Vijay Suriya: ಮದುವೆಗೆ ರೆಡಿಯಾಗಿ ಲೈವ್ ಬಂದ ವಿಜಯ್ ಸೂರ್ಯ
ನಟ ವಿಜಯ್ ಸೂರ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆ ಡಿಂಪಲ್, ಮುಗ್ಧ ನಗು, ಮಾತು ಒಂದು ಕಾಲದಲ್ಲಿ ಕರ್ನಾಟಕದ ಲಕ್ಷಾಂತರ ಹುಡುಗಿಯರ ಮನಸ್ಸು ಕದ್ದ ಚೋರ ಇವರು. ಅಗ್ನಿ ಸಾಕ್ಷಿಯ ಸಿದ್ಧಾರ್ಥ್ ಎಂದರೆ ಶಾಲೆಗೆ ಹೋಗುವ ಕಿರಿಯವರಿಂದ ಹಿಡಿದು ಮನೆಯಲ್ಲಿರುವ ಹಿರಿಯವರ ವರೆಗೂ ಅಚ್ಚು ಮೆಚ್ಚು. ಐದಕ್ಕೂ ಹೆಚ್ಚು ವರ್ಷ ಪ್ರಸಾರ ಕಂಡ ಅಗ್ನಿ ಸಾಕ್ಷಿ ಧಾರಾವಾಹಿ ನಟ ವಿಜಯ್ ಸೂರ್ಯಗೆ ಆ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು.
ಸಿದ್ಧಾರ್ಥ್ ಹಾಗೂ ಸನ್ನಿದ್ಧಿ ಜೋಡಿ ಎಂದರೆ ಜನ ಮೆಚ್ಚಿದ ಜೋಡಿಯಾಗಿತ್ತು. ಅಗ್ನಿ ಸಾಕ್ಷಿ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದ ವಿಜಯ್ ಸೂರ್ಯ ಇಷ್ಟ ಕಾಮ್ಯ ಚಿತ್ರದಲ್ಲಿ ನಟಿಸಿದ್ದರು. ಕೆಲ ವರ್ಷದ ವಿರಾಮದ ಬಳಿಕ ಮತ್ತೆ ಕಿರುತೆರೆ ಮರಳಿದ ವಿಜಯ್ ಸೂರ್ಯ, ಜೊತೆ ಜೊತೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ, ಮತ್ತೆ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕನಾದರು.

ಚಾಕಲೇಟ್ ಹೀರೋ ಆಗಿದ್ದ ವಿಜಯ್ ಸೂರ್ಯ ಈಗ ರಗಡ್ ಹೀರೋ ಆಗಿ ಬದಲಾಗಿದ್ದಾರೆ. ಸಿದ್ಧಾರ್ಥ್ ಅಂತಹ ಮೃದು ಸ್ವಭಾವದ ಪಾತ್ರ ಮಾಡಿದ್ದ ವಿಜಯ್ ಸೂರ್ಯ ಈಗ ಖಡಕ್ ಹೀರೋ. ಸದ್ಯ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತ ಪಾತ್ರದಲ್ಲಿ ವಿಜಯ್ ಸೂರ್ಯ ನಟಿಸುತ್ತಿದ್ದು, ಪಕ್ಕಾ ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಸೂರ್ಯ ಅವರ ಹೊಸ ಲುಕ್‌ನ ಪಾತ್ರವನ್ನು ಒಪ್ಪಿಕೊಂಡಿರುವ ಜನರು ದೃಷ್ಟಿ ಬೊಟ್ಟು ಧಾರಾವಾಹಿಯನ್ನು ಪ್ರೀತಿಯಿಂದ ನೋಡುತ್ತಿದ್ದಾರೆ.
ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತನ ಮದುವೆ ಕಥೆ ನಡೆಯುತ್ತಿದ್ದು, ವಿಜಯ್ ಸೂರ್ಯ ಮದುವೆ ಲುಕ್‌ನಲ್ಲೇ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ. ದೃಷ್ಟಿ ಬೊಟ್ಟು ಧಾರಾವಾಹಿ ಮಹತ್ವದ ಘಟ್ಟಕ್ಕೆ ತಲುಪುತ್ತಿದ್ದು, ದೃಷ್ಟಿಯನ್ನು ಮದುವೆಯಾಗಬೇಕಿರುವ ದತ್ತ ಇಂಪನಾಳನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಸದ್ಯ ದತ್ತ-ಇಂಪನಾ ಮದುವೆ ಕಥೆ ನಡೆಯುತ್ತಿದ್ದು, ಈ ಮದುವೆ ನಡೆಯುತ್ತಾ? ಅಥವಾ ಮುರಿದು ಬೀಳುತ್ತಾ ಅಂತಾ ಪ್ರೇಕ್ಷಕರು ಕಾದು ನೋಡಬೇಕಿದೆ. ಆದರೆ ಮದುಮಗನ ಲುಕ್‌ನಲ್ಲಿರುವ ವಿಜಯ್ ಸೂರ್ಯ ಸಖತ್ ಆಗಿ ಮಿಂಚುತ್ತಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಇನ್ನು ನಿಜ ಜೀವನದಲ್ಲಿ ಮದುವೆಯಾಗಿರುವ ವಿಜಯ್ ಸೂರ್ಯ ಅವರ ಬಾಳ ಸಂಗಾತಿಯ ಹೆಸರು ಚೈತ್ರಾ ಶ್ರೀನಿವಾಸ್. 2019ರ ಫೆಬ್ರವರಿ 14ರಂದು ಮದುವೆಯಾಗಿದ್ದ ವಿಜಯ್ ಸೂರ್ಯ- ಚೈತ್ರಾ ಶ್ರೀನಿವಾಸ್ ದಂಪತಿಗೆ ಸೋಹನ್ ಸೂರ್ಯ ಹಾಗೂ ಕಾರ್ತಿಕೇಯ ಸೂರ್ಯ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ.












Click it and Unblock the Notifications