ನಟ ಹರೀಶ್ ರಾಯ್ ಚಿಕಿತ್ಸೆಗೆ ಚೆಕ್ ಕಳಿಸಿದ ಧ್ರುವ ಸರ್ಜಾ, ನೆರವು ಕೊಟ್ಟಿದ್ದೆಷ್ಟು?
ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ಆಗಿ ಮಿಂಚಿದ್ದ ನಟ ಹರೀಶ್ ರಾಯ್ ಅವರು ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಚಾಚಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಹರೀಶ್ ರಾಯ್ ಸದ್ಯ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರೀಶ್ ಅವರ ವಿಡಿಯೋ ವೈರಲ್ ಆಗಿದ್ದು, ಹಲವು ನಟರು ನೆರವಿಗೆ ಬಂದಿದ್ದಾರೆ. ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಹರೀಶ್ ಅವರ ಕಷ್ಟಕ್ಕೆ ಮಿಡಿದಿದ್ದು, ಭಾರಿ ಮೊತ್ತ ಆರ್ಥಿಕ ನೆರವು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹರೀಶ್ ಅವರಿಗೆ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗಿದೆ. ಅವರು ಒಂದು ಇಂಜೆಕ್ಷನ್‌ಗೆ 3.55 ಲಕ್ಷ ರೂ. ಖರ್ಚಾಗುತ್ತದೆ ಎನ್ನಲಾಗಿದೆ. ಹೀಗಾಗಿ ವಿಡಿಯೋ ಮೂಲಕ ಅವರು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ನಟ ಧ್ರುವ ಸರ್ಜಾ ಅವರು ಕೂಡ ಹರೀಶ್ ಅವರ ಸಹಾಯಕ್ಕೆ ಮುಂದೆ ಬಂದಿದ್ದಾರೆ ಎಂದು ಹಿರಿಯ ನಟಿ ಶಶಿಕಲಾ ತಿಳಿಸಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಶಶಿಕಲಾ ಅವರು, 'ನಮ್ಮ ಕಲಾವಿದರಾದ ಹರೀಶ್ ರಾಯ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಅವರನ್ನ ನೋಡಲು ನಾವು ಹೋಗಿದ್ದೆವು. ಆಗ ಹರೀಶ್ ಅವರು ಆಸ್ಪತ್ರೆಗೆ ಹೋಗಿದ್ದರು. ಅದೇ ಸಮಯದಲ್ಲಿ ನಟ ಧ್ರುವ ಸರ್ಜಾ ಅವರು ಚೆಕ್ ಕಳುಹಿಸಿಕೊಟ್ಟಿದ್ದರು' ಎಂದು ವಿವರಿಸಿದ್ದಾರೆ.
'11 ಲಕ್ಷ ರೂಪಾಯಿ ಚೆಕ್ ಕಳಿಸಿದ್ರು'
'ನಮ್ಮ ಧ್ರುವ ಸರ್ಜಾ ಸರ್ ಕಳಿಸಿದ್ದು ಸಣ್ಣ ಅಮೌಂಟ್ ಅಲ್ಲ, ದೊಡ್ಡ ಅಮೌಂಟ್. ಸುಮಾರು 11 ಲಕ್ಷ ರೂಪಾಯಿ ಚೆಕ್ ಅನ್ನು ಕಳಿಸಿಕೊಟ್ಟಿದ್ದಾರೆ. ಅದನ್ನ ಕಂಡು ನನಗೆ ಅಚ್ಚರಿ ಜೊತೆಗೆ ಖುಷಿಯೂ ಆಯ್ತು. ನಮ್ಮ ಕಲಾವಿದರು ನಿಜಕ್ಕೂ ಹೆಮ್ಮೆ ಅನಿಸಿತು' ಎಂದು ಶಶಿಕಲಾ ಹೇಳಿದ್ದಾರೆ.
'ಅವರೊಂದಿಗೆ ನಾನು ಕೂಡ ಕೆಲಸ ಮಾಡಿದ್ದೇನೆ. ಈಗೆಲ್ಲ ತಂದೆ ತಾಯಿ ಹೋದ್ರೆ ಒಂದು ಕರ್ಪೂರ ಹಚ್ಚೋಕು ಜನ ಬರಲ್ಲ. ಅಣ್ಣ ಸತ್ತರೆ ತಮ್ಮ ಬರಲ್ಲ, ತಮ್ಮ ಸತ್ತರೆ ಅಣ್ಣ ಬರಲ್ಲ. ಪ್ರಪಂಚ ಹಾಗಾಗಿದೆ. ಆದರೆ ಧ್ರುವ ಸರ್ಜಾ ಅವರ ಮನಸ್ಸು ನೋಡಿ ಬಹಳ ಹೆಮ್ಮೆ ಅನಿಸಿತು. ನಮ್ಮ ಕಲಾವಿದರು ಎಂದು ಒಂದು ಜೀವ ಉಳಿಸಲು ಧ್ರುವ 11 ಲಕ್ಷ ರೂಪಾಯಿ ಚೆಕ್ ಕಳಿಸಿಕೊಡ್ತಾರೆ' ಎಂದು ಹೊಗಳಿದ್ದಾರೆ.
'ಧ್ರುವ ಅವರ ತಂದೆ ತಾಯಿ ಮಾಡಿದ ಒಳ್ಳೆ ಕೆಲಸಗಳೇ ಅವರನ್ನು ಇಂದು ಕಾಯುತ್ತಿದೆ. ಧ್ರುವ ಸರ್ಜಾ ಮಾಡುತ್ತಿರುವ ಈ ಒಳ್ಳೆ ಕೆಲಸ ಮುಂದೆ ಅವರ ಕುಟುಂಬ ಮತ್ತು ಮಕ್ಕಳನ್ನ ಕಾಪಾಡಲಿದೆ. ಈಗ ಎಲ್ಲಿಯೇ ಕಷ್ಟ ಆದರೂ ಆ ಜಾಗಕ್ಕೆ ಹೋಗಿ ಧ್ರುವ ಸರ್ ಸಹಾಯ ಮಾಡುತ್ತಿದ್ದಾರೆ. ಆದರೆ ಅವರು ಒಂದು ಕೈಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗದಂತೆ ಮಾಡುತ್ತಿದ್ದಾರೆ. ನಮ್ಮ ಧ್ರುವ ಅವರು ನಿಜಕ್ಕೂ ನಮ್ಮ ಹೆಮ್ಮೆ' ಎಂದಿದ್ದಾರೆ.












Click it and Unblock the Notifications