Vinod Raj: ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್
ಬೆಂಗಳೂರಿನಲ್ಲಿರುವ ದೊಡ್ಡ ಸಮಸ್ಯೆಗಳಲ್ಲಿ ರಸ್ತೆ ಗುಂಡಿಗಳು ಕೂಡ ಮುಖ್ಯವಾದದ್ದು. ಸರ್ಕಾರ ಹಾಗೂ ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡಿದರೂ ಬೆಂಗಳೂರಿನ ರಸ್ತೆಗಳು ಗುಂಡಿಮುಕ್ತವಾಗಲೇ ಇಲ್ಲ ಅಂತಾರೆ ಜನ. ಒಂದು ಮಳೆ ಬಂದರೆ ಸಾಕು ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದುಕೊಂಡು ನೀರು ನಿಲ್ಲುತ್ತವೆ. ಈ ಗುಂಡಿಗಳಿಂದ ಅಪಘಾತಗಳಾಗಿ ಜೀವ ಕಳೆದುಕೊಂಡಿರುವ ಪ್ರಕರಣಗಳೂ ಇವೆ. ಇದೀಗ ನಟ ವಿನೋದ್ ರಾಜ್‌ಕುಮಾರ್ ಅವರು ಸರ್ಕಾರಕ್ಕಾಗಿ ಕಾಯದೇ ತಾವೇ ಫೀಲ್ಡಿಗಿಳಿದು ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಹೌದು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸದ್ಯ ನೆಲಮಂಗಲ ಬಳಿಯೇ ನೆಲೆಸಿರುವ ವಿನೋದ್ ರಾಜ್ ಅವರು ಅಲ್ಲಿನ ಪ್ರಮುಖ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನು ಗಮನಿಸಿದ್ದರು. ಅಲ್ಲದೆ ಈ ರಸ್ತೆಯಲ್ಲಿ ಭಾರೀ ಅಪಘಾತಗಳು ಕೂಡ ನಡೆಯುತ್ತಿದ್ದವು ಎನ್ನಲಾಗಿದೆ. ಇದನ್ನು ಮನಗಂಡ ಅವರು ಸಾಮಾಜಿಕ ಕಳಕಳಿಯಿಂದ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಕೆಲಸ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮತ್ತೊಂದೆಡೆ ಅಲ್ಲಿನ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಜನಪರ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದ ವಿನೋದ್ ರಾಜ್ ಅವರು ನೆಲಮಂಗಲ ಪೊಲೀಸ್ ಠಾಣೆ ಬಳಿ ಸ್ವಃತ ಖರ್ಚಿನಲ್ಲಿ ರಸ್ತೆಗುಂಡಿ ಮುಚ್ಚಿಸಿದ್ದರು. ಹಣ ನೀಡಿ ಸಿಮೆಂಟ್ ಕಾಂಕ್ರಿಟ್‌ನ ಮಿಕ್ಸ್ ಮಾಡಿಸಿ, ಟ್ರ್ಯಾಕ್ಟರ್‌ಗಳ ಮೂಲಕ ರಸ್ತೆಗೆ ಹಾಕಿಸಿ ಸಮತಟ್ಟು ಮಾಡಿಸ್ತಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಸ್ತೆಯಲ್ಲಿ ಮತ್ತೆ ಗುಂಡಿಗಳು ಹೆಚ್ಚಾಗಿದ್ದವು. ಹೀಗಾಗಿ ಅವರೇ ಖುದ್ದಾಗಿ ಆ ರಸ್ತೆಯಲ್ಲಿ ನಿಂತು, ಒಂದು ಟ್ರ್ಯಾಕ್ಟರ್‌ನಲ್ಲಿ ಸಿಮೆಂಟ್ ಜೆಲ್ಲಿ ಮಿಕ್ಸ್ ತರಿಸಿ ಗುಂಡಿ ಮುಚ್ಚಿಸಿದ್ದಾರೆ.
ಗುಂಡಿ ಮುಚ್ಚಲು ಶಾಸಕರೇ ಆಗಬೇಕಾಗಿಲ್ಲ, ಅಧಿಕಾರಿಗಳು ಬೇಕಾಗಿಲ್ಲ. ಮಾಡೋ ಇಚ್ಛೆ ಹಾಗೂ ಸಾಮರ್ಥ್ಯ ಇರಬೇಕೆಂದು ತೋರಿಸಿದ ವಿನೋದ್ ರಾಜ್ ಅವರ ಸಾಮಾಜಿಕ ಕಳಕಳಿ ಮತ್ತು ಅವರ ಜನಪರ ಬದ್ಧತೆ ನಿಜಕ್ಕೂ ಶ್ಲಾಘನೀಯ. ಲೀಲಾವತಿ ಅಮ್ಮಗೆ ತಕ್ಕ ಮಗ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಈಗಿನ ಸರ್ಕಾರಗಳು ಸುಮ್ಮನೆ ಇರೋದಷ್ಟೇ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು, ಸರ್ಕಾರಕ್ಕೆ ಕಾಯಬಾರದು ಎಂಬ ಪಾಠವನ್ನು ವಿನೋದ್ ರಾಜ್ ಕಲಿಸಿದ್ದಾರೆ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಮಾಡೆಲ್ ಎಂದ ಬಿಜೆಪಿ
ವಿನೋದ್ ರಾಜ್ ಅವರು ರಸ್ತೆ ಗುಂಡಿ ಮುಚ್ಚಿಸುತ್ತಿರುವ ವಿಡಿಯೋವನ್ನು ಬಿಜೆಪಿ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಗ್ಯಾರಂಟಿ ಮಾಡೆಲ್ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಆಡಳಿತಯಂತ್ರಕ್ಕೆ ಸಂಪೂರ್ಣ ತುಕ್ಕು ಹಿಡಿದಿದೆ. ಈಗ ಜನರೇ ಸ್ವಂತ ಖರ್ಚಿನಿಂದ ರಸ್ತೆ ಗುಂಡಿ ಮುಚ್ಚುವ ಪರಿಸ್ಥಿತಿ ಈ ರಾಜ್ಯದಲ್ಲಿದೆ. ರಸ್ತೆ ಗುಂಡಿ ಮುಚ್ಚಲೂ ಯೋಗ್ಯತೆಯಿಲ್ಲ ಕೈಲಾಗದ ಸರ್ಕಾರವಿದು ಎಂದು ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications