ಸಿನಿಮಾ ಬಿಟ್ಟು ಸೀರಿಯಲ್‌ಗೆ ಬರಲು ಅದೇ ಕಾರಣ: ನಟ ಮೋಹನ್ ಶಂಕರ್ ಹೇಳಿದ್ದೇನು?
ಕನ್ನಡದ "ಯಾರಿಗೆ ಸಾಲುತ್ತೆ ಸಂಬಳ", "ಕುರಿಗಳು ಸಾರ್ ಕುರಿಗಳು", "ಕೋತಿಗಳು ಸಾರ್ ಕೋತಿಗಳು", "ಮಲ್ಲ" ಸಿನಿಮಾದ ಪಾತ್ರಗಳಿಂದ ಮನೆಮಾತಾಗಿದ್ದರು ನಟ ಮೋಹನ್ ಶಂಕರ್. "ಸೆಂಟ್ರಲ್ ಜೈಲ್" ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರು, "ಕೃಷ್ಣ ನೀ ಲೇಟ್ ಆಗಿ ಬಾರೋ" ಸಿನಿಮಾ ಮೂಲಕ ಮೋಹನ್ ನಿರ್ದೇಶಕರಾಗಿದ್ದರು. ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ನಾಲ್ಕನೇ ಸೀಸನ್ ಸ್ಪರ್ಧಿಯೂ ಆಗಿದ್ದ ಮೋಹನ್, ಬಳಿಕ ಕಿರುತೆರೆಯತ್ತ ಮುಖ ಮಾಡಿ ಅಲ್ಲಿಯೂ ಮಿಂಚಿದ್ದರು. ಇದಕ್ಕೆ ಬಲವಾದ ಕಾರಣ ಏನೆಂದು ಮೋಹನ್ ಅವರೇ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದ ನಟ ಮೋಹನ್ ಶಂಕರ್ ಅವರು ಶ್ರಾವಣಿ ಸುಬ್ರಮಣ್ಯ, ನಾಗಿಣಿ 2 ಸೀರಿಯಲ್‌ಗಳನ್ನು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಸದ್ಯ ಅವರ ಜರ್ನಿ ಸೀರಿಯಲ್‌ನಲ್ಲೇ ಮುಂದುವರಿದಿದೆ. ಈಗ ನೀ ಇರಲು ಜೊತೆಯಲ್ಲಿ ಸೀರಿಯಲ್ ಲಾಂಚ್ ಆಗಿದ್ದು, ಈ ವೇಳೆ ಅವರು ಕಿರುತೆರೆಗೆ ಬರಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟನಾಗಿ, ನಿರ್ದೇಶಕನಾಗಿ ಮಿಂಚುತ್ತಿರುವಾಗಲೇ ಈ ನಿರ್ಧಾರ ಏಕೆ ತೆಗೆದುಕೊಂಡಿದ್ದು ಎಂದು ವಿವರಿಸಿದ್ದಾರೆ.

'ಕೋಟಿ ಕೋಟಿ ಕಳೆದುಕೊಂಡೆ'
'ನನಗೆ ಹೆಸರು ಕೊಟ್ಟಿದ್ದು ಸಿನಿಮಾ, ಈಗ ಉಸಿರು ಕೊಡುತ್ತಿರುವುದು ಸೀರಿಯಲ್ ಎಂದು ನಟ ಮೋಹನ್ ಹೇಳಿದ್ದಾರೆ. ಈಗಲೂ ಯಾರಿಗೆ ಸಾಲುತ್ತೆ ಸಂಬಳ ಅಂತ ಸಿನಿಮಾನ ಸೆಪ್ಟೆಂಬರ್‌ನಲ್ಲಿ ಮಾಡ್ತೀನಿ ಎಂದು ಅವರು ಬೆಳ್ಳಿತೆರೆಗೆ ಮರಳುವ ಸುಳಿವು ಕೊಟ್ಟಿದ್ದಾರೆ. ನಾನು ಸಿನಿಮಾ ಮಾಡಿ, ಸುಮಾರು ಒಂದೂವರೆ ಕೋಟಿಯಷ್ಟು ಹಣ ಕಳೆದುಕೊಂಡೆ. ಅದನ್ನ ರಿಕವರ್ ಮಾಡಬೇಕಿದ್ದ ಕಾರಣ ಸೀರಿಯಲ್ ಕಡೆಗೆ ಮುಖ ಮಾಡಿದೆ. ಸೆಪ್ಟೆಂಬರ್ ವೇಳೆ ಮತ್ತೆ ಸಿನಿಮಾ ಕಡೆಗೆ ಹೋಗುತ್ತೀನಿ. ಸಿನಿಮಾ ಹಾಗೂ ಸೀರಿಯಲ್ ಎರಡನ್ನೂ ಮಾಡಿಕೊಂಡು ಹೋಗ್ತೀನಿ' ಎಂದಿದ್ದಾರೆ ಮೋಹನ್.
'ನನ್ನ ನಷ್ಟದ ಹಣ ರಿಕವರಿ ಮಾಡೋಕೆ ಒಂದು ಮೂಲ ಬೇಕಿತ್ತು. ನಾನು ಮೊದಲಿಗೆ ಹೀರೋ ಆಗಿಯೇ ಮಾಡುತ್ತಿದ್ದೆ. ಆದರೆ ಯಾರೂ ಹೆಚ್ಚು ಪೇಮೆಂಟ್ ಕೊಟ್ಟು ಕರೆಸಿಕೊಳ್ಳುತ್ತಿರಲಿಲ್ಲ. ಆಗ ನನಗೆ ನಾಗಿಣಿ ಸೀರಿಯಲ್‌ನಲ್ಲಿ ಅವಕಾಶ ಸಿಕ್ತು. ಅವರು ನನಗೆ ಹೊಟ್ಟೆತುಂಬಾ ಕೊಟ್ರು, ಅದಕ್ಕೇ ಈ ಕಡೆಗೆ ಬಂದೆ' ಎಂದು ಹಾಸ್ಯವಾಗಿ ಹೇಳಿದ್ದಾರೆ.
ಮೋಹನ್ ಅವರು ನಟ, ನಿರ್ದೇಶಕ ಮಾತ್ರವಲ್ಲದೆ, 50ಕ್ಕೂ ಸಿನಿಮಾಗಳ ಆಲ್ಬಮ್‌ಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಬರೆಯುವ ಮೂಲಕ ಗಮನ ಸೆಳೆದಿದ್ದರು. ಉಪ್ಪಿ-ಶಿವಣ್ಣ ಕಾಂಬಿನೇಷನ್‌ನಲ್ಲಿ ಮೂಡಿಬಂದ ಲವ ಕುಶ ಸಿನಿಮಾಗೂ ಕಥೆ ಬರೆದಿದ್ದರು. ಇನ್ನು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋಹನ್ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರು. ನಂತರ ಸೀರಿಯಲ್‌ಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದರು. ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಶಿಕ್ಷಣ ಮಂತ್ರಿ ವೀರೇಂದ್ರನಾಥ್ ಪಾತ್ರದಲ್ಲಿ ಮೋಹನ್ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು. 'ನಾಗಿಣಿ-2' ಧಾರಾವಾಹಿಯ ದಿಗ್ವಿಜಯ್ ಪಾತ್ರದಲ್ಲಿಯೂ ಮೋಹನ್ ಮೋಡಿ ಮಾಡಿದ್ದಾರೆ.












Click it and Unblock the Notifications