Deepika Padukone: ನಟಿ ದೀಪಿಕಾ ಪಡುಕೋಣೆಗೆ ಮಹತ್ವದ ಜವಾಬ್ದಾರಿ ಕೊಟ್ಟ ಭಾರತ ಸರ್ಕಾರ
ಬಾಲಿವುಡ್ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರಿಗೆ ಭಾರತ ಸರ್ಕಾರವು ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ. ದೀಪಿಕಾ 10 ವರ್ಷಗಳ ಹಿಂದೆ ಆತಂಕ ಮತ್ತು ಖಿನ್ನತೆಯೊಂದಿಗಿನ ತಮ್ಮ ಹೋರಾಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ನಟಿ ದೀಪಿಕಾ ಪಡುಕೋಣೆ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ (ಮೆಂಟಲ್ ಹೆಲ್ತ್) ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸುತ್ತಲಿನ ಕಳಂಕವನ್ನು ಕಡಿಮೆ ಮಾಡಲು ದೀಪಿಕಾ 2015ರಲ್ಲಿ ದಿ ಲಿವ್ ಲವ್ ಲಾಫ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದರು. ಮಾನಸಿಕ ಅಸ್ವಸ್ಥತೆಯಿಂದಾಗಿ ಯಾವುದೇ ಜೀವ ಕಳೆದುಕೊಳ್ಳಬಾರದು ಎಂಬುದು ಅವರ ಉದ್ದೇಶ. ಅಂದಿನಿಂದಲೂ ಅವರು ಸಾರ್ವಜನಿಕ ಜಾಗೃತಿ ಅಭಿಯಾನಗಳು, ಕುಟುಂಬಗಳನ್ನು ಭೇಟಿ ಮಾಡುವುದು, ಅವರೊಂದಿಗೆ ಮಾತನಾಡುವ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿಗಾಗಿ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಯಾವಾಗಲೂ ಪ್ರಾಮುಖ್ಯತೆ ನೀಡಿದ್ದಾರೆ.

ಇದೀಗ ಕೇಂದ್ರ ಸರ್ಕಾರವು ಅಕ್ಟೋಬರ್ 10ರ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ದೀಪಿಕಾ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೊದಲ 'ಮಾನಸಿಕ ಆರೋಗ್ಯ ರಾಯಭಾರಿ'ಯಾಗಿ ನೇಮಿಸಿದೆ. ಈ ಬೆಳವಣಿಗೆಯು ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. ಅಲ್ಲದೆ ಭಾರತದಲ್ಲಿನ ಮಾನಸಿಕ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ದೀಪಿಕಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಕಗೊಂಡಿರುವುದು ತುಂಬಾ ಗೌರವವನ್ನುಂಟುಮಾಡುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರವು ಸಾರ್ವಜನಿಕ ಆರೋಗ್ಯದ ಹೃದಯಭಾಗದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.
ಈ ಹುದ್ದೆಯನ್ನು ವಹಿಸಿಕೊಳ್ಳಲು ತುಂಬಾ ಗೌರವವಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ನಡೆಯುತ್ತಿರುವ ಪ್ರಯತ್ನಗಳನ್ನು ಬೆಂಬಲಿಸುವ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ. ಈ ಸಹಯೋಗದೊಂದಿಗೆ, ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವಲ್ಲಿ ಭಾರತ ಮಾಡಿರುವ ಮಹತ್ವದ ಪ್ರಗತಿಯನ್ನು ಆಧರಿಸಿ, ದೇಶದ ಮಾನಸಿಕ ಆರೋಗ್ಯ ಚೌಕಟ್ಟನ್ನು ಬಲಪಡಿಸಲು ಕೊಡುಗೆ ನೀಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ ದೀಪಿಕಾ. ಪತ್ನಿಗೆ ಈ ಮಹತ್ವದ ಹುದ್ದೆ ನೀಡಿರುವ ಹಿನ್ನೆಲೆ ಪತಿ ರಣವೀರ್ ಸಿಂಗ್, ದೀಪಿಕಾ ಅವರ ಪೋಸ್ಟ್ ಅನ್ನು ಹಂಚಿಕೊಂಡು ಈ ಬಗ್ಗೆ "ತುಂಬಾ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರೊಂದಿಗಿನ ಈ ಪಾಲುದಾರಿಕೆಯು ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲು, ಅದರ ಕಳಂಕವನ್ನು ಕಡಿಮೆ ಮಾಡಲು, ಮಾನಸಿಕ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯದ ಅವಿಭಾಜ್ಯ ಅಂಶವಾಗಿ ಎತ್ತಿ ತೋರಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.












Click it and Unblock the Notifications