ಗುಡ್‌ನ್ಯೂಸ್ ಕೊಟ್ಟ ಗೊಂಬೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿ ನೇಹಾ-ಚಂದನ್ ಜೋಡಿ
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ನಟಿ ಗೊಂಬೆ ಹಾಗೂ ನಟ ಚಂದನ್ ಗೌಡ ದಂಪತಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಆಗಿರುವ ನೇಹಾ ಗೌಡ ಈ ಖುಷಿಯ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು ನೇಹಾ ಗೌಡ ಕಿರುತೆರೆಯ ಗೊಂಬೆ ಎಂದೇ ಜನಪ್ರಿಯತೆ ಪಡೆದಿದ್ದರು. ನೇಹಾ ಪತಿ ಚಂದನ್ ಗೌಡ ಸದ್ಯ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ರಾಜ-ರಾಣಿ ಸೀಜನ್-೧ ಶೋನಲ್ಲಿ ಭಾಗವಹಿಸಿದ್ದ ಈ ದಂಪತಿ ವಿನ್ನರ್ ಆಗಿ ಹೊರಹೊಮ್ಮಿದ್ದರು.

ನಟಿ ನೇಹಾ ಗೌಡ ಫೆಬ್ರವರಿ 18, 2018ರಂದು ತಮ್ಮ ದೀರ್ಘಕಾಲದ ಗೆಳೆಯ ಚಂದನ್ ಗೌಡ ಅವರನ್ನು ವಿವಾಹವಾದರು. ಇವರಿಬ್ಬರದು ಚಿಕ್ಕವಯಸ್ಸಿನ ಪ್ರೇಮವಾಗಿದ್ದು, ಸುದೀರ್ಘ ಪ್ರೀತಿ ಬಳಿಕ ನೇಹಾ - ಚಂದನ್ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಗೌಡ ಹಾಗೂ ಚಂದನ್ ಸಿಹಿ ಸುದ್ದಿ ನೀಡಿದ್ದಾರೆ.
ಈ ವಿಚಾರವನ್ನು ನೇಹಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ನಮ್ಮ ಕುಟುಂಬದಲ್ಲಿ ಹೊಸ ಜೀವನ ಸ್ವಾಗತಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿದೆ.

ನಿಮ್ಮಲ್ಲಿ ಹಲವರು ಇದನ್ನು ಊಹಿಸಿದ್ದಾರೆ. ಹೌದು, ನೀವು ಹೇಳಿದ್ದು ಸರಿ. ನಾವೀಗ ಇಬ್ಬರಿಂದ ಮೂವರಾಗುತ್ತಿದ್ದೇವೆ. ನಿದ್ದೆಯಿಲ್ಲದ ರಾತ್ರಿಗಳು, ಮಿತಿಯಿಲ್ಲದ ಪ್ರೀತಿ ಹಾಗೂ ನಗು ತುಂಬಿದ ಜೀವನದ ಹೊಸ ಅಧ್ಯಾಯಕ್ಕಾಗಿ ಕಾಯುತ್ತಿದ್ದೇವೆ" ಎಂದಿದ್ದಾರೆ.
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ - ಚಂದನ್ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕಿರುತೆರೆ ಕಲಾವಿದರಾದ ಚಂದನಾ ಅನಂತಕೃಷ್ಣ, ನೀತಾ ಅಶೋಕ್, ಅಮೃತಾ ರಾಮಮೂರ್ತಿ, ರಶ್ಮಿ ಪ್ರಭಾಕರ್, ಪ್ರಿಯಾಂಕಾ, ಶ್ರುತಿ ಪ್ರಕಾಶ್ ಸೇರಿದಂತೆ ಹಲವಾರು ನಟ - ನಟಿಯರು ಈ ದಂಪತಿಗೆ ಶುಭ ಹಾರೈಸಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಚಂದನ್-ಕವಿತಾ ಗೌಡ ದಂಪತಿ
ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿ ಕೂಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗೆ ಬೇಬಿ ಸ್ಕ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಟಿ ಕವಿತಾ ಗೌಡ ತಾವು ತಾಯಾಗುತ್ತಿರುವ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಸ್ವಾರ್ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು.











Click it and Unblock the Notifications