ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಕೆರಳಿಸಿರುವ ಮಂಡ್ಯದ ಗಂಡು ಯಾರಾಗಲಿದ್ದಾರೆ?

By ಕಿಕು
|
Google Oneindia Kannada News

ಎಂದಿನಂತೆ ಮಂಡ್ಯ ವಿಧಾನಸಭಾ ಕ್ಷೇತ್ರ ತನ್ನದೇ ಆದ ಅನೇಕ ಕಾರಣಗಳಿಗೆ ಸುಪ್ರಸಿದ್ದ ಕ್ಷೇತ್ರ. ಹೆಚ್ಚಾಗಿ ರೈತಾಪಿ ವರ್ಗವೇ ತುಂಬಿರುವ ಮಣ್ಣಿನ ಮಕ್ಕಳ ಕ್ಷೇತ್ರ. ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಜಿಲ್ಲೆ. ರಾಜಕೀಯ, ಸಿನೆಮಾ ಹಾಗು ಕೃಷಿ ಈ ಜಿಲ್ಲೆಯ ಜೀವನದ ಅವಿಬಾಜ್ಯ ಅಂಗಗಳು.

ಮಂಡ್ಯದ ಗಂಡು ಎಂದೇ ಖ್ಯಾತರಾದ ಹಿರಿಯ ನಟ ಅಂಬರೀಷ್ ಹಾಲಿ ಶಾಸಕ. 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಅಭೂತಪೂರ್ವ ಗೆಲುವು ಗಳಿಸಿ, ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಕಳೆದ ವರ್ಷ ಸಂಪುಟದಿಂದ ಕೈಬಿಡಲಾಯಿತು. ಇದರಿಂದ ಕೆಲವು ಕಾಲ ಅಜ್ಞಾತರಾಗಿದ್ದ ಅಂಬಿ, ತೀರಾ ಇತ್ತೀಚಿಗಷ್ಟೇ ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಕ್ಷೇತ್ರದಲ್ಲಿ ಆಗಾಗ್ಗೆ ಕಾಣಿಸತೊಡಗಿದ್ದಾರೆ.

ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸುತ್ತಿದೆ ಅಂಬರೀಶ್ ನಡೆ!ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸುತ್ತಿದೆ ಅಂಬರೀಶ್ ನಡೆ!

ವಿಶೇಷವೆಂದರೆ, ಇಡೀ ರಾಜ್ಯದಲ್ಲೇ ಇಲ್ಲಿಯವರೆಗೂ, ಯಾವ ಚುನಾವಣೆಯಲ್ಲೂ, ಬಿಜೆಪಿಗೆ ಒಂದೇ ಒಂದು ಅವಕಾಶವನ್ನು ಕೊಡದ ಏಕೈಕ ಜಿಲ್ಲೆ. ಬಿಜೆಪಿಯ ಯಾವ ಅಭ್ಯರ್ಥಿಯೂ ಇಲ್ಲಿಯವರೆಗೆ ಠೇವಣಿಯನ್ನೂ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ.

ಸಂಭಾವ್ಯ ಅಭ್ಯರ್ಥಿಗಳ ಪರಿಚಯ ಹೀಗಿದೆ. ಸದ್ಯಕ್ಕೆ ಕಾಂಗ್ರೆಸ್ಸಿನಿಂದ ಅಂಬರೀಷ್ ಅವರಿಗೆ ಯಾವುದೇ ಪ್ರತಿಸ್ಪರ್ಧಿ ಕಂಡುಬರುತ್ತಿಲ್ಲ. ಆದರೆ, ಜೆಡಿಎಸ್ಸಿಗೆ ಹಲವಾರು ಅಭ್ಯರ್ಥಿಗಳು ಸಾಲಾಗಿ ನಿಂತಿರುವುದೇ ತಲೆನೋವಾಗಿದೆ. ಬಿಜೆಪಿ ಮಾತ್ರ ಮೋದಿ ಅಲೆಯನ್ನು ಸದ್ಯಕ್ಕೆ ನೆಚ್ಚಿಕೊಂಡು ಕೂತಿದೆ.

ಜಯಭೇರಿ ಬಾರಿಸಿದ್ದ ಮಂಡ್ಯದ ಗಂಡು ಅಂಬರೀಷ್

ಜಯಭೇರಿ ಬಾರಿಸಿದ್ದ ಮಂಡ್ಯದ ಗಂಡು ಅಂಬರೀಷ್

2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಷ್ ಅವರು ಸುಮಾರು 90,329 ಮತಗಳನ್ನು ಪಡೆದು, 42,937 ಮತಗಳ ಅಂತರದಿಂದ ಜೆಡಿಎಸ್ ನ ಮಾಜಿ ಶಾಸಕ ಎಂ. ಶ್ರೀನಿವಾಸ್ ರನ್ನು ಪರಾಭವಗೊಳಿಸಿದ್ದರು. ಈ ಮೊದಲು ಅಂಬರೀಷ್ ಮೂರು ಬಾರಿ ಲೋಕಸಭಾ ಸದಸ್ಯ (ಒಮ್ಮೆ ಜೆಡಿಎಸ್ ನಿಂದ ಹಾಗು ಎರಡು ಬಾರಿ ಕಾಂಗ್ರೆಸ್ ನಿಂದ), ಒಮ್ಮೆ ಕೇಂದ್ರ ಸಚಿವ(ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ)ರಾಗಿದ್ದರು.

ಸಾಯುವ ಮೊದಲು ನಿಮ್ಮ ಋಣ ತೀರಿಸಬೇಕು

ಸಾಯುವ ಮೊದಲು ನಿಮ್ಮ ಋಣ ತೀರಿಸಬೇಕು

ಅಂದಿನ ಚುನಾವಣೆಯಲ್ಲಿ ಅಂಬರೀಷ್ ರವರು, "ನಾನು ನಿಮ್ಮವ, ನನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದೀರಿ. ಸಾಯುವ ಮೊದಲು ನಿಮ್ಮ ಋಣ ತೀರಿಸಬೇಕು. ಒಮ್ಮೆ ಶಾಸಕನನ್ನಾಗಿ ಆಯ್ಕೆ ಮಾಡಿ ಕಳುಹಿಸಿ. ಕಾಂಗ್ರೆಸ್ ಸರ್ಕಾರ ಬರುತ್ತದೆ, ಅದರಲ್ಲಿ ನಾನು ಪ್ರಭಾವಿ ಸಚಿವನಾಗುತ್ತೇನೆ. ಬಹುಶಃ ಇದು ನನ್ನ ಕೊನೆಯ ಚುನಾವಣೆ. ಒಂದೇ ಒಂದು ಅವಕಾಶ ಮಾಡಿಕೊಡಿ" ಎಂದು ಅಂಗಲಾಚಿ ಬೇಡಿದ್ದರು. ಜನ ಅಂಬಿಯ ಕೈಹಿಡಿದಿದ್ದರು. ಕೊನೆಯ ಚುನಾವಣೆ ಅಂದವರು ಮತ್ತೆ ನಿಲ್ಲುತ್ತಿದ್ದಾರೆ.

ಅಂಬಿ ಅವರಿತ್ತ ಪ್ರಮುಖ ಆಶ್ವಾಸನೆಗಳು

ಅಂಬಿ ಅವರಿತ್ತ ಪ್ರಮುಖ ಆಶ್ವಾಸನೆಗಳು

ಮೈಷುಗರ್ ಕಾರ್ಖಾನೆಯನ್ನು ತಾಂತ್ರಿಕವಾಗಿ ಹಾಗು ಆರ್ಥಿಕವಾಗಿ ಸಮೃದ್ಧಗೊಳಿಸಿ, ಸುಸ್ಥಿತಿಗೆ ತರುವುದು, ಕಾವೇರಿ ಹರಿಯುತ್ತಿದ್ದರೂ ನೀರು ಮೇವಿಗಾಗಿ ಪರದಾಡುತ್ತಿರುವ ರೈತರ ಸಂಕಷ್ಟಗಳಿಗೆ ನೆರವಾಗುವುದು, ಬೆಂಗಳೂರು ಮೈಸೂರು ರಸ್ತೆಯಿಂದ ಅತಿಯಾದ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರವಾಗಿ ಮಂಡ್ಯ ನಗರಕ್ಕೆ ಹೊರವರ್ತುಲ ರಸ್ತೆ ನಿರ್ಮಿಸುವುದು - ಪ್ರಮುಖವಾದುವು.

ಭರವಸೆ ಈಡೇರಿಸುವಲ್ಲಿ ಅಂಬಿ ವಿಫಲ

ಭರವಸೆ ಈಡೇರಿಸುವಲ್ಲಿ ಅಂಬಿ ವಿಫಲ

ಅಂಬರೀಷ್ ರವರು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಫಲರಾಗಿದ್ದಾರೆಂದು ಒಪ್ಪಲು ಮತದಾರ ತಯಾರಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆದ್ದರೂ, ಅಂಬಿ ಕ್ಷೇತ್ರದಲ್ಲಾಗಲಿ, ವಸತಿ ಇಲಾಖೆಯಲ್ಲಾಗಲಿ ಹೆಚ್ಚು ಕ್ರಿಯಾಶೀಲರಾದಂತೆ ಕಂಡುಬರಲಿಲ್ಲವೆಂದುಬು ಖುದ್ದು ಅಂಬಿ ಅಭಿಮಾನಿಗಳ ಅಂಬೋಣ. ಅಂಬರೀಷ್ ರವರಿಗೆ ಟಿಕೆಟ್ ಇನ್ನು ಖಚಿತವಾಗದಿದ್ದರೂ, ಮುಖ್ಯಮಂತ್ರಿಗಳಿಗೆ ಅಂಬರೀಷರನ್ನೇ ಕಣಕ್ಕಿಳಿಸುವ ಇರಾದೆ ಇದೆಯೆಂದು ಕೇಳಿಬರುತ್ತಿದೆ.

ಹಲವಾರು ಬಾರಿ ಜೆಡಿಎಸ್ ಕೈಹಿಡಿದಿದ್ದಾರೆ ಮತದಾರರು

ಹಲವಾರು ಬಾರಿ ಜೆಡಿಎಸ್ ಕೈಹಿಡಿದಿದ್ದಾರೆ ಮತದಾರರು

ಇನ್ನು ಜೆಡಿಎಸ್ ನ ವಿಚಾರಕ್ಕೆ ಬರುವುದಾದರೆ, ಗಂಡುಮೆಟ್ಟಿನ ಮಂಡ್ಯ ಕ್ಷೇತ್ರ ಜಾತ್ಯತೀತ ಜನತಾದಳ ಪಕ್ಷದ ತವರು. ಹಲವಾರು ಬಾರಿ ಜೆಡಿಎಸ್ ನ ಕೈ ಹಿಡಿದಿದ್ದಾರೆ ಇಲ್ಲಿನ ಮತದಾರರು. ಅದಕ್ಕಾಗಿಯೇ, ಈ ಬಾರಿ ಜೆಡಿಎಸ್ ನ ಟಿಕೆಟ್ ಪಡೆದರೆ ಅರ್ಧ ಗೆದ್ದಂತೆ ಎಂಬುವುದು ಇಲ್ಲಿನ ಜನರ ಮಾತು. ಆಕಾಂಕ್ಷಿಗಳ ಪಟ್ಟಿ ದೊಡ್ಡದು. ಅದೇ ಕೊನೆಗೆ ತೊಂದರೆ ಆದರೂ ಆಶ್ಚರ್ಯ ಪಡಬೇಕಾಗಿಲ್ಲ.

ಗೆಲ್ಲಲೇಬೇಕಾದ ಅನಿವಾರ್ಯತೆ ಜೆಡಿಎಸ್ ಗಿದೆ

ಗೆಲ್ಲಲೇಬೇಕಾದ ಅನಿವಾರ್ಯತೆ ಜೆಡಿಎಸ್ ಗಿದೆ

ಮಾಜಿ ಶಾಸಕ ಎಂ. ಶ್ರೀನಿವಾಸ್ (ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು), ಎಚ್. ಎನ್. ಯೋಗೇಶ್ (ಬೂದನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಹಾಲಿ ಸದಸ್ಯ ಹಾಗು ಎಂ ಶ್ರೀನಿವಾಸ್ ರ ಅಳಿಯ), ಕೆ.ಆರ್. ರಾಧಾಕೃಷ್ಣ (ಬೆಂಗಳೂರಿನಲ್ಲಿ ಉದ್ಯಮಿ), ಡಾ.ಕೃಷ್ಣ (ವೈದ್ಯ - ಕಾವೇರಿ ನರ್ಸಿಂಗ್ ಹೋಮ್) ರವರುಗಳು ಪ್ರಮುಖರು. ಹಳೇ ಮೈಸೂರು ಭಾಗದ ಪ್ರಮುಖ ಕ್ಷೇತ್ರವಾದ ಮಂಡ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಜೆಡಿಎಸ್ ಗಿದೆ ಹಾಗು ಪಕ್ಷವು ಗೆಲ್ಲುವ ವಿಶ್ವಾಸದಿಂದಿದೆ.

ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಮಧುಚಂದ್

ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಮಧುಚಂದ್

ಇನ್ನು ಬಿಜೆಪಿ, ಇಲ್ಲಿ ವಿಧಾನಸಭೆಯಿರಲಿ, ಲೋಕಸಭೆಯಿರಲಿ ಯಾವ ಚುನಾವಣೆಯಲ್ಲೂ ಸದ್ದು ಮಾಡಿಲ್ಲ. ಆದರೆ, ಈ ಬಾರಿ ಖಾತೆ ತೆರೆಯಲೇಬೇಕೆಂಬ ಉತ್ಸುಕತೆಯಲ್ಲಿದೆ. ಮಾಜಿ ಸಾಫ್ಟ್ ವೇರ್ ಉದ್ಯೋಗಿ ಹಾಗು ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಮಧುಚಂದ್ ಅತ್ಯಂತ ಕ್ರಿಯಾಶೀಲವಾಗಿದ್ದು, ಕೃಷಿ ವಿಚಾರವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಇವರನ್ನೇ ಅಭ್ಯರ್ಥಿಯೆಂದು ಘೋಷಿಸಿಲ್ಲ. ಬಹುಶಃ ಚುನಾವಣೆಯ ಸಮೀಪದಲ್ಲಿ ಅತೃಪ್ತ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರನ್ನು ಬಿಜೆಪಿಯಿಂದ ಅಭ್ಯರ್ಥಿಯನ್ನಾಗಿಸುವ ತಂತ್ರವೂ ಇರಬಹುದು. ಇದರ ಭಾಗವಾಗಿ ಬಿಜೆಪಿ, ಜೆಡಿಎಸ್ ನ ಮಾಜಿ ಶಾಸಕ ಹಾಗು ಹಾಲಿ ಟಿಕೆಟ್ ಆಕಾಂಕ್ಷಿ ಎಂ. ಶ್ರೀನಿವಾಸ್ರವರಿಗೆ ಗಾಳ ಹಾಕಿದೆ ಎಂಬುದು ರಾಜಕೀಯ ಪಡಸಾಲೆಯಿಂದ ಮೆಲ್ಲಗೆ ಕೇಳಿಬರುತ್ತಿದೆ.

ಯಾವ ಪಕ್ಷಕ್ಕೆ ಸಿಗಲಿದೆ ವಿಜಯ ಮಾಲೆ?

ಯಾವ ಪಕ್ಷಕ್ಕೆ ಸಿಗಲಿದೆ ವಿಜಯ ಮಾಲೆ?

ಕಳೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಅಂಬರೀಷ್ ಮತ್ತೊಮ್ಮೆ ಗೆದ್ದು ತಾವೇ ಮಂಡ್ಯದ ಗಂಡೆಂದು ಬೀಗುತ್ತಾರಾ? ಅಥವಾ ಪ್ರಬಲ ಅಭ್ಯರ್ಥಿಯನ್ನು ಹೂಡಿ ಜೆಡಿಎಸ್ ತನ್ನ ಭದ್ರಕೋಟೆಯಲ್ಲಿನ ಪ್ರಮುಖ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳುತ್ತಾ? ಅಥವಾ ಮಂಡ್ಯದಲ್ಲಿ ಮೋದಿ ಅಲೆ ಬೀಸಿ ತನ್ನ ಮೊದಲ ಖಾತೆ ತೆರೆಯುವಲ್ಲಿ ಬಿಜೆಪಿ ಯಶಸ್ಸು ಕಾಣುತ್ತಾ ನೋಡಬೇಕು.

English summary
Mandya assembly constituency election : Who will emerge victorious? Actor Ambarish is almost certain to contest from Congress. Ambi had won defeating JDS leader M Srinivas in 2013 Karnataka Assembly elections. BJP may field Madhuchand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X