Ajay Rao Divorce: ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಅಜಯ್ ರಾವ್ ಪತ್ನಿ ಸಪ್ನಾ
ಎಕ್ಸ್‌ಕ್ಯೂಸ್‌ಮಿ, ಕೃಷ್ಣನ್ ಲವ್‌ಸ್ಟೋರಿ ಸಿನಿಮಾಗಳ ಖ್ಯಾತಿಯ ನಟ ಅಜಯ್ ರಾವ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಪ್ರೀತಿಸಿ ಮದುವೆಯಾಗಿದ್ದ ಈ ಅಜಯ್-ಸಪ್ನಾ ರಾವ್ ದಿಢೀರ್ ವಿಚ್ಛೇದನಕ್ಕೆ ನಿರ್ಧರಿಸಿರುವುದು ಇಡೀ ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಪತಿ ವಿರುದ್ಧ ಸಪ್ನಾ ಅವರು ದೂರು ನೀಡಿದ್ದು, ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಅಜಯ್ ರಾವ್ ಅವರು ಇದು ನಮ್ಮ ಪರ್ಸನಲ್ ವಿಷಯ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಅಜಯ್ ರಾವ್ ಪತ್ನಿ ಸಪ್ನಾ ರಾವ್ ಅವರು ಇನ್ಸ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಡಿವೋರ್ಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
'ನಮಸ್ಕಾರ, ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿ ದಿನ ಧೈರ್ಯವನ್ನ ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ ಎಂದು ಸಪ್ನಾ ಅವರು ಬರೆದುಕೊಂಡಿದ್ದಾರೆ. ಪ್ರಿಯ ಸ್ನೇಹಿತರೆ, ಸಹೋದರರೇ.. ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಹಾಗೂ ನಮ್ಮ ದಾಂಪತ್ಯ ಜೀವನವನ್ನ ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ.

'ಈ ವಿಷಯ ನಮ್ಮ ವೈಯಕ್ತಿಕ'
'ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ, ಈ ವಿಷಯ ನಮ್ಮ ವೈಯಕ್ತಿಕ, ಅಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸುತ್ತೇನೆ. ಕೃತಜ್ಞತೆಗಳೊಂದಿಗೆ ಸಪ್ನ ಅಜಯ್ ರಾವ್' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಡಿವೋರ್ಸ್‌ನಿಂದ ಹಿಂದೆ ಸರಿದಿರುವುದಾಗಿ ಸುಳಿವು ನೀಡಿದ್ದು, ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಜೋಡಿಯಾಗಿದ್ದ ಫೋಟೋಗಳನ್ನು ಮೊದಲಿಗೆ ಹಂಚಿಕೊಂಡಿದ್ದರು. ಇತ್ತೀಚೆಗೆ ಅವರು ಒಟ್ಟಿಗೆ ಇರುವ ಫೋಟೋಗಳನ್ನ ಹಂಚಿಕೊಂಡಿರಲಿಲ್ಲ. ಅಲ್ಲದೆ ಹಳೆಯ ಫೋಟೋಗಳು ಕೂಡ ಡಿಲೀಟ್ ಆಗಿದ್ದವು. ನಿನ್ನೆ ಅಜಯ್ ರಾವ್ ಅವರ ಡಿವೋರ್ಸ್ ವಿಚಾರ ದೊಡ್ಡ ಸುದ್ದಿಯಾಗಿತ್ತು. ಬಳಿಕ ಅಜಯ್ ರಾವ್ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಡಿವೋರ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದರು.
ಅಜಯ್ ರಾವ್ ಹೇಳಿದ್ದೇನು?
'ಇದು ನಮ್ಮ ಪರ್ಸನಲ್ ವಿಚಾರ. ಇದನ್ನೇ ನಾವೇ ಬಗೆಹರಿಸಿಕೊಳ್ಳುತ್ತೀವಿ. ನಾವು ಗೌರವಯುತವಾಗಿಯೇ ಇದನ್ನು ಪರಿಹಾರ ಮಾಡಿಕೊಳ್ಳುತ್ತೇವೆ ಎಂದಿದ್ದರು. ಈಗ ನಾನು ಪ್ರತಿಕ್ರಿಯಿಸಿ, ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದರು. ನಮ್ಮ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನ ಹಂಚಿಕೊಳ್ಳುವುದು ಅಥವಾ ಹರಡುವುದನ್ನು ದೂರವಿಡಿ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ. ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ. ನಿಮ್ಮ ಮನವೊಲಿಕೆ, ಬೆಂಬಲ ಹಾಗೂ ವಿವೇಕ ನಮಗೆ ಮುಖ್ಯ' ಎಂದು ಅಜಯ್ ರಾವ್ ಮನವಿ ಮಾಡಿದ್ದರು.
ನಟ ಅಜಯ್ ರಾವ್ ವಿರುದ್ಧ ಪತ್ನಿ ಸಪ್ನಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಪ್ನಾ ಅವರು ದೂರು ದಾಖಲಿಸಿದ್ದು, ಪ್ರಸ್ತುತ ದೂರು ಮಾತ್ರವೇ ದಾಖಲಾಗಿದ್ದು, ವಿಚ್ಛೇದನದ ಉದ್ದೇಶ ಇಲ್ಲ ಎನ್ನಲಾಗುತ್ತಿದೆ. ಈಗ ಸಪ್ನಾ ಅವರೇ ನಮ್ಮ ದಾಂಪತ್ಯ ಜೀವನವನ್ನ ಮತ್ತೆ ಸರಿಪಡಿಸಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.












Click it and Unblock the Notifications