Amazon Prime Video: ಒಂದೇ ಬಾರಿ 70 ಕ್ಕೂ ಹೆಚ್ಚು ಸಿರೀಸ್ ಮತ್ತು ಸಿನಿಮಾಗಳನ್ನು ಘೋಷಿಸಿದ ಪ್ರೈಮ್ ವೀಡಿಯೋ
ಅಮೆಜಾನ್ ಪ್ರೈಮ್ ವಿಡಿಯೋ 2024 ಕ್ಕೆ ತನ್ನ ಪ್ರಾಜೆಕ್ಟ್‌ಗಳನ್ನು ಘೋಷಿಸುವ ಮೂಲಕ ಒಟಿಟಿ ಪ್ರಿಯರಿಗೆ ಸಕತ್ ಖುಷಿ ಸುದ್ದಿ ನೀಡಿದೆ. ತನ್ನ ಎರಡನೇ ಪ್ರೈಮ್ ವೀಡಿಯೋ ಪ್ರೆಸೆಂಟ್ಸ್ ಇಂಡಿಯಾ ಶೋಕೇಸ್‌ನಲ್ಲಿ ಸುಮಾರು 70 ಸಿರೀಸ್ ಮತ್ತು ಸಿನಿಮಾಗಳನ್ನು ಘೋಷಣೆ ಮಾಡಿದ್ದು, ಇವುಗಳನ್ನು ಮುಂದಿನ 2 ವರ್ಷಗಳಲ್ಲಿ ಬಿಡುಗಡೆ ಮಾಡುತ್ತಿದೆ.
ಈ 70 ಸಿರೀಸ್ ಮತ್ತು ಸಿನಿಮಾಗಳಲ್ಲಿ 40 ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು ಮತ್ತು ಭಾರತದ ಅತ್ಯಂತ ನಿರೀಕ್ಷಿತ 29 ಸಿನಿಮಾಗಳು ಇದರಲ್ಲಿ ಸೇರಿರಲಿವೆ. ಈ ಅತ್ಯಾಕರ್ಷಕ ವೆಬ್ ಸರಣಿಗಳಲ್ಲಿ ವರುಣ್ ಧವನ್- ಸಮಂತಾ ನಟಿಸಿರುವ ಸಿಟಾಡೆಲ್: ಹನಿ ಬನ್ನಿ, ಅನನ್ಯ ಪಾಂಡೆ ಅವರ ಕಾಲ್ ಮಿ ಬೇ, ಭೂಮಿ ಪೆಡ್ನೇಕರ್ ಅವರ ದಲ್ಡಾಲ್, ಅಭಿಷೇಕ್ ಬಚ್ಚನ್ ಮತ್ತು ಅನಿಲ್ ಕಪೂರ್ ಅವರ ಸುಬೇದಾರ್ ನೇತೃತ್ವದ ಬಿ ಹ್ಯಾಪಿ, ಮಿರ್ಜಾಪುರ್ - 3 ಸೇರಿದಂತೆ ಮುಂತಾದ ಚಲನಚಿತ್ರಗಳು ಇವೆ.

ಇದರಲ್ಲಿ ವಿವಿಧ ಶ್ರೇಣಿಯ ಸಿರೀಸ್ ಮತ್ತು ಸಿನಿಮಾಗಳು ಇರಲಿವೆ. ಅಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಕಂಟೆಂಟ್ ಕೂಡಾ ಇರಲಿದೆ. ಆಕರ್ಷಕ ಥ್ರಿಲ್ಲರ್‌ಗಳು, ಮನಮುಟ್ಟುವ ಡ್ರಾಮಾಗಳು, ನಗೆಯುಕ್ಕಿಸುವ ಕಾಮಿಡಿಗಳು ಮತ್ತು ಹಾರರ್, ಅತ್ಯಂತ ಕುತೂಹಲ ಕೆರಳಿಸುವ ಶೋಗಳು, ಯುವ ಸಮೂಹಕ್ಕೆಂದೇ ರೂಪಿಸಿದ ಸುಂದರ ಕಥೆಗಳು, ಅತ್ಯಂತ ಉತ್ಸಾಹ ಚಿಮ್ಮಿಸುವ ಆಕ್ಷನ್ ಸಿನಿಮಾಗಳು ಇವುಗಳಲ್ಲಿ ಇವೆ.
"ಪ್ರೈಮ್ ವೀಡಿಯೋದಲ್ಲಿ, ವಿವಿಧ ಮನರಂಜನೆ ವಿಧಾನಗಳ ಮೂಲಕ ಭಾರತೀಯ ಗ್ರಾಹಕರ ಮನರಂಜಿಸಲು ನಾವು ಹೆಚ್ಚು ಗಮನ ಹರಿಸಿದ್ದೇವೆ. ಹೊಸ ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು, ನೇರವಾಗಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ವಿವಿಧ ಭಾಷೆಗಳಲ್ಲಿ ಥಿಯೇಟರ್‌ನಲ್ಲಿ ಹಿಟ್ ಆದ ಅತಿ ದೊಡ್ಡ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ಗ್ರಾಹಕರಿಗೂ ನಾವು ಮೊದಲ ಆಯ್ಕೆಯಾಗಿರಬೇಕು ಎಂದು ಬಯಸುತ್ತೇವೆ" ಎಂದು ಪ್ರೈಮ್ ವೀಡಿಯೋ ಇಂಡಿಯಾದ ಕಂಟ್ರಿ ಡೈರೆಕ್ಟರ್ ಸುಶಾಂತ್ ಶ್ರೀರಾಮ್ ಹೇಳಿದ್ದಾರೆ.

"2023 ರಲ್ಲಿ ನಮ್ಮ ಕಂಟೆಂಟ್ ಹೊಸ ಗಡಿಯನ್ನು ಮೀರಿದೆ. ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು ಮತ್ತು ಪ್ರೈಮ್ ಮೆಂಬರ್ ಎಂಗೇಜ್‌ಮೆಂಟ್ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಮುಂಚೂಣಿಯಲ್ಲಿದೆ. ನಮ್ಮ ಗ್ರಾಹಕರಿಂದ ನಾವು ಪಡೆದ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಪ್ಲಾಟ್‌ಫಾರಂನಲ್ಲಿರುವ ಪ್ರತಿ ಕಥೆಯೂ ಅವರಿಗೆ ಮೆಚ್ಚುಗೆಯಾಗಬೇಕು. ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿನ ಪ್ರೇಕ್ಷಕರನ್ನು ನಮ್ಮ ಮುಂಬರುವ ಸಿರೀಸ್ ಮತ್ತು ಸಿನಿಮಾಗಳು ಮನರಂಜಿಸಲಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications