ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್‌ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಶುರುವಾಗಿದ್ದು "ಕಿರಿಕ್ ಪಾರ್ಟಿ" ಇಂದ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲು ನಡೆದಿದ್ದ ಒಂದು ಕುತೂಹಲಕಾರಿ ಕಥೆಯನ್ನು ಬಿಗ್‌ಬಾಸ್ ಖ್ಯಾತಿಯ ತ್ರಿವಿಕ್ರಮ್ ಈಗ ಬಿಚ್ಚಿಟ್ಟಿದ್ದಾರೆ.
ರಶ್ಮಿಕಾ ಮೊಟ್ಟಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು "ಗೆಳೆಯರೇ ಗೆಳತಿಯರೇ" ಎಂಬ ಸಿನಿಮಾದಲ್ಲಿ. ಇದರಲ್ಲಿ ತ್ರಿವಿಕ್ರಮ್ ಕೂಡ ನಾಯಕನಾಗಿ ನಟಿಸಿದ್ದರು. ಆದರೆ, ದುರಾದೃಷ್ಟವಶಾತ್ ಈ ಕಾಲೇಜ್ ಸ್ಟೋರಿ ಸಿನಿಮಾ ಅರ್ಧಕ್ಕೇ ನಿಂತು ಹೋಗಿತ್ತು. ಈ ನೆನಪನ್ನು ಮೆಲುಕು ಹಾಕಿರುವ ತ್ರಿವಿಕ್ರಮ್, ರಶ್ಮಿಕಾ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

ರಶ್ಮಿಕಾ ಇವತ್ತಿಗೂ ಹಾಗೇ ಇದ್ದಾರೆ
'ಮೊದಲಿಗೆ ರಶ್ಮಿಕಾ ನಮ್ಮ ಸಿನಿಮಾದ ಹೀರೋಯಿನ್. ನಮ್ಮ ಗೆಳೆಯರೇ ಗೆಳತಿಯರೇ ಸಿನಿಮಾದಲ್ಲಿ ಎರಡು ಜೋಡಿಗಳಿದ್ದವು. ನನ್ನ ಜೋಡಿ ಬೇರೆ ಇದ್ದರು. ಇನ್ನೊಬ್ಬ ಹೀರೋಗೆ ರಶ್ಮಿಕಾ ಜೋಡಿ ಆಗಿದ್ದರು. ಇದು ಕಾಲೇಜ್ ಸ್ಟೋರಿಯ ಸಿನಿಮಾ. ನಾನು ಕಂಡಂತೆ ರಶ್ಮಿಕಾ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದ್ದಾರೆ. ಅವತ್ತಿನ ರಶ್ಮಿಕಾ ಆಗಿಯೇ ಇವತ್ತಿಗೂ ಕಾಣುತ್ತಿದ್ದಾರೆ. ನಾನು ರಶ್ಮಿಕಾನ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ' ಎಂದಿದ್ದಾರೆ.
'ನಾವು ಸಿನಿಮಾದಲ್ಲಿನ ಒಂದು ಸೀನ್ ಮಾಡಿದ್ವಿ. ಆಗ ಸಿನಿಮಾದ ಶೂಟಿಂಗ್ ಹಂತದಲ್ಲೇ ನಾನು ರಶ್ಮಿಕಾಗೆ 'ನೀನು ಪಕ್ಕಾ ಬಾಲಿವುಡ್‌ಗೆ ಹೋಗ್ತೀಯಾ' ಅಂತ ಹೇಳಿದ್ದೆ. ನನ್ನ ಆ ಮಾತು ಇಂದು ನಿಜವಾಗಿದೆ ಎಂದಿದ್ದಾರೆ. ಅಂದಿನಿಂದ ಇಂದಿನವರೆಗೆ ರಶ್ಮಿಕಾ ಶಿಸ್ತು ಮತ್ತು ಕಠಿಣ ಪರಿಶ್ರಮದಲ್ಲಿ ಬದಲಾಗಿಲ್ಲ. ಸಿನಿಮಾ ಜ್ಞಾನ ಮತ್ತು ಕನೆಕ್ಷನ್ ಬೆಳೆಸಿಕೊಳ್ಳುವಲ್ಲಿ ಅವರು ಆಗಲೇ ಸಖತ್ ಶಾರ್ಪ್ ಇದ್ದರು. ಅವಳು ಅಲ್ಲಿರಲು ನಿಜಕ್ಕೂ ಅರ್ಹಳು' ಎಂದಿದ್ದಾರೆ ತ್ರಿವಿಕ್ರಮ್. ನ್ಯಾಷನಲ್ ಕ್ರಶ್ ಇಂದು ಈ ಎತ್ತರಕ್ಕೆ ಬೆಳೆದಿರುವುದರ ಹಿಂದೆ ಅಂದಿನಿಂದಲೂ ಅವರಲ್ಲಿದ್ದ ಹಾರ್ಡ್‌ವರ್ಕ್ ಮತ್ತು ದೊಡ್ಡ ಕನಸುಗಳಿದ್ದವು ಎಂಬುದು ತ್ರಿವಿಕ್ರಮ್ ಅಭಿಪ್ರಾಯ.
ಇನ್ನು ರಶ್ಮಿಕಾ ಅವರನ್ನು ಜನ ಮೊದಲಿಗೆ ಗುರುತಿಸಿದ್ದು ಕನ್ನಡದ "ಕಿರಿಕ್ ಪಾರ್ಟಿ" ಸಿನಿಮಾದಿಂದ. ಆದರೆ ರಶ್ಮಿಕಾಗೆ ಇದು ಮೊದಲ ಸಿನಿಮಾ ಅಲ್ಲ ಎಂದು ಕೆಲ ತಿಂಗಳ ಹಿಂದೆ ಹೇಳಿಕೊಂಡಿದ್ದರು. ಇದಕ್ಕೂ ಮುನ್ನ "ಗೆಳೆಯರೇ ಗೆಳತಿಯರೇ" ಎನ್ನುವ ಸಿನಿಮಾದಲ್ಲಿ ರಶ್ಮಿಕಾ ನಟಿಸಿದರೂ ಸಿನಿಮಾ ಅರ್ಧಕ್ಕೆ ನಿಂತಿತ್ತು ಎಂಬುದನ್ನೂ ಅವರು ಹೇಳಿಕೊಂಡಿದ್ದರು. ಆದರೆ ತೆರೆ ಮೇಲೆ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರಿಂದ ಅದೇ ಅವರ ಮೊದಲ ಸಿನಿಮಾ ಎಂಬ ಖ್ಯಾತಿ ಪಡೆಯಿತು. ಅಲ್ಲದೆ ರಶ್ಮಿಕಾಗೆ ಕಿರಿಕ್ ಬೆಡಗಿ ಎಂಬ ಹೆಸರೂ ಬಂತು.
ರಾಜಸ್ಥಾನದಲ್ಲಿ ರಶ್ಮಿಕಾ ರಾಯಲ್ ಮದುವೆ
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಿತು. ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯ ನಂತರ ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡು, ವಿಜಯ್ ದೇವರಕೊಂಡ ಅವರನ್ನು "ನನ್ನ ಪತಿ" ಎಂದು ಜಗತ್ತಿಗೆ ಪರಿಚಯಿಸಿದರು.












Click it and Unblock the Notifications