ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಪಾತಗಳ ಜಿಲ್ಲೆಯಲ್ಲಿ ರಾಜಕೀಯ ಪ್ರವಾಸ

By Mahesh
|
Google Oneindia Kannada News

ವೋಟ್ ಮಾಡೋ ಜನರಿಗಿಂತ ಹೆಚ್ಚು ಕಾಡನ್ನೇ ಹೊಂದಿರುವ ಜಿಲ್ಲೆ ಉತ್ತರ ಕನ್ನಡ. ಬಯಲುಸೀಮೆ, ಮಲೆನಾಡು, ಕರಾವಳಿ ಪ್ರದೇಶಗಳನ್ನು ಹೊಂದಿರುವ ಏಕೈಕ ಜಿಲ್ಲೆ. ಮುಂಬೈ ಮನಸಿನ ಇಲ್ಲಿನ ಮಂದಿಗೆ ಈಗ ಬೆಂಗಳೂರು, ಹುಬ್ಬಳ್ಳಿ ಹತ್ತಿರವಾದರೂ ಕೃಷಿ, ಮೀನುಗಾರಿಕೆ ಬಿಟ್ಟರೆ ಉಳಿದ ಕಸುಬು ಏಳಿಗೆಯಾಗಿಲ್ಲ. ಕಾರವಾರದ ಕಡೆ ಕಬ್ಬಿಣ ಅದಿರು ಲಾರಿ ಓಡಾಡಿದ್ದು ಬಿಟ್ಟರೆ ಬೇರೆ ಪ್ರಯೋಜನವಾಗಿಲ್ಲ. ಜಲಪಾತಗಳ ಜಿಲ್ಲೆ ಉತ್ತರ ಕನ್ನಡ ಮೂಲ ಸೌಕರ್ಯದ ವಿಷಯದಲ್ಲಿ ಪಾತಾಳ ಕಂಡಿದೆ.

ಮೂಲ ಸೌಕರ್ಯ ಕೊರತೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳ ಕೊರತೆ, ಬುಡಕಟ್ಟು ಜನಾಂಗದವರನ್ನು ಕಾಡು ಬಿಟ್ಟು ನಾಡಿಗೆ ಕರೆ ತರುವ ವ್ಯರ್ಥ ಪ್ರಯತ್ನ, ಹತ್ತು ಹಲವುಕಾಯಿಲೆಗಳ ಬೀಡಾಗಿದ್ದ ಜಿಲ್ಲೆ ಈಗ ಹಲವು ಚಟಗಳ ಬೀಡಾಗಿರುವುದು, ಎಂದಿನಂತೆ ಕಡಲ್ಕೊರೆತ, ಆಗಾಗ ಕಾಡಿನಲ್ಲಿ ಮರಗಳು ಬಿದ್ದ ಸದ್ದಿನ ಮೊರೆತ ಎಲ್ಲವೂ ಜಿಲ್ಲೆಗಳ ಜಲಪಾತಗಳ ಸದ್ದಿನಲ್ಲಿ ಡೊಂಕು ಬಾಲದ ನಾಯಕರಿಗೆ ಕೇಳಿಸುವುದೇ ಇಲ್ಲ.

ಬೆಂಗಳೂರಿಗೆ ಮಾಧ್ಯಮ ವಿದ್ಯಾರ್ಥಿಗಳು, ಸಾಹಿತಿಗಳು ಕಮ್ ಪತ್ರಕರ್ತರನ್ನು ಸಪ್ಲೈ ಮಾಡುವ ಅಲಿಖಿತ ಗುತ್ತಿಗೆ ಪಡೆದಿರುವ ಜಿಲ್ಲೆ ಶೈಕ್ಷಣಿಕವಾಗಿ ಪಕ್ಕದ ಜಿಲ್ಲೆಗೆ ಹೋಲಿಸಿದರೆ ಜೊತೆ ಹಿಂದುಳಿದಿರುವುದಕ್ಕೆ ಜನನಾಯಕರೇ ಕಾರಣ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಬಹುದು.

Uttara Kannada District Assembly Constituency Profile

ಭತ್ತ, ಅಡಿಕೆ, ತೆಂಗು, ವೀಳೆಯದೆಲೆ ಪ್ರಮುಖವಾಗಿ ಎಲ್ಲೆಡೆ ಕಾಣ ಸಿಗುತ್ತದೆ. ಕಂಗು ಬೆಳೆಯುವುದನ್ನು ಹವ್ಯಕರಿಂದ ಕಲಿಯಬೇಕು ಎಂದು ಪಕ್ಕದ ಜಿಲ್ಲೆಯ ಭತ್ತ ಬೆಳೆವ ರೈತ ಹೇಳಿಕೊಳ್ಳುವುದು ತಮಾಷೆಗಾಗಿ ಅಲ್ಲ. ಆದರೆ, ಜಿಲ್ಲೆಯ ಕೃಷಿಕರಿಗೆ, ಬೆಸ್ತರಿಗೆ ವಯಸ್ಸಾಗಿದೆ. ಅರ್ಥಾತ್, ಜಿಲ್ಲೆ ಬರೀ ವೃದ್ಧರ ಬೀಡಾಗುವ ಆತಂಕ ಎದುರಿಸುತ್ತಿದೆ. ಮನೆಯ ಜವಾಬ್ದಾರಿ ಹೊರುವ ಮಕ್ಕಳೆಲ್ಲ ಪಟ್ಟಣ ಸೇರಿದ್ದಾರೆ. ಪುಣ್ಯಕ್ಕೆ ಜಿಲ್ಲೆಯಲ್ಲಿ ಗಂಡು ಹೆಣ್ಣು ಮಕ್ಕಳಿಬ್ಬರಿಗೂ ಸಮಾನ ಗೌರವ, ಅವಕಾಶ ಇರುವುದರಿಂದ ಕೊಂಚ ಬಚಾವ್.

ಪ್ರವಾಸಿ ತಾಣಗಳು: ಯಾಣ, ಮಾಗೋಡು, ಉಂಚಳ್ಳಿ, ಗಣೇಶ ಫಾಲ್ಸ್, ಮುರುಡೇಶ್ವರ, ಗೋಕರ್ಣ, ದಾಂಡೇಲಿ, ಶಿರಸಿ, ಕಾರವಾರ, ಇಡಗುಂಜಿ, ಸೋಂದಾ..ಇತ್ಯಾದಿ

ತಾಲೂಕುಗಳು: ಅಂಕೋಲಾ, ಭಟ್ಕಳ, ಹಳಿಯಾಳ, ಹೊನ್ನಾವರ, ಜೋಯಿಡಾ, ಕಾರವಾರ, ಕುಮಟಾ, ಮುಂಡಗೋಡ, ಶಿರಸಿ, ಸಿದ್ದಾಪುರ, ಯಲ್ಲಾಪುರ

ವಿಧಾನಸಭಾ ಕ್ಷೇತ್ರಗಳು: ಯಲ್ಲಾಪುರ, ಶಿರಸಿ, ಭಟ್ಕಳ, ಕುಮಟಾ, ಕಾರವಾರ, ಹಳಿಯಾಳ, ಬೆಳಗಾವಿಯಿಂದ ಬಂದ ಕಿತ್ತೂರು, ಖಾನಪುರ

ಪ್ರಮುಖ ಭಾಷೆ: ಕನ್ನಡ, ಹವಿಗನ್ನಡ, ಕೊಂಕಣಿ, ಮರಾಠಿ

ಪ್ರಮುಖ ಜನಾಂಗ: ಬ್ರಾಹ್ಮಣರು(ಹವ್ಯಕ, ಗೌಡ ಸಾರಸ್ವತ, ದೈವಜ್ಞ, ಚಿತ್ತಾಪುರ, ರಾಜಪುತ ಸಾರಸ್ವತ, ಮರಾಠಿ,) ನಾಮಧಾರಿ ನಾಯಕ, ಹಾಲಕ್ಕಿ ಒಕ್ಕಲಿಗ, ವೈಶ್ಯ, ಗುಡಿಗಾರರು, ಸಿದ್ದಿ, ಕುಣಬಿ, ಗಾವ್ಲಿ, ಮುಸ್ಲಿಂ, ಕ್ರೈಸ್ತ

ಜನಸಂಖ್ಯೆ: 1,436,847 | ಪ್ರತಿ 1000 ಪುರುಷರಿಗೆ 975 ಮಹಿಳೆಯರಿದ್ದಾರೆ. ಶೇ 84.03 ಮಂದಿ ವಿದ್ಯಾವಂತರಿದ್ದಾರೆ.

ಸಾರಿಗೆ: 4 ರಾಷ್ಟೀಯ ಹೆದ್ದಾರಿಗಳಿದೆ. ಅದ್ಭುತವಾದ ಕೊಂಕಣ್ ರೈಲ್ವೆ ಹಾದಿಯಿದೆ. ಕಾರವಾರ, ಬೇಲೇಕೇರಿ, ತದಡಿ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಬಂದರುಗಳಿದೆ. ಹುಬ್ಬಳ್ಳಿ, ಬೆಳಗಾವಿ, ಗೋವಾ, ಮಂಗಳೂರು ವಿಮಾನ ನಿಲ್ದಾಣಗಳು ಹತ್ತಿರದಲ್ಲಿದೆ.

ಶೈಕ್ಷಣಿಕವಾಗಿ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಕೊರತೆ ಬಿಟ್ಟರೆ ಮಿಕ್ಕಂತೆ ಉತ್ತಮ ಶಿಕ್ಷಣ ಸಂಸ್ಥೆಗಳು ಎಲ್ಲಾ ತಾಲೂಕು ಕೇಂದ್ರಗಳಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವ್ಯಕ್ತಿಗಳ ಪಟ್ಟಿ ಮಾಡುತ್ತಾ ಹೋದರೆ ಅಡಿಕೆ ಮರದಂತೆ ಉದ್ದಕ್ಕೆ ಬೆಳೆಯುತ್ತದೆ. ರಾಜಕೀಯವಾಗಿ ರಾಮಕೃಷ್ಣ ಹೆಗಡೆ, ಆರ್ ವಿ ದೇಶಪಾಂಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾರ್ಗರೇಟ್ ಆಳ್ವ,ಅನಂತ ಕುಮಾರ ಹೆಗಡೆ, ಉದ್ಯಮಿ ನಂದನ್ ನಿಲೇಕಣಿ, ಪತ್ರಕರ್ತ ತಿಮ್ಮಪ್ಪ ಭಟ್ಟ, ವಿಶ್ವೇಶ್ವರ ಭಟ್ಟ, ನಿರಂಜನ್ ವಾನಳ್ಳಿ, ಪರಮೇಶ್ವರ್ ಗುಂಡ್ಕಲ್, ಸಾಹಿತಿಗಳಲ್ಲಿ ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಡಾ. ಕೃಷ್ಣಾನಂದ ಕಾಮತ್, ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ, ವಿವೇಕ್ ಶಾನಭಾಗ.. ಸುಪ್ರಸಿದ್ಧರು.

ಸಮಸ್ಯೆಗಳು: ಕೃಷಿ ಸಂಬಂಧಿಸಿದ ಸಮಸ್ಯೆಗಳು, ಮೆಡಿಕಲ್ ಕಾಲೇಜು, ಆಸ್ಪತ್ರೆ ಕೊರತೆ, ರಸ್ತೆ, ನೀರು, ಕಡಲ್ಕೊರೆತ, ಒಕ್ಕಲು ಸಮಸ್ಯೆ, ಎಲ್ಲಕ್ಕಿಂತ ಬಹುಮುಖ್ಯ ಸಮಸ್ಯೆ ಎಂದರೆ ಜನ ಸಂಪರ್ಕ. ಒಂದು ಮನೆಯಿಂದ ಮತ್ತೊಂದು ಮನೆಗೆ ಸಾಗಲು ಸಂಪರ್ಕವೇ ಇರುವುದಿಲ್ಲ. ರಸ್ತೆ ಸೌಕರ್ಯ ತಾಲೂಕುಗಳಿಂದ ಹೊರ ಭಾಗಕ್ಕೆ ಹೆಚ್ಚಾಗಿದ್ದು, ಒಳ ನಾಡು ಸಾರಿಗೆ ಸಂಪೂರ್ಣ ವೈಫಲ್ಯ ಕಂಡಿದೆ. ಕಾಯಿ ಕಸಲೆ ಬಂದರೆ ನೆರೆ ಹೊರೆ ನೆರವು ಬೇಕೆಂದರೆ ಸಿಗುವುದೇ ಕಷ್ಟ. ಈಗ ಎಲ್ಲರ ಕೈಲಿ ಮೊಬೈಲ್ ಫೋನ್ ಇದ್ದರೂ ನೆಟ್ವರ್ಕ್ ಇರುವುದಿಲ್ಲ.

ಫ್ಲಾಶ್ ಬ್ಯಾಕ್:
ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) : 1,17,702 ಮತಗಳು
ಹಳಿಯಾಳ: ಸುನಿಲ್ ವಿ ಹೆಗ್ಡೆ(ಜೆಡಿಎಸ್) 99,391 ಮತಗಳು
ಭಟ್ಕಳ: ಜೆಡಿ ನಾಯಕ್ (ಕಾಂಗ್ರೆಸ್) 1,09,740 ಮತಗಳು
ಕುಮಟಾ: ದಿನಕರ್ ಕೇಶವ್ ಶೆಟ್ಟಿ(ಜೆಡಿಎಸ್) 1,07,065 ಮತಗಳು
ಕಾರವಾರ: ಅಸ್ನೋಟಿಕರ್ ಆನಂದ್ ವಸಂತ್ (ಬಿಜೆಪಿ) 1,16,199 ಮತಗಳು
ಯಲ್ಲಾಪುರ: ವಿಎಸ್ ಪಾಟೀಲ್(ಬಿಜೆಪಿ) 1,04,402 ಮತಗಳು
ಕಿತ್ತೂರು: ಮಾರಿಹಾಳ ಸುರೇಶ್ ಶಿವರುದ್ರಪ್ಪ(ಬಿಜೆಪಿ) 1,11,725 ಮತಗಳು
ಖಾನಪುರ: ಪ್ರಹ್ಲಾದ್ ರೆಮಾಣಿ(ಬಿಜೆಪಿ) 1,14,450 ಮತಗಳು

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly Election 2013 : Uttara Kannada District Assembly Constituency Profiles. Uttara Kannada district consists 8 Assembly constituencies: Haliyal, Karwar, Kumta, Bhatkal, Sirsi, Yellapur, Kittur and Khanapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X