Pavithra Gowda: ಪೋಸ್ಟ್ ಹಾಕಿ ಕೌಂಟರ್ ಕೊಟ್ಟ ಪವಿತ್ರಾ ಗೌಡ, ಯಾರಿಗೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ಆಪ್ತೆ ಪವಿತ್ರಾ ಗೌಡ ಕೂಡ ಜೈಲು ಸೇರಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಇಬ್ಬರೂ ಕೂಡ ಜೈಲಿನಿಂದ ಹೊರಬಂದಿದ್ದಾರೆ. ಸದ್ಯ ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಯಾರಿಗೋ ಕೌಂಟರ್ ಕೊಟ್ಟಿದ್ದಾರೆ.
ಇಷ್ಟಕ್ಕೂ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ "ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು, ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು" ಎನ್ನುವ ಭಗವದ್ಗೀತೆಯ ಸಂದೇಶದ ಫೋಟೋ ಅನ್ನು ಪವಿತ್ರಾ ಗೌಡ ಶೇರ್ ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೂ ಇತ್ತೀಚಿನ ಬೆಳವಣಿಗೆಗಳಿಗೆ ಈ ಪೋಸ್ಟ್ ಪೂರಕವಾಗಿದ್ದು, ಯಾರಿಗೋ ಕೌಂಟರ್ ನೀಡುವಂತಿದೆ. ಇನ್ನು ಪವಿತ್ರಾಗೌಡ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪವಿತ್ರಾ ಅವರು ಯಾವ ಕಾಣದ ಕೈಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಜೈಲಿನಿಂದ ಹೊರಬಂದ ಮೇಲೆ ಫುಲ್ ಟೆಂಪಲ್ ರನ್ ಮಾಡಿ ಸೈಲೆಂಟ್ ಆಗಿದ್ದ ಪವಿತ್ರಾ ಗೌಡ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ.
ಪವಿತ್ರಾ ಗೌಡ ಅವರು ಯಾರನ್ನು ಉಲ್ಲೇಖಿಸಿ ಈ ಸಂದೇಶ ರವಾನಿಸಿದ್ದಾರೆ? ಅವರ ಪ್ರಕಾರ ಕಾಣದ ಕೈಗಳು ಯಾರಿರಬಹುದು? ಅವರ ಮೇಲೆ ಏನು ಕುತಂತ್ರಗಳು ನಡೆದಿವೆ? ಅವರಿಗೆ ಕಣ್ಣೀರು ತರಿಸಿದ ವಿಚಾರವೇನು? ಎನ್ನುವ ಹಲವು ಪ್ರಶ್ನೆಗಳು ಮುಂದೆ ಬಂದಿವೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಅರ್ಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸಂದರ್ಭದಲ್ಲೇ ಪವಿತ್ರಾ ಗೌಡ ಅವರ ಪೋಸ್ಟ್ ಪರಿಸ್ಥಿತಿಯನ್ನು ಹೋಲುತ್ತಿದೆ ಎಂದು ಹೇಳುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ನಂತರ ಪವಿತ್ರಾಗೌಡ ಅವರು ಹೊರ ರಾಜ್ಯಗಳಿಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ಕೇಳಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ನೀಡಿತ್ತು. ಬಳಿಕ ಮಹಾರಾಷ್ಟ್ರದ ಶಿರಡಿಗೆ ತೆರಳಿ ಸಾಯಿಬಾಬಾ ದರ್ಶನ ಪಡೆದು ಬಂದಿದ್ದರು.
ಜೈಲಿನಿಂದ ಹೊರ ಬಂದ ನಂತರ ಬೆಂಗಳೂರಿನ ಹಲವು ದೇವಸ್ಥಾನಗಳಲ್ಲಿ ಪವಿತ್ರಾ ಗೌಡ ಟೆಂಪಲ್ ರನ್ ಶುರು ಮಾಡಿದ್ದರು. ಹೊರ ರಾಜ್ಯಕ್ಕೆ ಭೇಟಿ ನೀಡಲು ಅನುಮತಿ ಪಡೆದುಕೊಂಡಿದ್ದ ದರ್ಶನ್ ಗೆಳತಿ ಪವಿತ್ರಾ ತಮ್ಮ ಬ್ಯುಸಿನೆಸ್ ಕೂಡ ಆರಂಭಿಸಲು ಅನುಮತಿ ಪಡೆದಿದ್ದರು. ಮನೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಶಿರಡಿಗೆ ತೆರಳಿ, ಸಾಯಿ ಬಾಬಾ ದರ್ಶನ ಪಡೆದು ಬಂದಿದ್ದರು. ಈ ಫೋಟೋಗಳನ್ನು ಪವಿತ್ರಾಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, 1,492 ಪುಟಗಳ ದಾಖಲೆ ಕೂಡ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದರ್ಶನ್ ಹಾಗೂ ಗೆಳತಿ ಪವಿತ್ರಾ ಸೇರಿದಂತೆ ಏಳು ಜನ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಂತರ ಪವಿತ್ರಾ ಗೌಡ ಅವರ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.












Click it and Unblock the Notifications