ಕಾಂಗ್ರೆಸಿಗೆ ತೆಲೆನೋವಾಗಿರುವ ನಗರದ 10 ಕ್ಷೇತ್ರಗಳು
ಬೆಂಗಳೂರು, ಏ 6: ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಳೆದ ಹದಿನೈದು ದಿನಗಳಿಂದ ಗೊಂದಲದ ಗೂಡಾಗಿದ್ದ ಕಾಂಗ್ರೆಸ್ ಕೊನೆಗೂ ತನ್ನ ಮೊದಲ 177 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ( ಏ 5) ಬಿಡುಗಡೆಗೊಳಿಸಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 28 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 18 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಗಿಸಿದೆ. ಗೊಂದಲ ಮತ್ತು ಟಿಕೆಟಿಗಾಗಿ ತೀವ್ರ ಪೈಪೋಟಿಯಿರುವ ಹತ್ತು ಕ್ಷೇತ್ರಗಳಿಗೆ ಅಂತಿಮ ಆಯ್ಕೆಯ ವಿಚಾರ ಹೈಕಮಾಂಡಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ನಿಷ್ಠಾವಂತರು ಮತ್ತು ಘಟಾನುಘಟಿಗಳು ಟಿಕೆಟ್ ಬಯಸುತ್ತಿರುವುದೇ ಇದಕ್ಕೆ ಕಾರಣ. ಟಿಕೆಟ್ ಬಯಸುವವರ ಹಿಂದೆ ಪ್ರಭಾವಿ ರಾಜಕಾರಿಣಿಗಳು ಲಾಬಿ ನಡೆಸುತ್ತಿರುವುದು ಅಂತಿಮ ಆಯ್ಕೆ ಕಸರತ್ತಿಗೆ ಮತ್ತಷ್ಟು ಹಿನ್ನಡೆಯಾಗುತ್ತಿದೆ.
ಹೀಗಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮನದ ನಂತರ ಈ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ.
ಕಾಂಗ್ರೆಸ್ 177 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರಾಜರಾಜೇಶ್ವರಿ ನಗರ
ಹಾಲಿ ಕಾಂಗ್ರೆಸ್ ಕಾರ್ಪೋರೇಟರ್ ಮತ್ತು ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನಂ ನಾಯ್ಡು ಮತ್ತು ಕೃಷ್ಣಮೂರ್ತಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಹೆಬ್ಬಾಳ
ಜಾಫರ್ ಷರೀಫ್ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಮತ್ತು ಎಚ್ ಎಂ ರೇವಣ್ಣ ನಡುವೆ ಟಿಕೆಟಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.

ಬೆಂಗಳೂರು ದಕ್ಷಿಣ
ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ತೇಜಸ್ವಿನಿ ಗೌಡ ಮತ್ತು ಡಿ ಕೆ ಶಿವಕುಮಾರ್ ನಡುವಣ ವಿರಸದಿಂದ ಅಂತಿಮ ಹಂತದಲ್ಲಿ ತೇಜಸ್ವಿನಿ ಗೌಡ ಅವರ ಹೆಸರು ಪ್ರಕಟಿತ ಅಭ್ಯರ್ಥಿಗಳ ಪಟ್ಟಿಯಲ್ಲಿರಲಿಲ್ಲ. ತೇಜಸ್ವಿನಿ ಗೌಡಗೆ ಯಾವ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಪಕ್ಷದೊಳಗೆ ಭಾರೀ ಒತ್ತಡ ಬರುತ್ತಿದೆ.

ಪದ್ಮನಾಭ ನಗರ
ಧರಂ ಸಿಂಗ್ ಅವರ ನಿಷ್ಠರಾದ ಗುರಪ್ಪ ನಾಯ್ಡು ಮತ್ತು ಮಾಜಿ ಶಾಸಕ ಎಲ್ ಆರ್ ಶಿವರಾಮೇ ಗೌಡ ಪುತ್ರ ಚೇತನ್ ಗೌಡ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.

ಮಲ್ಲೇಶ್ವರ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ತನ್ನ ಸಹೋದರ ಬಿ ಕೆ ಶಿವರಾಂಗೆ ಶತಾಯುಗತಾಯು ಟಿಕೆಟ್ ಹರಸಾಹಸ ಪಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಒಗ್ಗಟ್ಟಿನ ವಿಚಾರದಲ್ಲಿ ಐಕ್ಯತೆ ಮೂಡದ ಹಿನ್ನಲೆಯಲ್ಲಿ ಮೊದಲ ಪಟ್ಟಿಯಲ್ಲಿ ಇವರ ಹೆಸರು ಮಿಸ್ ಆಗಿ ಹೋಲ್ಡ್ ನಲ್ಲಿದೆ.

ಚಿಕ್ಕಪೇಟೆ, ಸಿ ವಿ ರಾಮನ್ ನಗರ, ಜಯನಗರ, ಚಾಮರಾಜಪೇಟೆ, ಕೆ ಆರ್ ಪುರಂ
ಸಿ ವಿ ರಾಮನ್ ನಗರದಲ್ಲಿ ರಮೇಶ್, ಚಿಕ್ಕಪೇಟೆಯಿಂದ ಜಿ ಎ ಬಾವಾ, ಜಯನಗರದಲ್ಲಿ ವೇಣುಗೋಪಾಲ್ ಸಂಭಾವ್ಯ ಅಭ್ಯರ್ಥಿಗಳಾದರೂ ಇವರು ಒಮ್ಮತದ ಅಭ್ಯರ್ಥಿಗಳಾಗದ ಹಿನ್ನಲೆಯಲ್ಲಿ ಅಂತಿಮ ಆಯ್ಕೆ ಹೈಕಮಾಂಡ್ ಮುಂದೂಡಿದೆ. ಚಾಮರಾಜಪೇಟೆ, ಕೆ ಆರ್ ಪುರಂ ಕ್ಷೇತ್ರದಲ್ಲೂ ಇದೇ ಸಮಸ್ಯೆ.












Click it and Unblock the Notifications