್ತೇನೆ. ಅವರು ಅದರೆಲ್ಲೇ ತುಂಬಾ ಖುಷಿಯಾಗಿದ್ದಾರೆ. ಬದುಕಿದರೆ ಆ ರೀತಿ ಬದುಕಬೇಕು. ಅದನ್ನು ಬಿಟ್ಟು ಇನ್ಯಾರೋ ಬಗ್ಗೆ ಮಾತನಾಡಿಕೊಂಡು ಸಮಯ ಯಾಕೆ ಹಾಳುಮಾಡಿಕೊಳ್ಳಬೇಕು. ಒಬ್ಬರ ಬಗ್ಗೆ ಗಾಸಿಪ್ ಮಾಡಿದರೆ ಹೆಚ್ಚೆಂದರೆ ಮೂರು ದಿನ. ಆ ಮೂರು ದಿನದ ಮಾತಿಗಾಗಿ ಯಾಕೆ ನೆಮ್ಮದಿ ಹಾಳುಮಾಡಿಕೊಳ್ಳಬೇಕು. ಆ ಮೂರು ದಿನದಲ್ಲಿ ಇಬ್ಬರು ಇನ್ನೊಬ್ಬರ ಶತ್ರು ಯಾಕೆ ಆಗಬೇಕು' ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.












Click it and Unblock the Notifications