Rashmika Mandanna: ಆ ಒಂದು ಮಾತಾಡಿ ಮತ್ತೆ ಕನ್ನಡಿಗರನ್ನ ಕೆಣಕಿದ ರಶ್ಮಿಕಾ ಮಂದಣ್ಣ
ಕನ್ನಡದಿಂದ ಸಿನಿ ಕೆರಿಯರ್ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದ್ದಾರೆ. ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಈಗ ಕೈತುಂಬಾ ಸಿನಿಮಾಗಳಿವೆ. ಸಾಮಾನ್ಯವಾಗಿ ಹತ್ತಿದ ಏಣಿ ಒದೆಯಬಾರದು ಎನ್ನುವ ಮಾತಿದೆ. ಈ ಹಿಂದೆ ರಶ್ಮಿಕಾ ಹಲವು ಬಾರಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಅವರು ಇಂತದ್ದೇ ಕೆಲಸ ಮಾಡಿದ್ದಾರೆ. ರಶ್ಮಿಕಾ ಅವರ ಆ ಒಂದು ಮಾತು ಈಗ ವಿವಾದಕ್ಕೂ ಗುರಿಯಾಗಿದೆ.
ರಶ್ಮಿಕಾ ಮಂದಣ್ಣ ಅವರು ಮೊದಲಿಗೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಜರ್ನಿ ಶುರು ಮಾಡಿದರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಅರಸಿ ಬಂದವು. ಇತ್ತೀಚೆಗೆ ತೆರೆಕಂಡ ಪುಷ್ಪ-2 ಸಿನಿಮಾದಿಂದಲೂ ರಶ್ಮಿಕಾ ಅವರಿಗೆ ಅವಕಾಶಗಳು ಸಾಲುಗಟ್ಟಿ ನಿಂತಿವೆ. ಈಗ ಬಾಲಿವುಡ್‌ನ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿರುವ ಅವರು ಕನ್ನಡಿಗರಿಗೆ ಬೇಸರವಾಗುವ ಮಾತೊಂದನ್ನು ಹೇಳಿದ್ದಾರಂತೆ. ಇಷ್ಟಕ್ಕೂ ರಶ್ಮಿಕಾ ಏನಂದ್ರು ಗೊತ್ತಾ..?

ಬಾಲಿವುಡ್‌ನ ನಟ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಅವರು 'ಛಾವಾ' ಸಿನಿಮಾದಲ್ಲಿ ನಟಿಸಿದ್ದು, ಇಂದು ರಿಲೀಸ್ ಕೂಡ ಆಗಿದೆ. ಈ ಸಿನಿಮಾದ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ತಮ್ಮನ್ನು ಪರಿಚಯಿಸಿಕೊಳ್ಳುವಾಗ "ನಾನು ಹೈದರಾಬಾದ್‌ನವಳು" ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರಶ್ಮಿಕಾ ಅವರನ್ನು ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಕನ್ನಡದ ಮೇಲೆ ಅಸಡ್ಡೆ ಇರಬಹುದು. ಆದರೆ, ನಿಮ್ಮ ಬೇರು ಕರ್ನಾಟಕ ಅನ್ನೋದನ್ನ ಮರೆಯಬಾರದು ಎಂದು ಹೇಳುತ್ತಿದ್ದಾರೆ.
ನಾನು ಹೈದರಾಬಾದ್‌ನವಳು, ಅಲ್ಲಿಂದ ನಾನು ಒಂಟಿಯಾಗಿ ಬಂದಿದ್ದೇನೆ. ಈಗ ನಾನು ನಿಮ್ಮ ಕುಟುಂಬದ ಭಾಗ ಆಗುತ್ತಿದ್ದೇನೆ ಎಂದು ಬಾಲಿವುಡ್ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಒಂದು ವೇಳೆ ರಶ್ಮಿಕಾ ಅವರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡದಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರಾ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ರಶ್ಮಿಕಾ ಅವರೇ, ನೀವು ಈಗ ಬಾಲಿವುಡ್‌ಗೆ ಹೋಗಿರಬಹುದು, ತೆಲುಗು ಸಿನಿಮಾಗಳಲ್ಲಿ ಮಿಂಚಿರಬಹುದು. ಆದರೆ, ನಿಮ್ಮ ಪ್ರಯಾಣ ಶುರುವಾಗಿದ್ದು ಎಲ್ಲಿಂದ ಎನ್ನುವುದೇ ಮರೆತು ಹೋಯಿತಾ? ಎಂದಿದ್ದಾರೆ. ನೀವು ಈಗಾಗಲೇ ಕನ್ನಡ, ಕನ್ನಡಿಗರ ವಿಚಾರವಾಗಿ ಹಲವು ಬಾರಿ ಟ್ರೋಲ್ ಆಗಿದ್ದೀರಿ. ಆದರೂ ನೀವು ನಮ್ಮ ಕನ್ನಡದವರು ಎನ್ನುವ ಭಾವನೆ ನಮಗೆ ಈಗಲೂ ಇದೆ. ಆದ್ರೆ, ನಿಮಗೆ ನಿಮ್ಮ ತಾಯ್ನಾಡು ಮರೆಯುವಷ್ಟು ಪ್ರತಿಭೆ ಇದೆ ಎಂದು ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ.
ನೀವು ಹೈದಾರಬಾದ್‌ನವರು ಎಂದು ಹೇಳಿಕೊಂಡಿದ್ದೀರಲ್ಲ, ಹಾಗಾದ್ರೆ ನೀವು ಕೊಡಗಿನಲ್ಲಿ ಹುಟ್ಟಲಿಲ್ಲವೇ? ನಿಮ್ಮ ಮೂಲತಃ ಹೈದರಾಬಾದ್‌ನವರೇ ಆದರೆ, ಇನ್ನೆಂದಿಗೂ ನಮ್ಮ ಕರ್ನಾಟಕಕ್ಕೆ ಕಾಲಿಡಬೇಡಿ. ನಿಮ್ಮಂತಹ ನಾಡದ್ರೋಹಿಗಳು ಕರ್ನಾಟಕಕ್ಕೆ ಬರೋ ಅಗತ್ಯವಿಲ್ಲ ಎಂದು ಆಕ್ರೋಶಭರಿತ ಮಾತುಗಳನ್ನಾಡುತ್ತಿದ್ದಾರೆ. ಮತ್ತೊಂದೆಡೆ ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವುದು ಒಳ್ಳೇದು ಎಂದು ಹಲವರು ಧ್ವನಿ ಎತ್ತಿದ್ದಾರೆ.












Click it and Unblock the Notifications