'ಅವರ ಜೊತೆ ಕೈ ಕೈ ಹಿಡಿದುಕೊಂಡು ಲಂಡನ್ ಸುತ್ತಾಡಿದೆ'- ನಟಿ ಅಮೃತಾ ಅಯ್ಯಂಗಾರ್
ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮಾಕ್ಟೇಲ್, ಬಡವ ರಾಸ್ಕಲ್, ಹೊಯ್ಸಳ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಂದ ಸೈ ಎನಿಸಿಕೊಂಡ ಮುದ್ದು ಮುಖದ ಚೆಲುವೆ ನಟಿ ಅಮೃತಾ ಅಯ್ಯಂಗಾರ್. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಯಶಸ್ಸು ಕಾಣುತ್ತಿರುವ ಅಮೃತಾ ಅಯ್ಯಂಗಾರ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ನಡುವೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾದ ಅಮೃತಾ, ಚಿತ್ರರಂಗದಲ್ಲಿ ತಮ್ಮ ಸ್ನೇಹ ಸಂಬಂಧ ಹೇಗಿದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಮೃತಾ ಅಯ್ಯಂಗಾರ್, 'ನನಗೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಒಳ್ಳೆಯ ಸ್ನೇಹಿತರಿದ್ದಾರೆ. ನನಗೆ ಏನೇ ಕಷ್ಟ ಆಗಲಿ, ಏನೇ ತೊಂದರೆ ಆಗಲಿ, ಯಾವುದಾದರೂ ಸಂದರ್ಭದಲ್ಲಿ ಏನಾದರೂ ನಿರ್ಧಾರ ತೆಗೆದುಕೊಳ್ಳಬೇಕು ಅಂದರೆ ಈಗಲೂ ನಾನು ಐದು ಜನಕ್ಕೆ ಕರೆ ಮಾಡಬಹುದು. ನನ್ನಿಂದ ಉಪಯೋಗ ಬಯಸುವವರಿಂದ ನಾನು ದೂರವಾಗಿ ಬಿಟ್ಟಿದ್ದೇನೆ. ನನಗೆ ಸಿನಿಮಾ ಚೆನ್ನಾಗಿದೆ ಎನ್ನುವ ಸ್ನೇಹಿತರು ಬೇಡ. ಬದಲಿಗೆ ಸಿನಿಮಾ ಚೆನ್ನಾಗಿಲ್ಲದಿದ್ದರೂ ತಲೆ ಕೆಡಿಸಿಕೊಳ್ಳಬೇಡ ಎನ್ನುವ ಸ್ನೇಹಿತರು ಬೇಕು' ಎಂದರು.

'ಮಿಲನಾ ಮತ್ತು ಕೃಷ್ಣ ನನ್ನ ಕಷ್ಟದ ಸಮಯದಲ್ಲಿ ನನ್ನ ಫ್ಯಾಮಿಲಿ ರೀತಿ ಜೊತೆಯಲ್ಲಿ ನಿಂತಿದ್ದಾರೆ. ಏನೇ ಕೆಟ್ಟ ಕಮೆಂಟ್ ಆಗಲೀ, ಟ್ರೋಲ್ ಆಗಲೀ, ಕೃಷ್ಣ ಫೋನ್ ಮಾಡಿ ಏನು ಅಮೃತಾ ಹೀಗಾಯ್ತು ಅಂತಾರೆ. ಕಮೆಂಟ್ ನೋಡಿದ್ಯಾ ಹೋಗಲಿ ಬಿಟ್ಟಾಕು ಅಂತಾರೆ. ನನಗೆ ಅಷ್ಟೇ ಸಾಕು. ಎಷ್ಟೋ ಸಲ ಅವರ ಮನೆಗೆ ಹೋದಾಗ ಮಿಲನಾ ನನ್ನ ಜೊತೆಗೆ ಕುಳಿತುಕೊಂಡು ಕೆಲವು ಸಲಹೆಗಳನ್ನು ಕೊಡುತ್ತಾರೆ. ಅವರು ಈಗ ನನಗೆ ಅಕ್ಕನೇ ಆಗಿದ್ದಾರೆ'.
'ಈ ರೀತಿಯ ಸ್ನೇಹ ನನಗೆ ತುಂಬಾ ಇತ್ತು. ರಮ್ಯಾ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು ನಾನು. ಅವರ ಒಂದು ಹಾಡು ಬಂದರೆ ಸಾಕು ಅರ್ಧ ಕಿಲೋ ಮೀಟರ್ ದೂರ ಇದ್ದರೂ ಓಡಿ ಬಂದು ನೋಡುತ್ತಿದೆ. ಅಂತವರ ಜೊತೆ ಸ್ನೇಹ ಬೆಳೆಯಿತು. ಅವರ ಜೊತೆ ಲಂಡನ್‌ಗೆ ಹೋದೆ. ಒಂದು ದಿನ ಲಂಡನ್‌ಅನ್ನು ಅವರ ಜೊತೆ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದೇನೆ. ಆ ಕ್ಷಣಗಳು ನನಗೆ ಅಷ್ಟು ಚೆನ್ನಾಗಿತ್ತು.

'ಅವರು ಮಾಡಿರುವ ಸಿನಿಮಾಗಳು, ಅವರು ಸಿನಿಮಾ ರಂಗದ ಪಯಣ ನಮಗೆ ಸುಲಭ ಇಲ್ಲ. ಎಲ್ಲರಿಗೂ ಅದು ಕಷ್ಟವೇ. ರಮ್ಯಾ ಅವರು ಇಂದು ಸಾಧಿಸಿ ತೋರಿಸಿದ್ದಾರೆ ನಾವು ಸಾಧಿಸಬೇಕು ಅಷ್ಟೇ. ಯಾರಿಗೂ ಈ ಪಯಣ ಸುಲಭ ಅಲ್ಲ, ನೀನು ಯಾರೇ ಆದರೂ ಕಷ್ಟಪಡಲೇ ಬೇಕು ಅಂತಾ ಅವರೊಂದಿಗೆ ಕಳೆದ ಕ್ಷಣದಿಂದ ನನಗೆ ಗೊತ್ತಾಗಿದೆ' ಎಂದು ನಟಿ ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.












Click it and Unblock the Notifications