ಒಂದು ರಾತ್ರಿ ಪಾರ್ಟಿಗೆ 35,00,000 ರೂಪಾಯಿ! ಮುಗಿಲ್‌ಪೇಟೆ ನಾಯಕಿ ವಿರುದ್ಧ ಇಡಿ ತನಿಖೆ
ತಮಿಳಿನ ಡ್ರ್ಯಾಗನ್ ಸಿನಿಮಾದಲ್ಲಿ ನಟಿಸಿರುವ ಕಯಾದು ಲೋಹರ್ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುವ ವಿಶ್ವಾಸದಲ್ಲಿದ್ದ ನಟಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (TASMAC) ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ (ED) ನಡೆಸುತ್ತಿರುವ ತನಿಖೆಯಲ್ಲಿ ಕಯಾದು ಲೋಹರ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಿಡ್‌ಡೇ ವರದಿಯ ಪ್ರಕಾರ ಟಿಎಎಸ್ಎಂಎಸಿ ಹಗರಣದಲ್ಲಿ ಕಯಾದು ಲೋಹರ್ ಅವರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದ ಇಡಿ ದಾಳಿಯ ವೇಳೆ ಸಿಕ್ಕಿಬಿದ್ದಿರುವ ವ್ಯಕ್ತಿಗಳು ಕಯಾದು ಲೋಹರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ಅವರು ರಾತ್ರಿ ಪಾರ್ಟಿಗಳಿಗೆ ಹಾಜರಾಗಲು 35 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.

ಅಭಿಮಾನಿಗಳಿಗೆ ದೊಡ್ಡ ಆಘಾತ
ಇತ್ತೀಚೆಗೆ ತೆರೆಕಂಡಿದ್ದ ತಮಿಳಿನ ಡ್ರ್ಯಾಗನ್ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಕಯಾದು ಲೋಹರ್ ತಮ್ಮ ಅಭಿನಯ ಮತ್ತು ಗ್ಲಾಮರಸ್ ಲುಕ್ ಮೂಲಕ ಗಮನ ಸೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳು ಅವರ ಅಂದಕ್ಕೆ ಮನಸೋತಿದ್ದರು.
ತಮಿಳಿಗೆ ಮತ್ತೊಬ್ಬರು ನಾಯಕಿ ಸಿಕ್ಕರು, ಇನ್ನು ಮುಂದೆ ಹಲವು ಸಿನಿಮಾಗಳ ಆಫರ್ ಸಿಗುತ್ತವೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಈಗ ಬಂದಿರುವ ಸುದ್ದಿ ಕೇಳಿ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಈ ಸುದ್ದಿ ನಿಜವಾ ಸುಳ್ಳಾ ಎನ್ನುವ ಬಗ್ಗೆ ವ್ಯಾಪಕ ಚರ್ಚೆ ನಡೆಸುತ್ತಿದ್ದಾರೆ.
ದಾಳಿ ವೇಳೆ ಬಂಧಿತರಾಗಿರುವ ವ್ಯಕ್ತಿಗಳು ಮಾಡಿರುವ ಆರೋಪ ಇದಾಗಿದ್ದು ಇಡಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಬಳಿಕ ಇದು ನಿಜವಾ, ಸುಳ್ಳಾ ಎನ್ನುವ ವಿಚಾರ ತಿಳಿಯಲಿದೆ. ಈ ಸುದ್ದಿ ಸುಳ್ಳಾಗಲಿ ಎಂದು ಅವರ ಅಭಿಮಾನಿಗಳು ಬಯಸಿದ್ದಾರೆ. ಈ ಬಗ್ಗೆ ಕಯಾದು ಲೋಹರ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏನಿದು ಟಿಎಎಸ್‌ಎಂಎಸಿ ಹಗರಣ?
ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಮದ್ಯ ಕಂಪನಿ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (TASMAC) ನಲ್ಲಿ 1000 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಪಿಟಿಐ ವರದಿ ಪ್ರಕಾರ, ಸುಪ್ರೀಂ ಕೋರ್ಟ್ ಗುರುವಾರ ಇಡಿ 'ಎಲ್ಲಾ ಮಿತಿಗಳನ್ನು ದಾಟುತ್ತಿದೆ' ಮತ್ತು ಆಡಳಿತದ ಫೆಡರಲ್ ಪರಿಕಲ್ಪನೆಯನ್ನು ಉಲ್ಲಂಘಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಭ್ರಷ್ಟಾಚಾರದ ಆರೋಪದ ಮೇಲೆ TASMAC ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕಾನೂನು ಅಧಿಕಾರಿ ಆದೇಶವನ್ನು ವಿರೋಧಿಸಿ, ಈ ವಿಷಯವು ₹1000 ಕೋಟಿಗೂ ಹೆಚ್ಚಿನ ಭ್ರಷ್ಟಾಚಾರವನ್ನು ಒಳಗೊಂಡಿದೆ ಮತ್ತು ಇಡಿ ತನಿಖೆಯಲ್ಲಿ ಯಾವುದೇ ಮಿತಿಗಳನ್ನು ದಾಟಿಲ್ಲ ಎಂದು ಹೇಳಿದೆ.
ಕನ್ನಡ ಸಿನಿಮಾ ಮೂಲಕ ಪದಾರ್ಪಣೆ
ಫ್ರೆಶ್ ಫೇಸ್ ಸೀಸನ್ 12 ಅನ್ನು ಗೆದ್ದ ನಂತರ 2021 ರಲ್ಲಿ ಕನ್ನಡ ಚಿತ್ರ ಮುಗಿಲ್‌ಪೇಟೆ ಸಿನಿಮಾ ಮೂಲಕ ಕಯಾದು ಲೋಹರ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 2022 ರಲ್ಲಿ, ಅವರು ಮಲಯಾಳಂ ಮತ್ತು ತೆಲುಗಿನಲ್ಲಿ ಪಥೋನ್ಪಥಂ ನೂತಂಡು ಮತ್ತು ಅಲ್ಲೂರಿ ಸಿನಿಮಾದಲ್ಲಿ ಕಾಣಿಸಿಕೊಂಡರು. 2023 ರಲ್ಲಿ ಅವರು ಐ ಪ್ರೇಮ್ ಯು ಸಿನಿಮಾ ಮೂಲಕ ಮರಾಠಿ ಸಿನಿಮಾರಂಗಕ್ಕೂ ಪದಾರ್ಪನೆ ಮಾಡಿದ್ದರು. 2025ರಲ್ಲಿ ತೆರೆಕಂಡ ತಮಿಳಿನ ಡ್ರ್ಯಾಗನ್ ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತ್ತು.












Click it and Unblock the Notifications