Pavithra Gowda: ಕೆಟ್ಟ ಕಾಮೆಂಟ್ಸ್ ಮಾಡೋರಿಗೆ ಸರಿಯಾಗಿ ಜಾಡಿಸಿದ ಪವಿತ್ರಾ ಗೌಡ ಪುತ್ರಿ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಆರೋಪಿ ಪವಿತ್ರಾಗೌಡ ಅವರು ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಕೂಡ ಜೈಲು ಸೇರಿದ ಹಿನ್ನೆಲೆ ಪವಿತ್ರಾ ಗೌಡ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ಸ್‌ಗಳನ್ನು ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡಿರುವ ಪವಿತ್ರಾಗೌಡ ಪುತ್ರಿ ಖುಷಿಗೌಡ ಸರಿಯಾಗಿ ಜಾಡಿಸಿದ್ದಾರೆ.
ಅಲ್ಲದೆ ಅಮ್ಮನ ಬಗ್ಗೆ ಅಶ್ಲೀಲವಾಗಿ ಮಾತನಾಡುವವರ ಬಗ್ಗೆ ಬೇಸರವನ್ನೂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಖುಷಿ ಗೌಡ, ಅಮ್ಮನ ಬಗ್ಗೆ ಕೊಂಡಾಡಿದ್ದಾರೆ.

'ಸೋಶಿಯಲ್ ಮೀಡಿಯಾದಲ್ಲಿರೋ ಎಲ್ಲರ ಗಮನಕ್ಕೆ ಎಂದು ಮಾತು ಶುರು ಮಾಡಿರುವ ಖುಷಿಗೌಡ, ನಾನು ಈ ರೀತಿ ಪತ್ರ ಬರೆಯುತ್ತೇನೆ ಎಂದು ಊಹಿಸಿರಲಿಲ್ಲ. ಆದರೆ ನಿಮ್ಮ ಪದಗಳು ನನ್ನ ಮನಸ್ಸನು ಘಾಸಿಗೊಳಿಸಿವೆ. ನನ್ನ ತಾಯಿಯ ಬಗ್ಗೆ ನೀವಾಡಿರುವ ಚುಚ್ಚುಮಾತುಗಳು ಬೇಸರ ತರಿಸಿದೆ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನೀವು ನನ್ನ ತಾಯಿಯ ಬಗ್ಗೆ ಆಡುವ ಮಾತುಗಳಿಂದ ಹೃದಯಕ್ಕೆ ಎಷ್ಟು ನೋವಾಗಿದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ನನ್ನಮ್ಮನ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ಅವಳ ತ್ಯಾಗ, ಕಷ್ಟಗಳು ಕೂಡ ನಿಮಗೆ ಗೊತ್ತಿಲ್ಲ. ಆದರೆ ತಾಯಿ ಬಗ್ಗೆ ಏನೋ ಗೊತ್ತಿರುವಂತೆ ನೀವೆಲ್ಲ ಮಾತನಾಡುತ್ತಿದ್ದೀರಿ. ನಿಮ್ಮ ತೀರ್ಪುಗಳಿಗೆ ಯಾವುದೇ ತೂಕವಿಲ್ಲ' ಎಂದು ಕಾಮೆಂಟ್ಸ್ ಮಾಡೋರಿಗೆ ಚಳಿಬಿಡಿಸಿದ್ದಾರೆ.

'ಆದರೆ ನನ್ನಮ್ಮನ ಬಗ್ಗೆ ನನಗೆ ಮಾತ್ರ ಗೊತ್ತು. ಅವಳು ಎಷ್ಟು ಮೌನವಾಗಿ ಜೀವನದಲ್ಲಿ ಹೋರಾಟ ಮಾಡಿದಳು ಎನ್ನುವುದು ನಾನು ಕಂಡಿದ್ದೇನೆ. ನನ್ನ ತಾಯಿಯೇ ನನ್ನ ಪ್ರಪಂಚ, ನನ್ನ ಶಕ್ತಿ, ನನ್ನ ಪ್ರೇರಣೆ ಹಾಗೂ ಎಲ್ಲವೂ. ಪವಿತ್ರಾ ಅವರು ಕೇವಲ ನನಗೆ ತಾಯಿ ಮಾತ್ರವಲ್ಲ, ನನ್ನ ತಂದೆಯೂ ಕೂಡ. ನನ್ನ ಜೀವನದ ಎಲ್ಲ ಅಗತ್ಯತೆಗಳನ್ನು ಆಕೆ ಈಡೇರಿಸಿದ್ದಾಳೆ. ಪ್ರೀತಿ ಹಾಗೂ ತ್ಯಾಗಕ್ಕೆ ನನ್ನ ತಾಯಿ ಒಂದು ವ್ಯಾಖ್ಯಾನ' ಎಂದು ಬಣ್ಣಿಸಿದ್ದಾರೆ.
'ಆಕೆಯನ್ನು ನಾನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವಳು ಎಲ್ಲ ಸಮಸ್ಯೆಗಳ ಜೊತೆಯೂ ಗಟ್ಟಿಯಾಗಿ ಮುನ್ನಡೆಯುತ್ತಾಳೆ. ನನ್ನಮ್ಮನ ಬಗ್ಗೆ ತಿಳಿದುಕೊಳ್ಳದೆ ಏನೇನೋ ಕಾಮೆಂಟ್ ಮಾಡುವುದು ಸರಿಯಲ್ಲ. ಇದಕ್ಕಿಂತ ಹೆಚ್ಚು ನನಗೆ ನೋವು ಕೊಡುವುದು ನೀವು ಮಾಡುವ ದ್ವೇಷಕಾರಕ ಕಾಮೆಂಟ್‌ಗಳು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ನಿಮ್ಮ ನಡೆಯಿಂದಾಗಿ ಅವಳು ಕುಗ್ಗಿದ್ದಾಳೆ. ನಿಮ್ಮ ಪ್ರಕಾರ ನಾನು ಸಣ್ಣವಳೇ ಆಗಿರಬಹುದು. ಆದರೆ ನನಗೆ ಎಲ್ಲವೂ ಆರ್ಥವಾಗುತ್ತೆ. ನನಗೆ ಪ್ರಪಂಚದ ಅರಿವು ಇದೆ. ಇದನ್ನು ನಾನು ಹೇಳಿಕೊಳ್ಳಲಾಗದ ರೀತಿಯಲ್ಲಿ ನೋವುಂಟಾಗಿದೆ. ಈ ಭಾರವನ್ನು ನನ್ನಿಂದ ಹೊರಲು ಆಗುತ್ತಿಲ್ಲ. ನನ್ನ ತಾಯಿಯನ್ನು ಈ ರೀತಿ ಮನಬಂದಂತೆ ಜಡ್ಜ್ ಮಾಡುವುದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ' ಎಂದಿದ್ದಾರೆ.
'ನನ್ನ ತಾಯಿ ಯಾರಿಗೂ ಎಂದಿಗೂ ನೋವು ಕೊಟ್ಟವಳಲ್ಲ. ಅವಳು ಬೇರೆಯವರ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಾಳೆ. ನನ್ನ ತಾಯಿಯ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲದವರು, ಅರ್ಥ ಮಾಡಿಕೊಳ್ಳದವರು, ಹೃದಯಹೀನರ ಮಾತುಗಳು ನನ್ನ ಗಮನಕ್ಕೂ ಬಂದಿದೆ. ಇದು ನನಗೆ ಬಹಳ ನೋವು ಕೊಟ್ಟಿದೆ. ಆದರೆ, ಅವಳು ಯಾವುದಕ್ಕೆ ಅರ್ಹಳಿಲ್ಲವೋ ಆ ರೀತಿ ನೀವು ಬಿಂಬಿಸುತ್ತಿದ್ದೀರಿ' ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
'ನನ್ನ ತಾಯಿ ಈ ಜಗತ್ತಲ್ಲೇ ಬೆಸ್ಟ್. ಅದೇನೆ ಆಗಿರಲಿ, ನಾನು ನನ್ನ ತಾಯಿಯ ಜೊತೆ ಸದಾ ನಿಲ್ಲುತ್ತೇನೆ. ಅವಲು ನನ್ನ ರಕ್ಷಕಿ, ನನ್ನ ಮಾರ್ಗದರ್ಶಕಿ, ನನ್ನ ಕೊನೆಯಿಲ್ಲದ ಪ್ರೀತಿಗೆ ಸಾಕ್ಷಿ. ದಯವಿಟ್ಟು ನನ್ನ ತಾಯಿಯ ಬಗ್ಗೆ ಮಾತನಾಡುವು ಮುನ್ನ ಆಲೋಚಿಸಿ..ನಿಮ್ಮ ಮಾತುಗಳು ತುಂಬಾ ಹೆಚ್ಚು ನೋವು ನೀಡುತ್ತವೆ. ನೀವೇನೆ ಅಂದರೂ ಆಕೆ ನನ್ನ ಜೀವನದ ಹೀರೋ' ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications