'ಟಾಕ್ಸಿಕ್'ಗಾಗಿ ಕಾದಿರುವ ಯಶ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್: ಈಗ ಗೇಮ್ ಆಡುವವರಿಗೆಲ್ಲ ಸಿಗ್ತಾರೆ ರಾಕಿಂಗ್ ಸ್ಟಾರ್
ರಾಕಿಂಗ್ ಸ್ಟಾರ್ ಯಶ್ ನಟನೆಯ "ಟಾಕ್ಸಿಕ್" ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ ಚಿತ್ರತಂಡ ಆಗಾಗ ಒಂದೊಂದು ಅಪ್‌ಡೇಟ್ ಕೊಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಲೇ ಇದೆ. ಈಗ ಕೇವಲ ಥಿಯೇಟರ್‌ನಲ್ಲಿ ಮಾತ್ರವಲ್ಲ, ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೂ ಯಶ್ ಅಬ್ಬರ ಶುರುವಾಗಲಿದೆ. 'ಟಾಕ್ಸಿಕ್' ಸಿನಿಮಾ ರಿಲೀಸ್ ಮುನ್ನವೇ ಗೇಮಿಂಗ್ ಲೋಕದಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಭಾರತದ ಅತ್ಯಂತ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ (ಬಿಜಿಎಂಐ) ಪ್ರಿಯರಿಗಾಗಿ ಕ್ರಾಫ್ಟನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ 4.4 ಅಪ್‌ಡೇಟ್ ಇಡೀ ಗೇಮಿಂಗ್ ಲೋಕವನ್ನೇ ನಡುಗಿಸಿದೆ. ಇದು ಯಶ್ ನಟನೆಯ ಮುಂಬರುವ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದೊಂದಿಗೆ ಅಧಿಕೃತವಾಗಿ ಕೈಜೋಡಿಸಿದೆ. ಗೇಮ್‌ನ ಹೊಸ 4.4 ಅಪ್‌ಡೇಟ್‌ನ ಭಾಗವಾಗಿ ಈ ವಿಶೇಷ ಸಹಯೋಗವನ್ನು ಘೋಷಿಸಲಾಗಿದೆ. ಗೇಮ್ ಆಡುವಾಗ ಇನ್ಮುಂದೆ ರಾಕಿ ಭಾಯ್ ಖಡಕ್ ಧ್ವನಿ ಕೇಳಿಬರಲಿದೆ.

ಗೇಮ್‌ನಲ್ಲಿ ಬರಲಿದೆ 'ಯಶ್ ವಾಯ್ಸ್ ಪ್ಯಾಕ್'
ಈ ಸಹಯೋಗದ ಅತ್ಯಂತ ಆಕರ್ಷಕ ಅಂಶವೆಂದರೆ ಗೇಮ್‌ನೊಳಗೆ ಲಭ್ಯವಾಗಲಿರುವ "Yash x BGMI: The Toxic Voice Pack". 'ಟಾಕ್ಸಿಕ್' ಚಿತ್ರದ ಥೀಮ್ ಹಾಗೂ ಯಶ್ ಅವರ ವಿಶಿಷ್ಟ ಮ್ಯಾನರಿಸಂ ಮತ್ತು ಪಾತ್ರದ ಶೈಲಿಗೆ ತಕ್ಕಂತೆ ಈ ಧ್ವನಿ ಪ್ಯಾಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಗೇಮರ್‌ಗಳು ಗೇಮ್ ಆಡುವಾಗ ಯಶ್ ಅವರ ಧ್ವನಿಯನ್ನು ಬಳಸಿಕೊಳ್ಳಬಹುದಾಗಿದ್ದು, ಇದು ಪ್ರಮುಖವಾಗಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರಲಿದೆ.
ಏನೆಲ್ಲ ಹೊಸ ಫೀಚರ್ಸ್?
ಈ ಗೇಮ್ ಆಡುವಾಗ ಆಟಗಾರರಿಗೆ 'ಟಾಕ್ಸಿಕ್' ಚಿತ್ರದ ಶೈಲಿಯ ಇನ್-ಗೇಮ್ ರಿವಾರ್ಡ್‌ಗಳು ಮತ್ತು ಬಹುಮಾನಗಳು ಸಿಗಲಿವೆ. 'ಟಾಕ್ಸಿಕ್' ಸಿನಿಮಾದ ಕಾಲ್ಪನಿಕ ಜಗತ್ತಿಗೆ ಸಂಬಂಧಿಸಿದ ವಿಶೇಷ ಉಡುಪುಗಳು, ಗನ್ ಸ್ಕಿನ್‌ಗಳು ಅಥವಾ ಇನ್ನಿತರೆ ಕಲೆಕ್ಟಿಬಲ್ಸ್‌ಗಳನ್ನು ಆಟಗಾರರು ಪಡೆದುಕೊಳ್ಳಬಹುದು. ಗೇಮ್‌ನೊಳಗೆ ನಡೆಯುವ ಕ್ರಾಸ್‌ಓವರ್ ಇವೆಂಟ್‌ಗಳ ಮೂಲಕ ಆಟಗಾರರು ಈ ಹೊಸ ಧ್ವನಿ ಪ್ಯಾಕ್ ಹಾಗೂ ಕಲೆಕ್ಟಿಬಲ್ಸ್‌ಗಳನ್ನು ಅನ್‌ಲಾಕ್ ಮಾಡಿಕೊಳ್ಳಬಹುದು.
#BGMI × #TOXIC
— Team Yash FC (@TeamYashFC) May 27, 2026
The Biggest collaboration we all were waiting for ❤️🔥#Yash @ThenameisYash #YashBOSS #ToxicTheMovie pic.twitter.com/lQUv9OeXs4
ಗೇಮಿಂಗ್ ಮೂಲಕ ಸಿನಿಮಾದ ಪ್ರಚಾರ
ಇತ್ತೀಚಿನ ದಿನಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳ ಪ್ರಚಾರಕ್ಕಾಗಿ ಮತ್ತು ಯುವ ಜನತೆಯನ್ನು ತಲುಪಲು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಕ್ರಾಫ್ಟನ್ ಇಂಡಿಯಾ ಪ್ರಕಾರ, ಭಾರತೀಯ ಗೇಮಿಂಗ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮನರಂಜನಾ ಸಹಯೋಗಗಳಲ್ಲಿ ಒಂದಾಗಿದೆ. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಮುನ್ನವೇ ಸಿನಿಮಾ ಮೇಲಿನ ಕ್ರೇಜ್ ಅನ್ನು ಗೇಮರ್‌ಗಳ ವಲಯದಲ್ಲಿ ಮತ್ತಷ್ಟು ಹೆಚ್ಚಿಸಲು ಈ ತಂತ್ರ ಹೂಡಲಾಗಿದೆ.
ಬಿಜಿಎಂಐ (BGMI) ಗೇಮ್‌ನ 4.4 ವರ್ಷನ್‌ನ ಈ ಹೊಸ ಅಪ್‌ಡೇಟ್ ಈಗಾಗಲೇ ಭಾರತದಾದ್ಯಂತ ರೋಲ್ ಔಟ್ ಆಗಲು ಶುರುವಾಗಿದೆ. ಆಟಗಾರರು ತಮ್ಮ ಗೇಮ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಈ ಇವೆಂಟ್‌ಗಳಲ್ಲಿ ಭಾಗವಹಿಸಬಹುದು. ಆದರೆ ಈ ವಿಶೇಷ 'ಟಾಕ್ಸಿಕ್' ಕಂಟೆಂಟ್ ಎಷ್ಟು ದಿನಗಳ ಕಾಲ ಗೇಮ್‌ನೊಳಗೆ ಲಭ್ಯವಿರಲಿದೆ ಎಂಬುದನ್ನು ಕ್ರಾಫ್ಟನ್ ಸಂಸ್ಥೆ ಇನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಕ್ರಾಫ್ಟನ್ ಸಂಸ್ಥೆಯು ಈ ಹಿಂದೆ ಕೂಡ ಭಾರತೀಯ ಮಾರುಕಟ್ಟೆ ಹಾಗೂ ಪ್ರಾದೇಶಿಕ ಆಟಗಾರರನ್ನು ಸೆಳೆಯಲು ಹಲವು ಸೆಲೆಬ್ರಿಟಿಗಳು ಹಾಗೂ ಕ್ರೀಡಾ ತಾರೆಗಳೊಂದಿಗೆ ಕೈಜೋಡಿಸಿತ್ತು. ಸದ್ಯ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಗೇಮಿಂಗ್ ಲೋಕದ ದೈತ್ಯ ಸಂಸ್ಥೆಯೊಂದಿಗೆ ನಡೆದಿರುವ ಈ ಸಹಯೋಗ ಗೇಮರ್‌ಗಳಿಗೆ ಹೊಸ ಥ್ರಿಲ್ ನೀಡುವುದಂತೂ ಪಕ್ಕಾ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತು ಮೊಬೈಲ್ ಗೇಮರ್ಸ್‌ಗೆ ಕ್ರಾಫ್ಟನ್ ಇಂಡಿಯಾ ಸಂಸ್ಥೆ ಇಂತಹದೊಂದು ಬಿಗ್ ಸರ್‌ಪ್ರೈಸ್ ಕೊಡುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹಾ ಜುಗಲ್‌ಬಂದಿ ಎನ್ನಲಾಗುತ್ತಿದೆ.













Click it and Unblock the Notifications