ಸಿನಿಮಾ ಪಾತ್ರಕ್ಕೆ ಬಂದ ಬಡವರ ಮನೆ ಹುಡುಗಿ ಜೊತೆ ಲೀವಿಂಗ್ ಟುಗೆದರ್.. ಮದುವೆ!
ಬೆಂಗಳೂರು, ನವೆಂಬರ್ 04: ಮಠ, ಎದ್ದೇಳು ಮಂಜುನಾಥ, ಎರಡನೇ ಸಲದಂತಹ ಎಂದೂ ಮರೆಯದ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಸ್ಟಾರ್ ನಿರ್ದೇಶಕ ಗುರು ಪ್ರಸಾದ್ ಸಾವಿಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಗುರು ಪ್ರಸಾದ್ ದೇಹ ಪತ್ತೆ ಆಗಿದ್ದು, ಅಂತ್ಯಸಂಸ್ಕಾರ ಕೂಡ ನೆರವೇರಿದೆ.
ನಿರ್ದೇಶಕ ಗುರು ಪ್ರಸಾದ್ ಅವರ ಬದುಕು, ಮದುವೆ ಹಾಗೂ ಸಾವಿನ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿದ್ದು, ಗುರು ಪ್ರಸಾದ್ ಇತ್ತೀಚಿಗೆ ಎರಡನೇ ಮದುವೆಯಾಗಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ನಟ, ಸಂಸದ ಜಗ್ಗೇಶ್ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್, ಮೊದಲು ಬಂದಾಗ ಸ್ಕ್ರಿಪ್ಟ್ ಹಿಡಿದುಕೊಂಡು ಬರುವ ಗುರು ಪ್ರಸಾದ್‌ನ ನೋಡಿದ್ದೆ.

ಇತ್ತೀಚಿಗೆ ಬಂದಾಗ ಆರು ಬಾಟೆಲ್‌ಗಳನ್ನು ಹಿಡಿದುಕೊಂಡು ಬರುವ ವ್ಯಕ್ತಿಯನ್ನು ಸಹ ನೋಡಿದೆ. ಮೊದಲು ಅವನ ಜೀವನ ಚೆನ್ನಾಗಿತ್ತು. ಒಳ್ಳೆ ಹೆಂಡತಿ ಸಿಕ್ಕಿದ್ದಳು ಅವನಿಗೆ. ಎಂತಹಾ ಬ್ಯೂಟಿಫುಲ್ ಹೆಂಡತಿ ಸಿಕ್ಕಿದ್ದಳು ಅಂದರೆ ಅರುಂಧತಿ ಅಂತಾ ಆಕೆಯ ಹೆಸರು. ಅವಳಿಗೆ ಮುದ್ದಾದ ಮಗಳಿದ್ದಾಳೆ ಎಂದರು.
ಗುರು ಪ್ರಸಾದ್ ಮೊದಲನೇ ಹೆಂಡತಿ ಮತ್ತು ಮಗಳು ಇಬ್ಬರೂ ಯೋಗಪಟುಗಳು. ಇಬ್ಬರೂ ನ್ಯಾಷನಲ್ ಲೆವೆಲ್‌ನಲ್ಲಿ ಫೇಮಸ್. ಅವರ ಜೊತೆ ವಿಚ್ಛೇಧನ ಮಾಡಿಕೊಂಡು ಪಾಪ ಇನ್ನೊಂದು ಅಮಾಯಕ ಹೆಣ್ಣು ಮಗಳನ್ನು ಎರಡನೇ ಮದುವೆಯಾದರು. ಅವಳನ್ನು ಈಗ ನೆನಪಿಸಿಕೊಂಡರೂ ನನ್ನ ಕಣ್ಣಿನಲ್ಲಿ ನೀರು ಬರುತ್ತದೆ. ತುಂಬಾ ಒಳ್ಳೆ ಹುಡುಗಿ. ಯಾವುದೋ ಸಿನಿಮಾ ಪಾತ್ರ ಅಂತಾ ಬಂದಿರುವ ಬಡವರ ಮನೆ ಹುಡುಗಿ. ಅವಳ ಜೊತೆ ಲೀವಿಂಗ್ ಟುಗೆದರ್‌ನಲ್ಲಿ ಇದ್ದು, ಬಳಿಕ ಮದುವೆಯಾಗಿ ಹೆಣ್ಣು ಮಗುವನ್ನು ದಾನ ಕೊಟ್ಟಿದ್ದಾನೆ. ಆ ಮಗುವಿಗೆ ಈಗ ಮೂರು ವರ್ಷ ಎಂದು ಜಗ್ಗೇಶ್ ಹೇಳಿದರು.
ಮಾತು ಮುಂದುವರಿಸಿದ ಅವರು, ಇಂತಹ ಸಮಯದಲ್ಲಿ ಹೀಗೆ ಆದರೆ ಅವರ ಮುಂದಿನ ಜೀವನ ಏನು?.. ಸಿಟ್ಟು, ಹತಾಶೆ, ಕೋಪ, ಇಡೀ ಉದ್ಯಮದಲ್ಲಿ ಎಲ್ಲರನ್ನೂ ಸಹ ಡೈಲಾಗ್ ಮೂಲಕ ಬೈಯುವುದು. ವ್ಯಂಗ್ಯ, ಒಳ್ಳೆ ಕನ್ನಡ ಹಾಡು ಮಾಡಿ ಮೀಟೂ ಅಂದ..ಅದು ಆಮೇಲೆ ನನ್ನ ಮೇಲೆ ಬಂತು..ನಾನ್ಯಾಕೆ ಆ ರೀತಿ ಹೇಳಲಿ. ಅವನು ಎಷ್ಟೇ ದೊಡ್ಡ ಕಲಾವಿದ ಆದರೂ ಅವನು ನಿರ್ದೇಶಕರಿಗೆ ಅಧೀನ. ಅವನು ಏನು ಹೇಳುತ್ತಾನೋ ಅವನು ಅದನ್ನು ಮಾಡಬೇಕು. ಇಲ್ಲ ಅಂದರೆ ಅದು ತಪ್ಪಾಗುತ್ತದೆ ಎಂದರು.
ಆತನಿಗಿದ್ದ ಹತಾಶೆ, ಸಾಲಬಾಧೆ, ಕೆಟ್ಟ ಚಟದಿಂದ ಅವರ ಬದುಕು ತುಂಬಾ ಗೊಂದಲ ಮಯವಾಗಿತ್ತು. ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾವನ್ನು ನನ್ನ ಕೊನೆ ಉಸಿರು ಇರುವವರೆಗೂ ಮರೆಯಲು ಆಗುವುದಿಲ್ಲ. ಒಬ್ಬ ಕಲಾವಿದನಾಗಿ ಎರಡೂ ಸಿನಿಮಾವನ್ನು ಪ್ರೀತಿಸಿದ್ದೇನೆ. ಅಂತಹ ಒಳ್ಳೆ ನಿರ್ದೇಶಕ ಸ್ವಯಂಕೃತ ಅಪರಾಧದಿಂದ ಇಂದು ಹೀಗಾದರು ಎಂದು ನಟ ಜಗ್ಗೇಶ್ ಹೇಳಿದರು.












Click it and Unblock the Notifications