Yash Ramayana: ಇದಪ್ಪಾ ಯಶ್ ಹವಾ! ರಿಲೀಸ್‌ಗೂ ಮೊದಲೇ ₹1,000 ಕೋಟಿ ಗಳಿಸಿದ 'ರಾಮಾಯಣ'
ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಮಾಸ್ಟರ್‌ಪೀಸ್ ಸಿನಿಮಾದ ಅಟೆಂಶನ್ ಪ್ಲೀಸ್ ಹಾಡಿನಲ್ಲಿ "ರಾಮಾಯಣದಲ್ಲಿ ಇವನದು ರಾವಣ ಪಾತ್ರ" ಎಂಬ ಸಾಲುಗಳಿದ್ದವು. ಈಗ ನಿಜವಾಗಿಯೂ ಯಶ್ ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರವನ್ನೇ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಯಶ್ ಅವರು ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್, ಪೋಸ್ಟರ್ ಕೂಡ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ ಮೇಲೆ ಕೋಟಿಗಟ್ಟಲೆ ಬಾಚಿಕೊಳ್ಳುವುದು ಕಾಮನ್. ಆದರೆ, ಈ ರಾಮಾಯಣ ಸಿನಿಮಾ ರಿಲೀಸ್ ಮುನ್ನವೇ ಕೇವಲ ಒಂದು ಟೀಸರ್‌ನಿಂದ ₹1,000 ಕೋಟಿ ಬಾಚಿಕೊಂಡಿದೆ ಎಂದು ವರದಿಯಾಗಿದೆ.
ಅಚ್ಚರಿಯೆಂದರೆ ಎಲ್ಲರೂ ಸಾಮಾನ್ಯವಾಗಿ ರಾಮನ ಪಾತ್ರಧಾರಿ ಕಡೆಗೆ ಅಭಿಮಾನಿಗಳು ನಿಲ್ಲುತ್ತಿದ್ದರು. ಆದರೆ, ಈ ಸಿನಿಮಾದಲ್ಲಿ ಯಶ್ ಅವರ ರಾವಣ ಪಾತ್ರಕ್ಕೇ ಹೆಚ್ಚು ಹೈಪ್ ಸಿಕ್ಕಿದೆ. ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಾಮಾಯಣ ಟೀಸರ್ ಬಿಡುಗಡೆಯಿಂದ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಷೇರು ಮಾರುಕಟ್ಟೆಯಲ್ಲಿಯೂ ಭಾರೀ ಚಲನ ಮೂಡಿಸಿದೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದ್ದು, ಎರಡು ಭಾಗಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಇದರ ಒಟ್ಟಾರೆ ಬಜೆಟ್ ₹1,600 ಕೋಟಿ ಎನ್ನಲಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ರಾಮಾಯಣ ಚಿತ್ರದ ಮೊದಲ ಟೀಸರ್ ಬಿಡುಗಡೆಯಿಂದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಕಂಪನಿಗೆ ಭಾರೀ ಹಣಕಾಸು ಲಾಭ ದೊರೆತಿದೆ. ಟೀಸರ್ ಬಿಡುಗಡೆಯಿಂದಾಗಿ ಕಂಪನಿಯ ಷೇರು ಮೌಲ್ಯವು ಕೇವಲ ಎರಡು ದಿನಗಳಲ್ಲಿ ₹1,000 ಕೋಟಿಯಷ್ಟು ಹೆಚ್ಚಳ ಕಂಡಿದೆ.
ಜೂನ್ 25ರಿಂದ ಜುಲೈ 1ರವರೆಗೆ ಪ್ರೈಮ್ ಫೋಕಸ್ ಷೇರು ಬೆಲೆ ₹113.47ರಿಂದ ₹149.69ಕ್ಕೆ ಅಂದರೆ ಶೇ 30ರಷ್ಟು ಏರಿಕೆಯಾಯಿತು. ಇದಕ್ಕೆ ಕಾರಣ 462.7 ಮಿಲಿಯನ್ ಹೊಸ ಷೇರುಗಳ ವಿಶೇಷ ಹಂಚಿಕೆ. ಜುಲೈ 3ರಂದು ಟೀಸರ್ ಬಿಡುಗಡೆಯಾದ ನಂತರ ಷೇರು ಬೆಲೆ ₹176 ತಲುಪಿತು. ಈ ಮೂಲಕ ಮಾರುಕಟ್ಟೆ ಮೌಲ್ಯ ₹4,638 ಕೋಟಿಯಿಂದ ₹5,641 ಕೋಟಿಗೆ ಏರಿತು ಎನ್ನಲಾಗಿದೆ.
ಈ ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಪ್ರೈಮ್ ಫೋಕಸ್ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಯ ಹೊಸ ಷೇರುಗಳ ಹಂಚಿಕೆಯಲ್ಲಿ ರಣಬೀರ್‌ಗೆ 12.5 ಲಕ್ಷ ಷೇರುಗಳನ್ನು ನೀಡಲಾಗುತ್ತಿದ್ದು, ಇದನ್ನು ಪ್ರಸ್ತುತ ದರದಲ್ಲಿ ಲೆಕ್ಕ ಹಾಕಿದರೆ ₹20 ಕೋಟಿ ಹೂಡಿಕೆ ಎಂದು ಹೇಳಲಾಗುತ್ತಿದೆ.
ರಾಮಾಯಣ ಚಿತ್ರದ ಟೀಸರ್ ಬಿಡುಗಡೆಯಿಂದಲೇ ಪ್ರೈಮ್ ಫೋಕಸ್ ಕಂಪನಿಗೆ ಸಿನಿಮಾ ರಿಲೀಸ್‌ಗೂ ಮುನ್ನ ಭಾರೀ ಹಣಕಾಸು ಲಾಭ ಮತ್ತು ಮಾರುಕಟ್ಟೆಯಲ್ಲಿ ಭರವಸೆ ಸಿಕ್ಕಿದೆ. ಚಿತ್ರರಂಗದ ದೊಡ್ಡ ಯೋಜನೆಗಳು ಹೂಡಿಕೆದಾರರ ಮನೋಭಾವ ಮತ್ತು ಷೇರು ಮಾರುಕಟ್ಟೆಯ ಮೇಲೆ ಎಷ್ಟು ಪ್ರಭಾವ ಬೀರುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಚರ್ಚೆ ನಡೆಯುತ್ತಿದೆ.
ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದ್ದು ಮೊದಲ ಭಾಗ 1 ಈ ವರ್ಷದ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ತೆರೆ ಕಾಣಲಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ರಾವಣನ ಪಾತ್ರದಲ್ಲಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಸೀತಾ, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಎ.ಆರ್.ರಹಮಾನ್ ಮತ್ತು ಹಾನ್ಸ್ ಜಿಮ್ಮರ್ ಅವರ ಸಂಗೀತವೂ ಗಮನ ಸೆಳೆಯುತ್ತಿದೆ.












Click it and Unblock the Notifications