ಯಡಿಯೂರಪ್ಪ ಬರೆದ ಎರಡು ಪತ್ರಗಳು ಸುಪ್ರೀಂ ಟೇಬಲ್ ಮೇಲೆ
ಬೆಂಗಳೂರು, ಮೇ 18: ರಾಜ್ಯ ರಾಜಕಾರಣದ ಭವಿಷ್ಯ ನಿರ್ಧರಿಸುವ ಎರಡು ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿದ್ದು, ಕೆಲವೇ ಗಂಟೆಗಳಲ್ಲಿ ಅದರ ಚಿತ್ರಣ ಲಭ್ಯವಾಗಲಿದೆ.
ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮತ್ತು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಎರಡೂ ಅರ್ಜಿಗಳನ್ನು ಒಟ್ಟಿಗೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಬರೆದ ಎರಡು ಪತ್ರಗಳನ್ನು ಸುಪ್ರೀಂಕೋರ್ಟ್ ಪರಿಶೀಲನೆಗೆ ಒಳಪಡಿಸಲಿದೆ.

ಬಿಜೆಪಿಯು 104 ಶಾಸಕರ ಬಲ ಹೊಂದಿದ್ದು, ಅದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಸರ್ಕಾರ ರಚನೆಗೆ ಆಹ್ವಾ ನೀಡುವಂತೆ ಮೇ 15ರಂದು ಬರೆದ ಮೊದಲ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಮೇ 16ರಂದು ಬರೆದ ಎರಡನೆಯ ಪತ್ರವೂ ಇದೇ ರೀತಿಯ ಅಂಶಗಳನ್ನು ಒಳಗೊಂಡಿತ್ತು. ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿದ್ದು, ಈ ಕಾರಣದಿಂದ ಸರ್ಕಾರ ರಚಿಸಲು ಆಹ್ವಾನ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಈ ಪತ್ರಗಳನ್ನು ಪರಿಗಣಿಸಿದ್ದ ರಾಜ್ಯಪಾಲರು ಈ ಹಿಂದೆ ನಡೆದಿದ್ದ ಎಸ್.ಆರ್. ಬೊಮ್ಮಾಯಿ ಅವರ ಪ್ರಕರಣದ ತೀರ್ಪನ್ನು ಅನುಸರಿಸಿ ಅತಿ ದೊಡ್ಡ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಆಹ್ವಾನ ನೀಡಿದ್ದರು.
ನಾಟಕೀಯ ಬೆಳವಣಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯರಾತ್ರಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಆ ಎರಡು ಪತ್ರಗಳನ್ನು ಹಾಜರುಪಡಿಸುವಂತೆ ಅಟಾರ್ನಿ ಜನರಲ್ ಅವರಿಗೆ ಸೂಚಿಸಿತ್ತು.
ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿರುವ ಸಮಯಾವಕಾಶದ ವಿಚಾರವೂ ಇಲ್ಲಿ ಪರಿಗಣಿತವಾಗಲಿದೆ. ಯಡಿಯೂರಪ್ಪ ಅವರು 7 ದಿನಗಳ ಕಾಲಾವಕಾಶ ಕೋರಿದ್ದರೆ, ರಾಜ್ಯಪಾಲರು 15 ದಿನಗಳ ಸಮಯ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications