darshan thoogudeepa: 'ರೇಣುಕಾಸ್ವಾಮಿ ದೇಹದ ಮೇಲೆ ನಾಯಿ ಕಚ್ಚಿದ ಗಾಯವನ್ನೇ ಕೊಲೆ ಎನ್ನಲಾಗಿದೆ'
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ನಿನ್ನೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿರುವುದಾಗಿ ವರದಿಯಾಗಿದೆ. ರೇಣುಕಾಸ್ವಾಮಿಯ ಮೃತದೇಹವನ್ನು ನಾಯಿಗಳು ಕಚ್ಚಿವೆ. ಇದನ್ನೇ ಕೊಲೆ ಎಂದು ಬಿಂಬಿಸಲಾಗಿದೆ ಎಂದು ದೂರಿದ್ದಾರೆ.
ನಿನ್ನೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಮೂರು ಬಾರಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಹಿರಿಯ ವಕೀಲ ಸಿ.ವಿ. ನಾಗೇಶ್ ದರ್ಶನ್ ಪರವಾಗಿ ವಾದ ಮಂಡಿಸಿದರು. ಈ ವೇಳೆ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದರು.

ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗಳಿಗೂ ಬಹಳ ವ್ಯತ್ಯಾಸವಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ ನಾಯಿ ಕಚ್ಚಿರುವ ಗುರುತುಗಳಿವೆ. ಇದನ್ನೇ ಮಾಧ್ಯಮಗಳು ಕೊಲೆ ಎಂದು ಬಿಂಬಿಸಿವೆ ಎಂದು ದೂರಿದರು ಎನ್ನಲಾಗಿದೆ.
ತನಿಖಾಧಿಕಾರಿಗಳು ಅತ್ಯುತ್ತಮವಾಗಿ ತನಿಖೆ ನಡೆಸಿದ್ದಾರೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್‌ಗೆ ತಿಳಿಸಿದರು. ಆದರೆ ದರ್ಶನ್ ಪರ ವಕೀಲರು ಇದು ಕಳಪೆ ತನಿಖೆ ಎಂದು ಹೇಳಿದರು.
ಚಾರ್ಜ್‌ಶೀಟ್‌ನಲ್ಲಿದ್ದ ವಿಚಾರಗಳು ಕೋರ್ಟ್‌ಗೆ ಸಲ್ಲಿಕೆಯಾಗುವ ಮುನ್ನವೇ ಲೀಕ್ ಆಗಿದೆ. ಈ ವಿಚಾರವಾಗಿ ಕೋರ್ಟ್ ತನಿಖಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಬೇಕು. ಕೊಲೆಯಾಗಿದೆ ಎನ್ನಲಾದ ಸ್ಥಳದಲ್ಲಿ ನೈಲಾನ್ ಹಗ್ಗ, ಮರದ ಕೊಂಬೆ, ಸ್ಟೋನಿ ಬ್ರೂಕ್ ಪಬ್ ಹೆಸರಿನ ನೀರಿನ ಬಾಟಲ್ ಸೀಜ್ ಮಾಡಿರುವುದಾಗಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ಆದರೆ, ಟಾರ್ಚ್ ಬೆಳಕಲ್ಲಿ ಪಂಚನಾಮೆಯಾಗಿದೆ. ದರ್ಶನ್ ಬಟ್ಟೆ ತೊಳೆದು ಒಣಗಿಸಿದ್ದರೂ ರಕ್ತದ ಕಲೆ ಉಳಿದಿದೆ ಎಂದು ಹೇಳಿದ್ದು ಇದು ನಂಬಲು ಸಾಧ್ಯವಿಲ್ಲ ಎಂದು ವಾದ ಮಾಡಿದರು. ಇಂದು ಕೂಡ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.
ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರು ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಮೊದಲಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರ ಜಾಲಿ ಫೋಟೋ ಲೀಕ್ ಆದ ಕಾರಣ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈಗ ಮತ್ತೆ ದರ್ಶನ್ ಅವರನ್ನು ಬಳ್ಳಾರಿ ಜೈಲಿನಿಂದ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರ ಆರೋಗ್ಯ ಸರಿ ಇಲ್ಲ. ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಬೆನ್ನಿನಲ್ಲಿ ಊತ ಕಂಡು ಬಂದು ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ಆದರೆ ದರ್ಶನ್ ಅವರು ಬೆಂಗಳೂರಿನಲ್ಲಿ ವೈದ್ಯಕೀಯ ತಪಾಸಣೆ ಮಾಡಿಸುತ್ತೇನೆ, ಈಗ ಮಾತ್ರ ಕೊಡಿ ಎಂದು ಹೇಳುತ್ತಿದ್ದಾರಂತೆ. ಅಲ್ಲಿ ತಪಾಸಣೆಗೆ ಒಪ್ಪುತ್ತಿಲ್ಲ.
ಸದ್ಯ ನಟ ದರ್ಶನ್ ಅವರ ಕಸ್ಟಡಿ ಕೂಡ ಮುಗಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ದರ್ಶನ್‌ಗೆ ಮತ್ತೆ ಜಾಮೀನು ನಿರಾಕರಿಸಿದರೆ, ತಮ್ಮ ಅನಾರೋಗ್ಯದ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ. ಅನಾರೋಗ್ಯ ಹಾಗೂ ಚಿಕಿತ್ಸೆಯ ಕಾರಣಕ್ಕೆ ತಮ್ಮ ಬಳ್ಳಾರಿಯಿಂದ ಬೆಂಗಳೂರಿಗೆ ಮತ್ತೆ ಶಿಫ್ಟ್ ಮಾಡಿಸಿ ಎಂದು ಮನವಿ ಮಾಡಲು ದರ್ಶನ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಒಂದು ವೇಳೆ ನ್ಯಾಯಾಧೀಶರು ದರ್ಶನ್ ಅವರ ಅನಾರೋಗ್ಯವನ್ನು ಪರಿಗಣಿಸಿ, ಮನವಿ ಪುರಸ್ಕರಿಸುವ ಸಾಧ್ಯತೆಯೂ ಇದೆ. ಹಾಗಾಗಿ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಶಿಫ್ಟ್ ಆಗುವುದು ಬಹುತೇಕ ಪಕ್ಕಾ ಎಂದೂ ಹೇಳಲಾಗುತ್ತಿದೆ. ಹಲವು ಬಾರಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡುತ್ತಲೇ ಇದ್ದು, ಇಂದಿನ ವಿಚಾರಣೆಯಲ್ಲಿ ಜಾಮೀನು ಸಿಗುವ ಸಾಧ್ಯತೆಯೂ ದಟ್ಟವಾಗಿದೆ ಎಂಬ ಹೇಳಲಾಗುತ್ತಿದೆ.












Click it and Unblock the Notifications