• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭಾ ಚುನಾವಣೆ : ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳು

|
   ವಿಧಾನಸಭಾ ಚುನಾವಣೆ : ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳು | Oneindia Kannada

   ಉತ್ತರ ಕನ್ನಡ, ಏಪ್ರಿಲ್ 03 : 'ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮಧ್ಯದಲಿ ಅಡಕೆ ತೆಂಗುಗಳ ಮಡಿಲು, ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ' ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಉತ್ತರ ಕನ್ನಡದ ಭೌಗೋಳಿಕ ಲಕ್ಷಣವನ್ನು ವಿವರಿಸಿದ ಪರಿ ಇದು.

   ಒಂದು ಕಡೆ ಹಸಿರು ಸಸ್ಯ ಕಾಶಿಗಳನ್ನೊಳಗೊಂಡ ಸಹ್ಯಾದ್ರಿ ಬೆಟ್ಟ. ಇನ್ನೊಂದು ಕಡೆ ಅರಬ್ಬೀ ಸಮುದ್ರ. ಘಟ್ಟದ ಮೇಲ್ಭಾಗದಲ್ಲಿ ಅಡಿಕೆ ತೆಂಗುಗಳ ಪ್ರಪಂಚ ಮಲೆನಾಡು. ಬಹುತೇಕ ಅರಣ್ಯ ಭಾಗ, ಸಮುದ್ರ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒಂದು ರೀತಿಯಲ್ಲಿ ಪರಿಸರವೇ ಮಾರಕವಾದಂತಿದೆ.

   ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬಲಾಬಲದ ಚಿತ್ರಮಾಹಿತಿ

   ಕರಾವಳಿ ಭಾಗದಲ್ಲಿ ಸಿಆರ ಝೆಡ್ ಸಮಸ್ಯೆಯಾದರೆ, ಮಲೆನಾಡು ಪ್ರದೇಶದಲಿ ಅರಣ್ಯ ಭೂಮಿಗಳ ಸಕ್ರಮಾತಿಯ ಸಮಸ್ಯೆ. ಅರಣ್ಯ ಪ್ರದೇಶಗಳಿಂದಾಗಿಯೇ ಕೈಗಾರಿಕೆಗಳು ಇಲ್ಲಿಗೆ ಕಾಲಿಡಲು ಹಿಂಜರಿದಿವೆ. ಹೀಗಾಗಿ ಇಲ್ಲಿ ಜನರಿಂದ ಆಯ್ಕೆಯಾಗುವ ಮುನ್ನ ಜನಪ್ರತಿನಿಧಿಗಳು ಕೈಗಾರಿಕೆ ತರುತ್ತೇವೆ.

   ಹಸಿರು ಜಿಲ್ಲೆ ಉತ್ತರ ಕನ್ನಡ ಕ್ಷೇತ್ರದ ಪ್ರಮುಖ ಸಮಸ್ಯೆಗಳು

   ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತೇವೆ ಎನ್ನುವುದನ್ನು ಚುನಾವಣೆಯ ಬಂಡವಾಳ ಮಾಡಿಕೊಳ್ಳುತ್ತಾರೆ ಜನಪ್ರತಿನಿಧಿಗಳು. ಆರಿಸಿ ಬಂದಾಕ್ಷಣ ಕೈಗಾರಿಕೆಗಳು ಇಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಇನ್ಯಾವುದೋ ಪರಿಸರ ಪ್ರೇಮಿಗಳನ್ನು ಪ್ರತಿಭಟನೆ ನಡೆಸುವಂತೆ ಪ್ರೇರೇಪಿಸಿ ಕೈಗಾರಿಕೆಗಳನ್ನು ತರುವ ಕೆಲಸ ಕೂಡ ಮಾಡುವುದಿಲ್ಲ.

   ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕರಾವಳಿ ಭಾಗದ ಸೂಕ್ಷ್ಮ ಜಿಲ್ಲೆ ಉತ್ತರ ಕನ್ನಡ ಚುನಾವಣೆಗೆ ಸಿದ್ಧವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳತ್ತ ಒಮ್ಮೆ ಗಮನ ಹರಿಸೋಣ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ ವಿಧಾನಸಭಾ ಕ್ಷೇತ್ರಗಳಿವೆ....

   ಅರಣ್ಯ ಅತಿಕ್ರಮಣದಾರರದ್ದೇ ಬಹುದೊಡ್ಡ ಸಮಸ್ಯೆ

   ಅರಣ್ಯ ಅತಿಕ್ರಮಣದಾರರದ್ದೇ ಬಹುದೊಡ್ಡ ಸಮಸ್ಯೆ

   ಜಿಲ್ಲೆಯ ಬಹುದೊಡ್ಡ ಸಮಸ್ಯೆಯೆಂದರೆ ಅರಣ್ಯ ಅಕ್ರಮ ಸಕ್ರಮಾತಿ. ನಗರ ಪ್ರದೇಶಗಳಲ್ಲಿ ಜಾಗವಿಲ್ಲದೇ ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿ ಗುಡಿಸಲು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕನ್ನು ನೀಡದೇ ಸರ್ಕಾರ ಅನ್ಯಾಯ ಎಸಗುತ್ತಿದೆ ಎನ್ನುವುದು ಇಲ್ಲಿನ ಜನರ ಆರೋಪ.

   ‘ಉತ್ತರ ಕನ್ನಡದಲ್ಲಿ 85,585 ಕುಟುಂಬಗಳು ಅರಣ್ಯ ಭೂಮಿಯ ಹಕ್ಕಿಗಾಗಿ ಅರ್ಜಿ ಹಾಕಿ ಕುಳಿತಿದೆ. ಅದರಲ್ಲಿ 47 ಸಾವಿರದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ ಭಟ್ಕಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 80ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ' ಎನ್ನುತಾರೆ ಅರಣ್ಯ ಹಕ್ಕು ಸಮಿತಿ ಹೋರಾಟಗಾರ ಎ.ರವೀಂದ್ರ ನಾಯ್ಕ.

   ಅರಣ್ಯ ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸರಿಯಾಗಿ ಮಾಹಿತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಅರ್ಜಿದಾರನ ಮೂರು ದಶಕಗಳ ಹಿಂದಿನ ದಾಖಲೆಗಳನ್ನು ಸರ್ಕಾರ ಕೇಳುತ್ತಿಲ್ಲ. ಅದು ಕೇಳುತ್ತಿರುವುದು 75 ವರ್ಷಗಳ ಹಿಂದೆ ಆ ಪ್ರದೇಶದಲ್ಲಿ ಜನವಸತಿ ಇರುವ ಕುರಿತು ದಾಖಲೆಗಳು. ಅಂದರೆ ರಾಜ- ಮಹಾರಾಜರು ಆಳ್ವಿಕೆ ನಡೆಸಿರುವ ಕುರಿತು ಕುರುಹುಗಳೇನಾದರೂ ಇದ್ದಲ್ಲಿ, ನೈಸರ್ಗಿಕವಾಗಿ ಈ ಬಗ್ಗೆ ದಾಖಲೆಗಳೇನಾದರು ಇದ್ದಲ್ಲಿ ಸಲ್ಲಿಸಲು ಅವಕಾಶ ಇದೆ. ಆದರೆ ಅಧಿಕಾರಿಗಳಿಗೆ ಗೊಂದಲ ಇದೆ. ಅವರಿಗೆ ತಪ್ಪು ಮಾಹಿತಿಗಳಿರುವುದರಿಂದ ಅರ್ಜಿಗಳು ತಿರಸ್ಕಾರಗೊಳ್ಳುತ್ತಿವೆ.

   ‘ಕಳೆದ 25 ವರ್ಷಗಳಿಂದ ಈ ಹೋರಾಟದಲ್ಲಿದ್ದೇನೆ. 6 ಚುನಾವಣೆಗಳನ್ನು ನೋಡಿದ್ದೇನೆ. ಈ ಚುನಾವಣೆಗಳ ಪೂರ್ವದಲ್ಲಿ ಎಲ್ಲ ಜನಪ್ರತಿನಿಧಿಗಳು ಅಥವಾ ಸರ್ಕಾರ ಈ ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಮಂಜೂರಿ ಮಾಡುತ್ತೇವೆ ಅಂತ ಬೊಗಳೆ ಬಿಟ್ಟು ಅರ್ಜಿಗಳನ್ನು ಹಾಕಿಸಿಕೊಂಡು ತಿರಸ್ಕಾರ ಮಾಡುತ್ತವೆ. ಪ್ರಣಾಳಿಕೆಗಳಲ್ಲಿ ಇದನ್ನೇ ಆಶ್ವಾಸನೆಗಳಾಗಿ ಜನರ ಮುಂದಿಟ್ಟು, ಮತ ಪಡೆಯುತ್ತಾರೆ' ಎನ್ನುತ್ತಾರೆ ರವೀಂದ್ರ ನಾಯ್ಕ.

   ಸಿಆರ್‌ಝೆಡ್‌ ನಿಯಮ ತೊಡಕು

   ಸಿಆರ್‌ಝೆಡ್‌ ನಿಯಮ ತೊಡಕು

   ಕರಾವಳಿ ತೀರದ ಪ್ರದೇಶಗಳಿಗೆ ಅನ್ವಯಿಸುವ ಸಿಆರ್‌ಝೆಡ್‌ ನಿಯಮ ಕೂಡ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ ಅಂತಲೇ ಹೇಳಬಹುದು. ಇಲ್ಲಿ ವಿರಳವಾಗಿರುವ ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಮಾಡಿಕೊಳ್ಳಲು ಈ ನಿಯಮ ಅಡ್ಡಗಾಲಾಗುತ್ತಿದೆ. ಈ ಬಗ್ಗೆ ಈಗಾಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರಂತೆ. ನಿಯಮ ಸಿಡಿಲಿಕೆಗೊಳಿಸಿದರೆ ಕರಾವಳಿ ತೀರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

   ಕೈಗಾರಿಕೆಗಳಿಲ್ಲ, ಉದ್ಯೋಗವೂ ಇಲ್ಲ

   ಕೈಗಾರಿಕೆಗಳಿಲ್ಲ, ಉದ್ಯೋಗವೂ ಇಲ್ಲ

   ಜಿಲ್ಲೆ ಶೈಕ್ಷಣಿಕವಾಗಿ ಮುಂದಿದೆ. ಎಸ್.ಎಸ್.ಎಲ್.ಸಿ, ಪಿಯು ಪರೀಕ್ಷೆಗಳಲ್ಲಿ ಜಿಲ್ಲೆ ಯಾವಾಗಲೂ ಮೊದಲ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಬಾಚಿಕೊಂಡಿರುತ್ತೆ. ಇಲ್ಲಿ ಅನೇಕ ಪ್ರತಿಭಾನ್ವಿತರಿದ್ದಾರೆ. ಇಂಜಿನಿಯರ್‍, ಮೆಡಿಕಲ್, ಪತ್ರಿಕೋದ್ಯಮದಲ್ಲಿ ಗಮನ ಸೆಳೆದವರಿದ್ದಾರೆ.

   ಆದರೆ, ಕೈಗಾರಿಗಳಿಲ್ಲದೇ ಇಲ್ಲಿನ ಯುವಕರು ಹೊರ ರಾಜ್ಯ ಹಾಗೂ ವಿದೇಶಗಳಿಗೆ ತೆರಳುವ ಪರಿಸ್ಥಿತಿ ಇದೆ. ಗಡಿ ಭಾಗ ಕಾರವಾರದಲ್ಲಿನ ಯುವ ಜನತೆ ಉದ್ಯೋಗಕ್ಕಾಗಿ ನೆರೆಯ ಗೋವಾಕ್ಕೆ ತಂಡೋಪ ತಂಡವಾಗಿ ತೆರಳುತ್ತಾರೆ.

   ಇನ್ನು ಭಟ್ಕಳದಲ್ಲಿ ಹೂಡಿಕೆದಾರರಿದ್ದರೂ ಸೌಲಭ್ಯಗಳನ್ನು ನೀಡುವವರಿಲ್ಲದಾಗಿದೆ. ಹೀಗಾಗಿ ಇಲ್ಲಿನ ಬಹುತೇಕರು ಅರಬ್ ದೇಶಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿದ್ದಾರೆ.

   ಕೋಮು ಸೌಹಾರ್ಹತೆಯ ಸವಾಲು

   ಕೋಮು ಸೌಹಾರ್ಹತೆಯ ಸವಾಲು

   ‘ಭಟ್ಕಳದಂಥ ಮತೀಯ ಸೂಕ್ಷ್ಮ ಪ್ರದೇಶವಿರುವ ಈ ಜಿಲ್ಲೆಯಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಿರುತ್ತವೆ. ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳನಂಥ ಭಯೋತ್ಪಾದಕರಿಂದ ಕುಖ್ಯಾತಿ ಪಡೆದಿರುವ ಭಟ್ಕಳದಲ್ಲಿ ಸೌಹಾರ್ಧತೆ ಬೆಳೆಸಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಭಟ್ಕಳ ಇನ್ನೊಂದು ಕಾಶ್ಮೀರವಾಗಿ ಪರಿವರ್ತನೆಯಾದರೂ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ' ಎನ್ನುತಾರೆ ಗಣೇಶ ಹೆಗಡೆ.

   ‘ಚುನಾವಣೆ ಸಮೀಪಿಸುತ್ತಿದ್ದಂತೆ ಇತ್ತೀಚಿಗೆ ನಡೆದ ಗಲಭೆಗಳು ಇಲ್ಲಿನ ಜನರನ್ನು ಭಯದ ಕೂಪಕ್ಕೆ ದೂಡಿದೆ. ಆತ ಹಿಂದೂ, ಈತ ಮುಸ್ಲಿಂ ಎಂಬ ಪ್ರತ್ಯೇಕ ಭಾವನೆ ಮೂಡಲು ಕಾರಣವಾಗಿವೆ. ಜಿಲ್ಲೆಯಲ್ಲಿ ಶಾಂತಿ ನೆಲೆಗೊಳ್ಳುವತ್ತ ಸರ್ಕಾರಗಳು ಗಮನ ಹರಿಸಬೇಕು' ಎನ್ನುವುದು ಅವರ ಆಶಯ.

   ನನಸಾಗದ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ

   ನನಸಾಗದ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ

   ಸುಮಾರು ಎರಡು ದಶಕದಿ೦ದ ಅ೦ಕೋಲಾ-ಹುಬ್ಬಳ್ಳಿ ರೈಲು ಮಾರ್ಗದ ಯೋಜನೆ ಪ್ರಗತಿ ಕಾಣದೆ ನನೆಗುದಿಗೆ ಬಿದ್ದಿದೆ. ಎರಡು ಭಾಗಗಳಾಗಿ ವಿ೦ಗಡಣೆಯಾಗಿರುವ ಈ ಯೋಜನೆಯ ಮೊದಲ ಭಾಗದ ಕೆಲಸದಲ್ಲಿ ಗಣನೀಯ ಪ್ರಗತಿಯಾಗಿತ್ತು. ಎರಡನೆಯ ಭಾಗದ ಯೋಜನೆಗೆ 2004ರಲ್ಲಿ ಕೇ೦ದ್ರ ಸರ್ಕಾರದ ಅರಣ್ಯ ಇಲಾಖೆಯು ಅನುಮತಿ ನಿರಾಕರಿಸಿತು. ಅ೦ದಿನಿ೦ದ ಈ ಯೋಜನೆಯ ಕೆಲಸಗಳು ನಿ೦ತುಹೋಗಿವೆ.

   ಈ ವರದಿಯನ್ನು ಮತ್ತು ಪರಿಸರವಾದಿ ಸ೦ಘಟನೆಗಳ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮ೦ಡಳಿಗೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು. ಸಮಗ್ರ ವಿಚಾರಣೆಯ ನ೦ತರ 2016ರ ಫೆಬ್ರುವರಿ 10ರ೦ದು ಈ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮ೦ಡಳಿ ಹಸಿರು ನಿಶಾನೆ ತೋರಿಸಿತ್ತು. ಆದರೆ ಈವರೆಗೂ ಇದರಲ್ಲಿ ಮತ್ಯಾವುದೇ ಪ್ರಗತಿ ಕಂಡು ಬಂದಿಲ್ಲ.

   ಈ ರೈಲು ಮಾರ್ಗದಿಂದ ಜಿಲ್ಲೆಯ ಸ೦ಪರ್ಕ ಸಾಧನಗಳ ಬೆಳವಣಿಗೆಯ ಜೊತೆಗೆ ಔದ್ಯೋಗಿಕ ಅಭಿವೃದ್ಧಿ ಆಗಲಿ. ಜತೆಗೆ ಇದರಿಂದ ರಸ್ತೆ ಪ್ರವಾಸದ ವೆಚ್ಚ, ಸಮಯ, ಅಪಘಾತಗಳು, ಪರಿಸರ ಮಾಲಿನ್ಯ ಮತ್ತು ಆಯಾಸ ಕಡಿಮೆಯಾಗಲಿದೆ. ಜೊತೆಗೆ ಇದು ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ, ಹಾವೇರಿ, ದಾವಣಗೆರೆ ಕಡೆಗೆ ಪ್ರವಾಸಿಗರಿಗೆ ಮತ್ತು ಸರಕು ಸಾಗಣೆಗೆ ಸ೦ಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಕಾರವಾರ, ಬೇಲೆಕೇರಿ, ತದಡಿ ಬಂದರುಗಳಲ್ಲಿನ ಸರಕುಗಳನ್ನು ಇಳಿಸಿ ಬಳಸುವ ಉಗ್ರಾಣಗಳು,


   ರೈಲು ಮಾರ್ಗ ನಿರ್ಮಾಣಗೊಂಡರೆ ವ್ಯಾಪ್ಯಾರ, ವ್ಯವಹಾರ ಬೆಳೆಯಬಲ್ಲವು. ಉತ್ತರ ಕರ್ನಾಟಕಕ್ಕೆ ಹುಬ್ಬಳ್ಳಿ-ಅ೦ಕೋಲಾ ರೈಲು ಹೆಚ್ಚು ಸುಲಭ, ಅಗ್ಗ, ಸಮಯ ಉಳಿಸುವ ಸ೦ಪರ್ಕ ಒದಗಿಸಲಿದೆ ಎಂಬ ಇಲ್ಲಿನ ಜನರ ಭರವಸೆ ಇನ್ನು ಈಡೇರದಿರುವುದು ಜನರ ನಂಬಿಕೆಯ ಮೇಲೆ ಬರೆ ಎಳೆದಂತಾಗಿದೆ.

   ಮೀನುಗಾರರ ಸಮಸ್ಯೆ

   ಮೀನುಗಾರರ ಸಮಸ್ಯೆ

   'ಸಿಆರ್‌ ಝೆಡ್‌ ನಿಯಮ ಉಲ್ಲಂಘನೆ ಮಾಡಿ ಜಿಲ್ಲಾಡಳಿತ ಸಮುದ್ರ ತೀರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮೀನುಗಾರರ ಉದ್ಯೋಗಕ್ಕೆ ತೊಡಕು ಉಂಟು ಮಾಡಿದೆ' ಎನ್ನುವುದು ಮೀನುಗಾರ ವಿನಾಯಕ ಹರಿಕಂತ್ರ ಅವರ ಅಭಿಪ್ರಾಯ.

   ಜತೆಗೆ ಬಲೆ ಇಡಲು, ಮೀನು ಒಣಗಿಸಲು ಇಲ್ಲಿನ ಮೀನುಗಾರ ಸಮುದಾಯಕ್ಕೆ ಯಾವುದೇ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ಇಲ್ಲಿನ ಪ್ರಮುಖ ಸಮುದಾಯದಲ್ಲೊಂದಾದ ಮೀನುಗಾರರ ಸಮುದಾಯವನ್ನು ಸರ್ಕಾರ ಕಡೆಗಣಿಸಿದೆ ಎನ್ನುವುದು ಕೂಡ ಅವರ ಆರೋಪ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈಗಿನವರೆಗು ಮೀನುಗಾರರ ಹಲವು ಬೇಡಿಕೆಗಳಿಗೆ ಸ್ಪಂದಿಸಿಲ್ಲ.

   ಗೋವಾ ರಾಜ್ಯದಲ್ಲಿನ ಮೀನುಗಾರಿಕೆಗೂ, ಗಡಿಯ ನಮ್ಮ ಜಿಲ್ಲೆಯ ಮೀನುಗಾರಿಕೆಗೂ ಬಹಳಷ್ಟು ವ್ಯತ್ಯಾಸಗಳು ಉಂಟಾಗಿವೆ. ಇದನ್ನು ಬಗೆಹರಿಸಲು ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಅವರ ಆರೋಪ. ಆಂತರಿಕವಾಗಿ ಬುಲ್ ಟ್ರಾಲ್, ಲೈಟ್ ಫಿಶಿಂಗ್ ಸಮಸ್ಯೆ ಕೂಡ ಸರ್ಕಾರದ ಮುಂದಿದೆ.

   ಕುಡಿಯುವ ನೀರಿನ ಸಮಸ್ಯೆ

   ಕುಡಿಯುವ ನೀರಿನ ಸಮಸ್ಯೆ

   ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪು ನೀರಿನ ಹಾವಳಿಯಿಂದಾಗಿ ವರ್ಷವಿಡೀ ಕುಡಿಯಲು ನೀರಿಲ್ಲದ ಪ್ರದೇಶಗಳು ಕೂಡ ಜಿಲ್ಲೆಯಲ್ಲಿವೆ. ಉದಾಹರಣೆಗೆ ಗೋಕರ್ಣ ಹಾಗೂ ಕುಮಟಾದ ಕೆಲವು ಭಾಗ, ಕಾರವಾರದ ಕಿನ್ನರದಂಥ ಊರುಗಳಲ್ಲಿ ಜನ ನೀರಿಗಾಗಿ ಹಾಹಾಕರ ಮಾಡುತ್ತಾರೆ.

   ಬೇಸಿಗೆ, ಚಳಿ, ಮಳೆಗಾಲವೂ ಇವರಿಗೆ ಒಂದೆ ಎಂಬಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಿದೆ. ಇನ್ನು ಬೇಸಿಗೆಯ ಆರಂಭದಲ್ಲೇ ಸಾಮಾನ್ಯವಾಗಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಉಂಟಾಗುತ್ತದೆ.

   ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಎಲ್ಲಿಯೂ ಪೂರ್ಣಗೊಂಡಿಲ್ಲ. ಇದು ಕೂಡ ಜನಪ್ರತಿನಿಧಿಗಳ ವೈಫಲ್ಯ ಎನ್ನುತ್ತಾರೆ ಇಲ್ಲಿನ ಜನ.

   ನಿರಾಶ್ರಿತರ ಸಮಸ್ಯೆ

   ನಿರಾಶ್ರಿತರ ಸಮಸ್ಯೆ

   ಬಡ ವರ್ಗದವರಿಗಿಂತಲೂ ಹೆಚ್ಚು ನಿರಾಶ್ರಿತರೆ ಜಿಲ್ಲೆಯಲ್ಲಿ ಇದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಿಗಾಗಿ ಜಾಗ ಬಿಟ್ಟವರು, ಕೈಗಾ, ಸೀಬರ್ಡ್ ಯೋಜನೆಗಾಗಿ ಮನೆಗಳನ್ನು ತೊರೆದವರು, ಕದ್ರಾ- ಕೊಡಸಳ್ಳಿ ಡ್ಯಾಮ್‍ನ ವಿದ್ಯುತ್ ಯೋಜನೆಗಾಗಿ ನಿರಾಶ್ರಿತರಾದವರು, ಕಾಳಿ ನಿರಾಶ್ರಿತರು, ಅಣಶಿ ಅಭಯಾರಣ್ಯಕ್ಕಾಗಿ ಜನರನ್ನು ಒಕ್ಕಲೆಬ್ಬಿಸುವ ಮೂಲಕ ಸಾಕಷ್ಟು ಕುಟುಂಬಗಳು ನಿರಾಶ್ರಿತಗೊಂಡಿವೆ.

   ಇವೆಲ್ಲ ಯೋಜನೆಗಳನ್ನು ಒಟ್ಟಿಗೆ ತಂದು, ನಿರಾಶ್ರಿತ ಎಲ್ಲ ಕುಟುಂಬಕ್ಕೂ ಪರಿಹಾರದ ಪ್ಯಾಕೇಜ್‍ವೊಂದನ್ನು ಘೋಷಿಸಬೇಕೆನ್ನುವುದು ಕೂಡ ಇಲ್ಲಿನ ಜನರ ಆಗ್ರಹವಾಗಿದೆ.

   ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ

   ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ

   ಜಿಲ್ಲೆಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ಹೆಜ್ಜೆ ಹೆಜ್ಜೆಗೂ ಅಪಾಯ ಎದುರಿಸುವಂತಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ.

   ಮಹಾರಾಷ್ಟ್ರದ ಪನವೇಲ್‌ನಿಂದ ಕೇರಳದ ಕೊಚ್ಚಿಗೆ ಸಂಪರ್ಕಿಸುವ ಈ ಹೆದ್ದಾರಿ (ರಾ.ಹೆ. 66)ಯನ್ನು ಚತುಷ್ಪಥಗೊಳಿಸುವ ಕಾಮಗಾರಿ ಕಳೆದ ಮೂರುವರೆ ವರ್ಷಗಳಿಂದ ನಡೆಸಲಾಗುತ್ತಿದೆ. ಐಆರ್‌ಬಿ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿದೆ. ಭಟ್ಕಳದಿಂದ ಕಾರವಾರದ ಗಡಿ ಪ್ರದೇಶದವರೆಗೆ ಸುಮಾರು 150 ಕಿ.ಮೀ. ಉದ್ದದ ಹೆದ್ದಾರಿ ಹಾದುಹೋಗಿದೆ.

   ಜಿಲ್ಲೆಯ ಬಹುತೇಕ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗುಡ್ಡಗಳಿದ್ದು ಅಗಲೀಕರಣಕ್ಕೆ ಗುಡ್ಡಗಳನ್ನು ಅಗೆದು ಸಮತಟ್ಟುಗೊಳಿಸಬೇಕಿದೆ. ಆದರೆ ಕಾಮಗಾರಿ ನಡೆಸುತ್ತಿರುವ ಸಂಸ್ಥೆ ಸ್ಫೋಟಕಗಳನ್ನು ಬಳಸಿ ಅವೈಜ್ಞ್ಞಾನಿಕವಾಗಿ ಗುಡ್ಡದ ಬಂಡೆಗಳನ್ನು ಸಿಡಿಸುತ್ತಿದೆ. ಇದರಿಂದ ಮಳೆಗಾದಲ್ಲಿ ಗುಡ್ಡಗಳು ಕುಸಿದು ಹಾನಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು ಈಗಾಗಲೇ ಕೆಲವು ಕಡೆಗಳಲ್ಲಿ ಕೆಂಪು ಮಣ್ಣಿನ ಗುಡ್ಡ ಕುಸಿದಿರುವುದು ಕಂಡ ಬರುತ್ತಿದೆ.

   ಕೆಲವೊಮ್ಮೆ ಬಂಡೆಗಲ್ಲುಗಳು ಕೂಡ ರಸ್ತೆಯ ಮೇಲೆ ಉರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ. ಶೀಘ್ರವೇ ಈ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕೂಡ ಇಲ್ಲಿನ ಜನ ಈಗಾಗಲೇ ಹಲವರಿಗೆ ಮನವಿ ಮಾಡಿದ್ದಾರೆ.

   ಅಪಘಾತ, ಸಾವು ಇದರಿಂದ ಉಂಟಾಗುತ್ತಿರುವುದು ಜನರ ಬದುಕಿನ ಮೇಲೆ ಕರಿ ಛಾಯೆ ಎಳೆದಿದೆ. ಇನ್ನು ಕೆಲವೆಡೆ ಅಂಡರ್ ಪಾಸ್, ಬೈ ಪಾಸ್ ಗಳ ನಿರ್ಮಾಣ ಕೂಡ ಬಗೆಹರಿಯದ ಸಮಸ್ಯೆಯಂತಾಗಿ ಉಳಿದುಕೊಂಡಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು uttara kannada ಸುದ್ದಿಗಳುView All

   English summary
   Karnataka assembly Elections 2018 : Here is list of major problems faced in the Uttara kannada district assembly constituencies. Uttara Kannada district consists 6 assembly constituencies.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more