'ದರ್ಶನ್ ಸರ್ ತುಂಬಾ ಸ್ಟ್ರಾಂಗ್, ವಿಷ ಕೇಳ್ತಾರೆ ಅಂದ್ರೆ ಎಷ್ಟು ನೊಂದಿರಬೇಕು?'
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎರಡನೇ ಬಾರಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿರುವ ಬಗ್ಗೆ ಇತ್ತೀಚೆಗೆ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ನನ್ನಿಂದ ಸಾಧ್ಯವಾಗುತ್ತಿಲ್ಲ, ಸ್ವಲ್ಪ ವಿಷ ಕೊಟ್ಟುಬಿಡಿ ಎಂದು ನ್ಯಾಯಾಧೀಶರ ಮುಂದೆ ನೋವು ಹೇಳಿಕೊಂಡಿದ್ದಾರೆ. 'ಅಂತಹ ವ್ಯಕ್ತಿನೇ ವಿಷ ಕೇಳ್ತಾರೆ ಅಂದ್ರೆ ಎಷ್ಟು ನೊಂದಿರಬೇಕು?' ಎಂದು ದರ್ಶನ್ ಆಪ್ತ ಹಾಗೂ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕೂಡ ಬೇಸರದ ಮಾತುಗಳನ್ನಾಡಿದ್ದಾರೆ.
'ದರ್ಶನ್ ಸರ್ ಇನ್ನೂ ಕೊಲೆ ಕೇಸ್‌ನಲ್ಲಿ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಹಾಗಾಗಿ ಅಲ್ಲಿ ಏನೆಲ್ಲ ಮೂಲ ಸೌಕರ್ಯಗಳಿರುತ್ತೋ ಅವು ಸಿಗಬೇಕು. ನಾನು ಕೂಡ ಚೌಕ ಸಿನಿಮಾದ ಅರ್ಧಭಾಗ ಜೈಲಿನಲ್ಲೇ ಶೂಟಿಂಗ್ ಮಾಡಿದ್ದು. ಜೈಲಿನಲ್ಲಿ ಹೇಗೆಲ್ಲ ಇರುತ್ತೆ ಅನ್ನೋದನ್ನ ನಾನು ಚೆನ್ನಾಗಿ ನೋಡಿದ್ದೀನಿ' ಎಂದಿದ್ದಾರೆ.

'ಎಲ್ಲ ಕೈದಿಗಳಿಗೂ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ನಿಯಮವೇ ಇದೆ. ಅವುಗಳನ್ನ ಯಾರೂ ಕಸಿದುಕೊಳ್ಳಲು ಆಗಲ್ಲ. ಆ ಹಕ್ಕು ಎಲ್ಲರಿಗೂ ಸಿಗಬೇಕಾಗುತ್ತೆ. ಆದರೆ ಅದಕ್ಕೂ ಮೀರಿ ಜೈಲಿನಲ್ಲಿ ದರ್ಶನ್ ಅವರಿಗೆ ಬೇರೆ ಏನೋ ಆಗಿದೆ ಅಂದ್ರೆ, ನಿಜಕ್ಕೂ ನನಗೂ ನೋವಾಗುತ್ತೆ' ಎಂದು ತರುಣ್ ಸುಧೀರ್ ಹೇಳಿದ್ದಾರೆ.
'ದರ್ಶನ್ ಸರ್ ಕೋರ್ಟ್‌ನಲ್ಲಿ ಏನು ಹೇಳಿದ್ರು ಅನ್ನೋ ಖಚಿತ ಮಾಹಿತಿ ನನಗೆ ಸಿಕ್ಕಿಲ್ಲ. ಹಾಗಾಗಿ ಸುಮ್ಮನೆ ನಾನು ಅದರ ಬಗ್ಗೆ ಮಾತನಾಡಬಾರದು. ನಾನು ದರ್ಶನ್ ಸರ್‌ನ ತುಂಬಾ ಹತ್ತಿರದಿಂದ ನೋಡಿರುವುದರಿಂದ ಅವರು ತುಂಬಾ ಸ್ಟ್ರಾಂಗ್ ಪರ್ಸನ್ ಅನ್ನೋದು ಗೊತ್ತಿದೆ. ಅವರು ಯಾವತ್ತೂ ಏನೇ ನೋವಿದ್ರೂ ಹೊರಗೆ ತೋರಿಸಿಕೊಳ್ಳಲ್ಲ' ಎಂದು ತರುಣ್ ಸುಧೀರ್ ಹೇಳಿದ್ದಾರೆ.

'ಅವರು ತಮ್ಮ ನೋವನ್ನ ಒಳಗಡೆಯೇ ಇಟ್ಟುಕೊಂಡಿರುತ್ತಾರೆ. ಅದನ್ನು ಯಾರ ಹತ್ರಾನೂ ಹಂಚಿಕೊಳ್ಳಲ್ಲ. ಹಾಗಿರುವಾಗ ಅವರೇ ವಿಷ ಕೇಳುತ್ತಿದ್ದಾರೆ ಅಂದ್ರೆ, ಅವರ ಪರಿಸ್ಥಿತಿ ಹೇಗಿರಬೇಕು? ಅವರು ಆ ರೀತಿ ಕೇಳಿರೋದು ನಿಜಾನೇ ಆಗಿದ್ರೆ, ಎಷ್ಟು ನೊಂದಿರಬೇಕು? ಅನ್ನೋದು ಅರ್ಥಮಾಡಿಕೊಳ್ಳಬೇಕಾಗುತ್ತೆ' ಎಂದು ಬೇಸರ ಹೊರಹಾಕಿದ್ದಾರೆ.
'ಡೆವಿಲ್ ಸಕ್ಸಸ್ ಆಗುತ್ತೆ'
'ಈಗಾಗಲೇ ದರ್ಶನ್ ಅವರಿಗೆ ನಾವು ಡಿ-59 ಸಿನಿಮಾ ಘೋಷಣೆ ಮಾಡಿದ್ದೀವಿ. ಡೆವಿಲ್ ಸಿನಿಮಾ ಬಳಿಕ ಮತ್ತೊಂದು ಸಿನಿಮಾ ಮಾಡಿ, ನಂತರ ಅವರು ಇದಕ್ಕೆ ಬರುವುದಾಗಿ ಹೇಳಿದ್ರು. ನಮ್ಮ ಕಾಟೇರ ಸೆಟ್‌ಗೆ ಬಂದಾಗಲೂ ಡೆವಿಲ್ ಸಿನಿಮಾ ಬಗ್ಗೆ ಹಲವಷ್ಟು ಚರ್ಚೆಯಾಗುತ್ತಿತ್ತು. ಡೆವಿಲ್ ಸಿನಿಮಾಗೂ ಒಂದೊಳ್ಳೆ ಅದ್ಭುತವಾದ ನಿರ್ದೇಶಕರು, ಟೀಂ ಇದೆ ಅಂದಾಗ ಆ ಸಿನಿಮಾ ಚೆನ್ನಾಗಿರುತ್ತೆ ಅನ್ನೋ ನಂಬಿಕೆ ಇದ್ದೇ ಇರುತ್ತೆ. ಹಾಗಾಗಿ ದರ್ಶನ್ ಸರ್ ಅವರ ಡೆವಿಲ್ ಸಿನಿಮಾ ಖಂಡಿತವಾಗಿಯೂ ದೊಡ್ಡ ಯಶಸ್ಸು ಕಾಣುತ್ತೆ' ಎಂದು ತರುಣ್ ಸುಧೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications