ಚಾಮರಾಜನಗರದ ಶಾಪಕ್ಕೆ ಸಿಎಂ ಪಟ್ಟ ಕಳೆದುಕೊಂಡರೇ ಸಿದ್ದು?
ಚಾಮರಾಜನಗರ, ಮೇ 15: ಚಾಮರಾಜನಗರಕ್ಕೆ ಯಾವುದೇ ಮುಖ್ಯಮಂತ್ರಿ ತೆರಳಿದರೂ ಆತ ಕೆಲವೇ ದಿನಗಳಲ್ಲಿ ಅಧಿಕಾರ ಗಳೆದುಕೊಳ್ಳುತ್ತಾನೆ ಎಂಬ ನಂಬಿಕೆ ಇಂದಿಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಕತಾಳೀಯವೋ ಏನೋ ಅದು ಸತ್ಯವೂ ಆಗುತ್ತಿದೆ.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಧಿಕಾರ ಕಳೆದುಕೊಂಡಿದ್ದು ಅದೇ ಕಾರಣಕ್ಕೆ ಎಂಬ ಮಾತು ಕೇಳಿಬರುತ್ತಿದೆ! ಯಾವುದೇ ಕಾರಣಕ್ಕೂ ಸೋಲುವುದಕ್ಕೆ ಸಾದ್ಯವೇ ಇಲ್ಲ, ತಾನು ಜನಪ್ರಿಯ ಮುಖ್ಯಮಂತ್ರಿ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದರೆ, ಬಾದಾಮಿ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಮಾತ್ರವಲ್ಲ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ಈ ಬಾರಿ ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸಹ ಚಾಮರಾಜನಗರಕ್ಕೆ ತೆರಳದೆ ಇದ್ದಿದ್ದು ಇದೇ ಕಾರಣಕ್ಕೆ ಎಂದು ಹಲವರು ಆರೋಪಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಡಿ ದೇವರಾಜ್ ಅರಸ್, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ವೀರೇಂದ್ರ ಪಾಟಿಲ್ ಮತ್ತು ಎಚ್ ಡಿ ಕುಮಾರಸ್ವಾಮಿ ಸಹ ಮುಖ್ಯಂತ್ರಿಗಳಾಗಿದ್ದ ಸಮಯದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿ ನಂತರ ಕೆಲವೇ ತಿಂಗಳುಗಳಲ್ಲಿ ಅಧಿಕಾರ ಕಳೆದುಕೊಂಡ ಇತಿಹಾಸವಿದೆ.
ಇದೇ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪ, ಎಂ ವೀರಪ್ಪ ಮೋಯ್ಲಿ, ಎಚ್ ಡಿ ದೇವೇಗೌಡ, ಜೆ ಎಚ್ ಪಟೇಲ್, ಎಸ್ ಎಂ ಕೃಷ್ಣ, ಎನ್ ಧರಂ ಸಿಂಗ್, ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ ಮುಂತಾದವರು ತಮ್ಮ ಅಧಿಕಾರಾವಧಿಯಲ್ಲಿ ಚಾಮರಾಜನಗರಕ್ಕೆ ಹೋಗಿರಲಿಲ್ಲ.












Click it and Unblock the Notifications